Dailyhunt Logo
  • Light mode
    Follow system
    Dark mode
    • Play Story
    • App Story
Web Exclusive: ಬೆಟ್ಟದಲ್ಲಿ ಜೀವಂತ ಶಿಲ್ಪದಂತೆ ಕೆತ್ತಿದ 'ಸ್ಲೀಪಿಂಗ್ ಬುದ್ಧ'

Web Exclusive: ಬೆಟ್ಟದಲ್ಲಿ ಜೀವಂತ ಶಿಲ್ಪದಂತೆ ಕೆತ್ತಿದ 'ಸ್ಲೀಪಿಂಗ್ ಬುದ್ಧ'

ಹಾಪುರ (ಯಾದಗಿರಿ ಜಿಲ್ಲೆ): ಮನಕುಲಕ್ಕೆ ಶಾಂತಿಯ ಜತೆಯಲ್ಲಿ 'ಆಸೆಯೇ ದುಃಖಕ್ಕೆ ಮೂಲ' ಎಂಬ ತತ್ವ ಬೋಧಿಸಿದ್ದ ಬುದ್ಧನ ಕಾರುಣ್ಯಕ್ಕೆ ಮನಸೋತ ಪ್ರಕೃತಿಯೇ ಬೆಟ್ಟದಲ್ಲಿ ಬುದ್ಧನನ್ನು ಒಂದು ಜೀವಂತ ಶಿಲ್ಪದಂತೆ ಕಾಣುವ 'ಸ್ಲೀಪಿಂಗ್ ಬುದ್ಧ'ನನ್ನು (ಮಲಗಿರುವ ಬುದ್ಧನ ಆಕೃತಿಯ ಬೆಟ್ಟ) ಕೆತ್ತಿದಂತೆ ಇದೆ.

ಬುದ್ಧ ಬೆಟ್ಟದ ಕಲ್ಲು- ಬಂಡೆಗಳಲ್ಲಿದ್ದರೂ ಅವನ ಮುಖದಲ್ಲಿನ ಜೀವಂತವಾದ ಮೌನ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬೆಟ್ಟದ ಬಂಡೆ ಸಾಲುಗಳ ಮೇಲೆ ಜೀವಪರವಾದ ಬುದ್ಧನ ದೃಶ್ಯಗಳು ನೋಡುಗರ ಒಳಗೆ ಇಳಿದರೆ ಶೂನ್ಯತೆ, ನಿರ್ವಾಣದ ಅತೀತೆಯನ್ನೂ ಸೂಚಿಸುತ್ತವೆ.

ರಾಷ್ಟ್ರೀಯ ಹೆದ್ದಾರಿ 150ಎ ಶಹಾಪುರ- ಭೀಮರಾಯನಗುಡಿ ಮಧ್ಯದ 2 ಕಿ.ಮೀ ಅಂತರದಲ್ಲಿ ಹೆದ್ದಾರಿ ಮೇಲೆ ಸಾಗುತ್ತಿದ್ದರೆ, ಅಂದರೆ ಶಹಾಪುರ ಕಡೆಯಿಂದ ಭೀಮರಾಯನಗುಡಿ ಕಡೆ ತೆರಳಿದರೆ ಎಡಗಡೆ ತುಸು ಕಣ್ಣಗಲಿಸಿ ನೋಡಿದರೆ ಸುಮಾರು ಅರ್ಧ ಕಿ.ಮೀ . ದೂರದ ಎತ್ತರದಲ್ಲಿ ಬೆಟ್ಟದ ಸಾಲು ಕಾಣುತ್ತದೆ.

ಆಗ ನಿಧಾನವಾಗಿ ನಮ್ಮ ಮನದೊಳಗೆ ಬುದ್ದನ ಚಿತ್ರವನ್ನು ಕಲ್ಪಿಸಿಕೊಂಡು ಸಾಲು ಬೆಟ್ಟದ ಮೇಲೆ ಕಣ್ಣು ತೆರೆಯುತ್ತಾ ನೋಡುತ್ತಾ ಸಾಗುತ್ತಿದ್ದಂತೆ ಕಲ್ಲು ಬಂಡೆಗಳ ನಡುವೆ ಬುದ್ದನ ಕಿವಿ, ಮೂಗು, ದೇಹ, ಮಲಗಿದಂತೆ ಕಾಣುತ್ತಾ ನಮಗೆ ಅರಿವಿಲ್ಲದಂತೆ ಬುದ್ದ ನಮ್ಮೂಳಗೆ ಮೂಡುತ್ತಾನೆ. ಆಗ ಮನಕ್ಕೆ ಏನೊ ಪಡೆದ ಖುಷಿಯೋ ಆಗುತ್ತದೆ.

ಕಲಿತವರು ಹಾಗೂ ಬುದ್ಧನ ಭಾವಚಿತ್ರವನ್ನು ನೋಡಿದವರಿಗೆ ಬುದ್ಧನ ಚಿತ್ರದ ಕಲ್ಪನೆ ನೋಡುಗರ ಕಣ್ಣಲ್ಲಿ ಬಂದಾಗ ಮಾತ್ರ ಅದರ ಸ್ಪಷ್ಟತೆಯಾಗುತ್ತದೆ ಹೊರತು, ಅಲ್ಲಿ ಕೇವಲ ಬಂಡೆಗಳ ಸಾಲು ಕಾಣುತ್ತವೆ. ಸಂಪ್ರದಾಯ: ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಇಲ್ಲಿನ ಪ್ರದೇಶದ ಜನತೆಯು ಸಾಮಾನ್ಯವಾಗಿ ಬುದ್ಧ ಮಲಗಿದ ದೃಶ್ಯದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯವಾಗಿದೆ. ಶಾಂತಿ ಹಾಗೂ ಸೌಹಾರ್ದ ನೆಲದ ಬುದ್ಧ ಇದ್ದಾನೆ ಎಂಬ ನಂಬಿಕೆ ಇಲ್ಲಿನ ಜನತೆಯಲ್ಲಿ ಗಾಢವಾದ ಭರವಸೆಯೂ ಇದೆ.

ಶಹಾಪುರ ಭೀಮರಾಯನಗುಡಿ ಮಧ್ಯದಲ್ಲಿ ನಿಸರ್ಗದ ಬೆಟ್ಟದ ಸಾಲುಗಳ ಮೇಲೆ ಮಲಗಿರುವ ಬುದ್ಧನ ದೃಶ್ಯ

ಶೋಧದ ತುಡಿತದ ಹಿನ್ನೆಲೆ

1972ರಲ್ಲಿ ಸುರಪುರದ ರಂಗರಾವ ಬಡಶೇಷಿ ಅವರು ಅಂದಿನ ಗುಲಬರ್ಗಾದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕ ಅಧಿಕಾರಿ ಎಂದು ಕೆಲಸ ನಿರ್ವಹಿಸುತ್ತಿದ್ದರು. ತಮ್ಮೂರಿಗೆ(ಸುರಪುರ) ಪ್ರಯಾಣಿಸುತ್ತಿದ್ದಾಗ ಪ್ರತಿ ಬಾರಿ ಗುಡ್ಡದ ಕಡೆ ಕಣ್ಣು ಹಾಯಿಸುತ್ತಾ ಇದ್ದಾಗ ಜಗಕ್ಕೆ ಅಹಿಂಸೆಯ ಬೋಧನೆ ನೀಡಿದ ನಮ್ಮೊಳಗಿನ ಬುದ್ಧನ ಬಂಡೆ ಕಲ್ಲುಗಳ ಮೇಲೆ ಮಲಗಿದ್ದಾನೆ ಎಂದು ಪರಿಚಯಿಸಿದರು. ಆಗ ಅಂದಿನ ಪುರಸಭೆಯು ಬುದ್ಧ ಮಲಗಿದ ದೃಶ್ಯವನ್ನು ನೋಡುವ ಸ್ಥಳದಲ್ಲಿ ನಾಮಫಲಕ ಹಾಕಿತ್ತು.

ಅಭಿವೃದ್ಧಿಗೆ ಮುನ್ನುಡಿ: ಬುದ್ಧ ಮಲಗಿದ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸರ್ವೆ ನಂಬರ್ 430/2ರಲ್ಲಿ 3.37 ಗುಂಟೆ 431/3ರಲ್ಲಿ 28 ಗುಂಟೆ ಹೀಗೆ ಒಟ್ಟು 4.28 ಗುಂಟೆ ವಶಪಡಿಸಿಕೊಂಡು ಅಭಿವೃದ್ಧಿಗೆ ಚಾಲನೆ ನೀಡಲಾಯಿತು. ಅದರಂತೆ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು ₹4 ಕೋಟಿ ಅನುದಾನದಲ್ಲಿ 2015 ಆಗಸ್ಟ್ 8ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಮೊದಲ ಹಂತವಾಗಿ ₹1.64 ಕೋಟಿ ಅನುದಾನ ಬಿಡುಗಡೆಗೊಳಿಸಿ ಬೆಂಗಳೂರಿನ ದಿ.ನರ್ಸರಿಮೇನ್ ಕೋಆಪರೇಟಿವ್ ಸಂಸ್ಥೆಗೆ ಕಾಮಗಾರಿ ನಿರ್ವಹಣೆಗೆ ಆದೇಶ ನೀಡಿತ್ತು.

ವಿಚಿತ್ರವೆಂದರೆ ಕಾಮಗಾರಿ ಪೂರ್ಣಗೊಳ್ಳದೆ ಇದ್ದರು ಸಂಸ್ಥೆಗೆ ₹75.90ಲಕ್ಷ ಪಾವತಿ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ, ಅಲ್ಲಿನ ಪ್ರದೇಶದಲ್ಲಿ ವೀಕ್ಷಣೆ ಗೋಪುರ, ಆಸನಗಳ ವ್ಯವಸ್ಥೆ, ಉದ್ಯಾನವನ, ಪಾದಾಚಾರಿಗಳಿಗೆ ಸಮರ್ಪಕವಾದ ರಸ್ತೆ ನಿರ್ಮಿಸಬೇಕಾಗಿದೆ. ಆದರೆ, ನೋವಿನ ಸಂಗತಿಯೆಂದರೆ ಹೆದ್ದಾರಿಗೆ ಹೊಂದಿಕೊಂಡು ವೀಕ್ಷಣೆಯ ಗೋಪುರದ ನಾಮಫಲಕ್ಕೆ ಹೊಂದಿಕೊಂಡು ಖಾಸಗಿ ಜಮೀನು ಮಾಲೀಕತ್ವದ ವ್ಯಕ್ತಿ ಒಬ್ಬರು ಗ್ರಾನೈಟ್ ಮಾರಾಟದ ಮಳಿಗೆ ಸ್ಥಾಪಿಸಿದ್ದಾರೆ. ಇದರಿಂದ ಹೆದ್ದಾರಿಗೆ ಸಾಗುವಾಗ ಕಾಣುತ್ತಿದ್ದ ಬುದ್ದ ಮಲಗಿದ ದೃಶ್ಯ ಕಣ್ಮರೆಯಾಗಿದೆ. ಇದರ ಬಗ್ಗೆ ದಲಿತರ ಸಂಘಟನೆಗಳು ಹಾಗೂ ಪ್ರಗತಿಪರರು ಸಾಕಷ್ಟು ಹೋರಾಟ ನಡೆಸುತ್ತಿದ್ದರು ಇಲ್ಲಿ ನಗಣ್ಯವಾಗಿದೆ.

ಬುದ್ಧ ಮಲಗಿದ ದೃಶ್ಯಕ್ಕೆ ಮರು ಜೀವ ನೀಡಬೇಕಾದರೆ ಖಾಸಗಿ ವ್ಯಕ್ತಿ ಸ್ಥಾಪಿಸಿರುವ ಶೆಡ್ ತೆರವುಗೊಳಿಸಬೇಕು. ಅಲ್ಲದೆ ಅಲ್ಲಿನ ಪ್ರದೇಶದಲ್ಲಿ ಯಾವುದೇ ಕಟ್ಟಡ ಇಲ್ಲವೆ ಮಳಿಗೆ ತಲೆ ಎತ್ತದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಗರಸಭೆಯ ಹೆಗಲ ಮೇಲಿದೆ.

ಇನ್ನೊಂದು ಅಚ್ಚರಿ: ಕಲ್ಲು ಬಂಡೆಗಳ ಮಧ್ಯದಲ್ಲಿ ಮಗಲಿದ ಬುದ್ಧನ ಪಕ್ಕದಲ್ಲಿಯೇ ಅಂದಿನ ನಿಜಾಮರ ಆಳ್ವಿಕೆಯಲ್ಲಿ ಮಾವಿನ ಕೆರೆ ನಿರ್ಮಿಸಲಾಗಿತ್ತು. ಬೆಟ್ಟದ ಇಳಿಜಾರಿನಿಂದ ಹರಿದು ಬರುವ ನೀರು ಮಾವಿನ ಕೆರೆಯ ಒಡಲು ಸೇರಿಕೊಳ್ಳುತ್ತದೆ. ಈಗಾಗಲೇ ಮಾವಿನ ಕೆರೆ ಅಭಿವೃದ್ಧಿಗೆ ಹಾಗೂ ಕೆರೆಗ ನೀರು ತುಂಬಿಸುವ ಯೋಜನೆ ಭಾಗವಾಗಿ ₹4 ಕೋಟಿ ಅನುದಾನ ಬಂದಿದೆ.

ಕೆರೆಯಲ್ಲಿ ನೀರು ಸಂಗ್ರಹಿಸಿ ಬೊಟಿಂಗ್ ವ್ಯವಸ್ಥೆ ಮಾಡುವ ಆಲೋಚನೆ ನಗರಸಭೆಗೆ ಇದೆ. ಅಲ್ಲದೆ ತುಸು ಅಣತಿ ದೂರದಲ್ಲಿ ಈಗಾಗಲೇ ಬೆಟ್ಟದ ಮೇಲೆ ಬುದ್ದ ವಿಹಾರ ನಿರ್ಮಿಸಿದ್ದಾರೆ. ಹೀಗೆ ಬುದ್ಧ ಮಲಗಿದ ಪ್ರದೇಶದಲ್ಲಿ ಸಾಕಷ್ಟು ಪ್ರವಾಸೋದ್ಯಮಕ್ಕೆ ಅನುಕೂಲವಿದೆ. ಆದರೆ ಅದನ್ನು ಅನುಷ್ಠಾನಗೊಳಿಸುವ ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಇಲ್ಲದೆ ಇರುವುದು ಬೇಸರ ಉಂಟು ಮಾಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani