Dailyhunt
West Bengal Election: ಮತದಾರರನ್ನು ಪ್ರಭಾವಿಸಿರಬಹುದಾದ 10 ಪ್ರಮುಖ ಅಂಶಗಳು

West Bengal Election: ಮತದಾರರನ್ನು ಪ್ರಭಾವಿಸಿರಬಹುದಾದ 10 ಪ್ರಮುಖ ಅಂಶಗಳು

ಶ್ವಿಮ ಬಂಗಾಳ ವಿಧಾನಸಭೆಯ 152 ಕ್ಷೇತ್ರಗಳಲ್ಲಿ ಮೊದಲ ಹಂತದ ಮತ್ತು ತಮಿಳುನಾಡಿನ ಎಲ್ಲ ಕ್ಷೇತ್ರಗಳಲ್ಲೂ ಇಂದು ಮತದಾನ ನಡೆಯುತ್ತಿದೆ. ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಚುನಾವಣೆಯು ಅತ್ಯಂತ ವಿಭಿನ್ನ ಏಕೆಂದರೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಸೋಲು ಸೇರಿದಂತೆ ಬಹಳಷ್ಟು ವಿಷಯಗಳು ಈ ಚುನಾವಣೆಗಳ ಮೇಲೆ ಪ್ರಭಾವ ಬೀರಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರ ಉಳಿಸಿಕೊಳ್ಳುವ ಪಣಕೊಟ್ಟಿದ್ದರೆ, ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ದೀದಿಗೆ ಸೋಲುಣಿಸುವ ಹಠದಲ್ಲಿದೆ. ಬಂಗಾಳದಲ್ಲಿ ಈ ಬಾರಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ಬಹಳಷ್ಟು ಪ್ರಭಾವ ಬೀರಿದೆ. ಅಕ್ರಮ ವಲಸಿಗರು ಸೇರಿದಂತೆ ಹತ್ತಾರು ಲಕ್ಷ ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇದು ಎಷ್ಟರಮಟ್ಟಿಗೆ ಪ್ರಬಾವ ಬೀರಲಿದೆ ಎಂಬುದೇ ಈಗಿರುವ ಕುತೂಹಲವಾಗಿದೆ.

ಪಶ್ಚಿಮ ಬಂಗಾಳ ಪ್ರಭಾವ ಬೀರರಬಹುದಾದ ಪ್ರಮುಖ ಅಂಶಗಳು

1 ಎಸ್‌ಐಆರ್ ವಿವಾದ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್‌ಐಆರ್) ನಂತರದ ಮತದಾರರ ಪಟ್ಟಿಯ ಪ್ರಕಟಣೆಯು ರಾಜ್ಯದಲ್ಲಿ ಚುನಾವಣಾ ಪೂರ್ವದ ಅತ್ಯಂತ ಮಹತ್ವದ ಬೆಳವಣಿಗೆಗಳಲ್ಲಿ ಒಂದಾಗಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಪಟ್ಟಿಯಿಂದ ಸುಮಾರು 91 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಮತದಾರರ ಸಂಖ್ಯೆ 7.66 ಕೋಟಿಯಿಂದ 6.75 ಕೋಟಿಗೆ ಇಳಿದಿರುವುದರಿಂದ ಇದರ ಪರಿಣಾಮ ಎಷ್ಟರಮಟ್ಟಿಗೆ ಇರಲಿದೆ ಎಂಬುದೇ ಸದ್ಯದ ಕುತೂಹಲವಾಗಿದೆ.

ಈ ಬದಲಾವಣೆಯು ರಾಜಕೀಯ ಪಕ್ಷಗಳು ತಮ್ಮ ಬೂತ್ ಮಟ್ಟದ ಕಾರ್ಯತಂತ್ರಗಳನ್ನು ಬದಲಿಸುವಂತೆ ಮಾಡಿದೆ. ಜಿದ್ದಾಜಿದ್ದಿನ ಹಣಾಹಣಿ ನಡೆಯುತ್ತಿದ್ದ ಗಡಿ ಜಿಲ್ಲೆಗಳು, ನಗರ ಪ್ರದೇಶಗಳಲ್ಲೇ ಅತಿ ಹೆಚ್ಚು ಹೆಸರು ಅಳಿಸಲಾಗಿದ್ದು, ಈ ಪ್ರದೇಶಗಳ ಮೇಲೆ ಗಮನ ನೆಟ್ಟಿದೆ.

2. ಬಂಗಾಳಿ ಭಾಷಿಕರೇ ಗುರಿ ಆರೋಪ

ಎಸ್‌ಐಆರ್‌ ಬರುವ ಮೊದಲು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ವಲಸಿಗರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಟಿಎಂಸಿ ಬೀದಿಗಳಲ್ಲಿ, ನ್ಯಾಯಾಲಯಗಳಲ್ಲಿ ಮತ್ತು ಸಂಸತ್ತಿನಲ್ಲಿ ಹೋರಾಟ ನಡೆಸಿತ್ತು. ವಲಸಿಗರ ಬಂಧನ ಮತ್ತು ಗಡೀಪಾರು ಆರೋಪದ ಮೇಲೆ ಬಿಜೆಪಿಯನ್ನು ಟೀಕಿಸಿದ್ದ ಮಮತಾ, ಬಾಂಗ್ಲಾದೇಶೀಯರು ಎಂಬ ಅನುಮಾನದ ಮೇಲೆ ದೇಶದಾದ್ಯಂತ ಬಂಗಾಳದ ವಲಸಿಗರಿಗೆ ಚಿತ್ರಹಿಂಸೆ, ಬಂಧನ ಮತ್ತು ಗಡೀಪಾರು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

3. ಅಕ್ರಮ ಒಳನುಸುಳುವಿಕೆ

ಬಿಜೆಪಿ ತನ್ನ ಪ್ರಚಾರದ ಉದ್ದಕ್ಕೂ ಟಿಎಂಸಿ ಅಕ್ರಮ ವಲಸಿಗರಿಗೆ ರಹದಾರಿ ಮಾಡಿಕೊಟ್ಟಿದೆ ಎಂದು ಟೀಕಿಸಿತ್ತು. ಅದನ್ನೇ ತನ್ನ ಪ್ರಚಾರದ ಪ್ರಮುಖ ಭಾಗವಾಗಿಸಿಕೊಂಡಿತ್ತು. ಇದರಿಂದ ರಾಜ್ಯದ ಡೆಮಾಗ್ರಫಿ ಬದಲಾಗಿದ್ದು,ಅಶಾಂತಿಗೆ ಕಾರಣವಾಗಿದೆ ಎಂದು ಆರೋಪಿಸಿತ್ತು.

ಎಸ್‌ಐಆರ್‌ ಅನ್ನು ರಾಜ್ಯದಲ್ಲಿ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನುಗುರುತಿಸುವ ಪ್ರಯತ್ನವೆಂದು ಬಿಂಬಿಸಿತ್ತು. ಪ್ರತಿಯಾಗಿ ಟಿಎಂಸಿ, ಅದನ್ನು ರಾಜಕೀಯ ಪ್ರೇರಿತ ಎಂದು ತಿರಸ್ಕರಿಸಿತ್ತು. ಇದು ಮುಸ್ಲಿಂ ನಾಗರಿಕರನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಕೃತ್ಯ ಎಂದು ದೂಷಿಸಿತ್ತು.

4. ಮಥುವಾ ಅಂಶ

ಬಂಗಾಳದಾದ್ಯಂತ ಸುಮಾರು 50 ವಿಧಾನಸಭಾ ಸ್ಥಾನಗಳಲ್ಲಿ ನಿರ್ಣಾಯಕ ಪ್ರಭಾವ ಹೊಂದಿರುವ ಪರಿಶಿಷ್ಟ ಜಾತಿಯ ಹಿಂದೂ ನಿರಾಶ್ರಿತ ಸಮುದಾಯವಾದ ಮಥುವಾ, ಪ್ರಚಾರದ ಉದ್ದಕ್ಕೂ ಪ್ರಮುಖ ಚುನಾವಣಾ ಅಂಶವಾಗಿತ್ತು. 2021ರ ವಿಧಾನಸಭಾ ಚುನಾವಣೆಯಲ್ಲಿ ಈ ಸಮುದಾಯದ ಪ್ರಾಬಲ್ಯ ಇರುವ ಸ್ಥಾನಗಳಳ ಪೈಕಿ ಹೆಚ್ಚಿನವುಗಳಲ್ಲಿ ಬಿಜೆಪಿ ಗೆದ್ದಿತ್ತು. ಹಾಗಾಗಿಯೇ ಬಿಜೆಪಿ 77 ಸ್ಥಾನಗಳನ್ನು ಪಡೆದಿತ್ತು. ಎಸ್‌ಐಆರ್ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಅಳಿಸಿಹಾಕಿದ್ದು, ಮಥುವಾ ಬಹುಸಂಖ್ಯಾತ ಪ್ರದೇಶಗಳಲ್ಲಿ ಮತದಾರರನ್ನು ಅಸ್ಥಿರಗೊಳಿಸಿವೆ.

5. ಭ್ರಷ್ಟಾಚಾರ

ಟಿಎಂಸಿ ಆಡಳಿತದ ವಿರುದ್ಧ ವಿರೋಧ ಪಕ್ಷಗಳು ಎತ್ತಿದ ಭ್ರಷ್ಟಾಚಾರದ ಆರೋಪಗಳು ಪ್ರಚಾರದ ಉದ್ದಕ್ಕೂ ಬಂಗಾಳದ ರಾಜಕೀಯ ಚರ್ಚೆಯಲ್ಲಿ ಪ್ರಾಬಲ್ಯ ಸಾಧಿಸುತ್ತಲೇ ಇದ್ದವು, ಶಾಲಾ ಉದ್ಯೋಗ ಹಗರಣವು ಪ್ರಮುಖ ವಿಷಯವಾಗಿತ್ತು. ರಾಜ್ಯ ಶಾಲಾ ಸೇವಾ ಆಯೋಗವು ನೇಮಕ ಮಾಡಿಕೊಂಡ 25,000ಕ್ಕೂ ಹೆಚ್ಚು ಶಿಕ್ಷಕರು ಮತ್ತು ಸಿಬ್ಬಂದಿಗಳ ನೇಮಕಾತಿಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ನ ನಿರ್ಧಾರ ಆಡಳಿತ ಪಕ್ಷವನ್ನು ಗುರಿಯಾಗಿಸಲು ವಿರೋಧ ಪಕ್ಷಗಳಿಗೆ ಅಸ್ತ್ರ ಒದಗಿಸಿತ್ತು.

ಭ್ರಷ್ಟಾಚಾರದ ಆರೋಪಗಳ ಜೊತೆಗೆ, ನಿರಂತರ ಉದ್ಯೋಗ ಬಿಕ್ಕಟ್ಟು, ಹೂಡಿಕೆಯ ಬಗ್ಗೆ ಕಳವಳಗಳು ಮಮತಾ ಬ್ಯಾನರ್ಜಿ ಸರ್ಕಾರ ಎದುರಿಸುತ್ತಿರುವ ವಿಶಾಲವಾದ ಆಡಳಿತ ವಿರೋಧಿ ಅಲೆಗೆ ಕಾರಣವಾಗಿದೆ.

6. ಧರ್ಮ ಮತ್ತು ಧೃವೀಕರಣ

ಧರ್ಮಾಧರಿತ ಧೃವೀಕರಣವು ಪಶ್ಚಿಮ ಬಂಗಾಳದಲ್ಲಿ ಸುಪ್ತವಾಗಿ ಕೆಲಸ ಮಾಡುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಎರಡೂ ಕಡೆಯವರು ಈ ಬಗ್ಗೆ ಪರಸ್ಪರ ಆರೋಪ ಮಾಡಿದ್ದಾರೆ, ಟಿಎಂಸಿ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದರೆ, ಬಿಜೆಪಿಯು ಧರ್ಮಾಧರಿತ ವಿಭಜನೆಯನ್ನು ಪ್ರಚೋದಿಸುತ್ತಿದೆ ಎಂದು ಟಿಎಂಸಿ ಆರೋಪಿಸಿದೆ.

7. ಕಾನೂನು ಮತ್ತು ಸುವ್ಯವಸ್ಥೆ/ಮಹಿಳಾ ಸುರಕ್ಷತೆ

ಕಾನೂನು ಮತ್ತು ಸುವ್ಯವಸ್ಥೆಯ ವಿಷಯ, ವಿಶೇಷವಾಗಿ ಮಹಿಳಾ ಸುರಕ್ಷತೆ ಬಂಗಾಳದಲ್ಲಿ ಪ್ರಚಾರದ ಉದ್ದಕ್ಕೂ ಪ್ರಮುಖ ಪ್ರಚಾರದ ಅಂಶವಾಗಿ ಉಳಿದಿತ್ತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳಿಂದ ತೀಕ್ಷ್ಣವಾದ ಮಾತಿನ ಚಕಮಕಿ ನಡೆದಿದೆ. ಸರ್ಕಾರವು ಅಧಿಕೃತ ಡೇಟಾ ಮೂಲಕ ಮೀಸಲಾದ ಮಹಿಳಾ ಪೊಲೀಸ್ ಠಾಣೆಗಳು, ಹೆಚ್ಚಿದ ರಾತ್ರಿ ಗಸ್ತು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಸಹಾಯವಾಣಿಗಳಂತಹ ಕ್ರಮಗಳನ್ನು ಎತ್ತಿ ತೋರಿಸಿದರೆ, ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ, ಕೊಲೆಯಂತಹ ಘಟನೆಗಳನ್ನು ಬಿಜೆಪಿ ದೊಡ್ಡದಾಗಿ ಪ್ರಚಾರ ಮಾಡಿದೆ. ರಾಜ್ಯದಲ್ಲಿ ಹಲ್ಲೆ, ಕಿರುಕುಳ ಮತ್ತು ಕಳ್ಳಸಾಗಣೆ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂದು ವಿರೋಧ ಪಕ್ಷಗಳು ಪದೇ ಪದೇ ವಾದಿಸಿವೆ.

8. ಮಹಿಳಾ ಮೀಸಲಾತಿ

ಪ್ರಚಾರದ ಅಂತಿಮ ಹಂತದಲ್ಲಿ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ವಿಷಯವು ಒಂದು ಪ್ರಮುಖ ಪ್ರಚಾರದ ವಿಷಯವಾಗಿ ಹೊರಹೊಮ್ಮಿತ್ತು. ಲೋಕಸಭೆಯಲ್ಲಿ ಮಹಿಳಾ ಕೋಟಾ ತಿದ್ದುಪಡಿ ಮಸೂದೆಯನ್ನು ತಡೆಯಲು ಟಿಎಂಸಿ ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಟಿಎಂಸಿ ಪಶ್ಚಿಮ ಬಂಗಾಳದ ಮಹಿಳೆಯರಿಗೆ ದ್ರೋಹ ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು.

ಈ ಆರೋಪವನ್ನು ತಳ್ಳಿ ಹಾಕಿದ ಟಿಎಂಸಿ, ತನ್ನ ಪಕ್ಷದ ಸಂಸದರಲ್ಲಿ ಶೇ 40ಕ್ಕಿಂತ ಹೆಚ್ಚು ಮಹಿಳೆಯರು, ಇದು ಸಂಸತ್ತಿನಲ್ಲಿ ಯಾವುದೇ ಪಕ್ಷಕ್ಕಿಂತ ಅತಿ ಹೆಚ್ಚು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 52 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಎಲ್ಲ ಪಕ್ಷಗಳಿಗಿಂತ ಅತ್ಯಧಿಕವಾಗಿದೆ ಎಂದು ತಿರುಗೇಟು ನೀಡತ್ತು.

9. ಕೈಗಾರಿಕೆ ಮತ್ತು ಉದ್ಯೋಗ

ಬಿಜೆಪಿ ತನ್ನ ಪ್ರಚಾರವನ್ನು ಪಶ್ಚಿಮ ಬಂಗಾಳದಲ್ಲಿ ಕೈಗಾರಿಕೆ ಕುಸಿತದ ಆರೋಪಗಳ ಮೇಲೆ ಪ್ರಮುಖವಾಗು ಕೇಂದ್ರೀಕರಿಸಿತ್ತು. ರಾಜ್ಯವು ಕೈಗಾರಿಕಾ ಸ್ಮಶಾನವಾಗಿದೆ ಎಂದು ಆರೋಪಿಸಿತ್ತು. ದೊಡ್ಡ ಪ್ರಮಾಣದಲ್ಲಿ ಕಂಪನಿಗಳ ನಿರ್ಗಮನ, ಹೂಡಿಕೆ ಕುಸಿತ ಮತ್ತು ಇತರ ರಾಜ್ಯಗಳಿಗೆ ಕಾರ್ಮಿಕರ ಸ್ಥಿರ ವಲಸೆಯನ್ನು ಪ್ರತಿಪಾದಿಸಿತ್ತು.

10. ಸಮಾಜ ಕಲ್ಯಾಣ ಯೋಜನೆಗಳು

ಟಿಎಂಸಿ ಸರ್ಕಾರ ಜಾರಿಗೆ ತಂದಿರುವ ಹಲವು ಸಮಾಜ ಕಲ್ಯಾಣ ಯೋಜನೆಗಳು ಅದರ ಪ್ರಚಾರದ ಕೇಂದ್ರಬಿಂದುವಾಗಿದ್ದವು. ನಿರುದ್ಯೋಗಿ ಯುವಕರು, ಮಹಿಳೆಯರು, ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ನಿರ್ಲಕ್ಷಿತರ ಏಳಿಗೆಗೆ ಕೈಗೊಂಡಿರುವ ಕ್ರಮಗಳು ಟಿಎಂಸಿಯ ಬಲವಾದ ಚುನಾವಣಾ ಪ್ರಚಾರದ ಅಸ್ತ್ರವಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani