ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುವುದರ ಜತೆಗೆ ರಾಜ್ಯದ ಹಲವೆಡೆ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಕಚೇರಿಗಳನ್ನು ಧ್ವಂಸಗೊಳಿಸಿದ್ದು, ಬೆಂಕಿ ಹಚ್ಚಿರುವ ಪ್ರಕರಣಗಳು ವರದಿಯಾಗಿವೆ.
ಟೋಲಿಗಂಜ್, ಕಮರ್ಹಟಿ, ಬಾರಾನಗರ, ಬಹರಾಂಪುರ, ಹೌರಾ ಮತ್ತು ಕಸ್ಬಾ ಪ್ರದೇಶದಲ್ಲಿರುವ ಟಿಎಂಸಿ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟೋಲಿಗಂಜ್‌ನ ಬಿಜೋಯ್‌ಗಢ್-ನೇತಾಜಿನಗರ ಪ್ರದೇಶದಲ್ಲಿ ಟಿಎಂಸಿ ಅಭ್ಯರ್ಥಿ, ಮಾಜಿ ಸಚಿವ ಅರೂಪ್ ಬಿಸ್ವಾಸ್ ಅವರ ಕಚೇರಿಯನ್ನು ಗುಂಪೊಂದು ಧ್ವಂಸಗೊಳಿಸಿದೆ. ಅಲ್ಲಿಂದ ತೆರಳುವ ಮೊದಲು ಗುಂಪಿನಲ್ಲಿದ್ದ ಕೆಲವರು ಮುರಿದು ಬಿದ್ದಿದ್ದ ಹೋರ್ಡಿಂಗ್‌ಗಳನ್ನು ಒದೆಯುತ್ತಿರುವ ದೃಶ್ಯ ಕಂಡುಬಂದಿದೆ.
ರೂಬಿ ಕ್ರಾಸಿಂಗ್‌ನಲ್ಲಿ ಬಿಜೆಪಿ ಭಾವುಟಗಳನ್ನು ಹಿಡಿದಿದ್ದ ಗುಂಪೊಂದು ಟಿಎಂಸಿ ಕೌನ್ಸಿಲರ್ ಸುಶಾಂತ ಘೋಷ್ ಅವರ ಕಚೇರಿಯ ಮೇಲೆ ದಾಳಿ ನಡೆಸಿದೆ.
ಈ ಘಟನೆಗಳನ್ನು ಖಂಡಿಸಿರುವ ಟಿಎಂಸಿ, 'ಅಧಿಕಾರಕ್ಕೆ ಬಂದ ತಕ್ಷಣ ಬಿಜೆಪಿ ತನ್ನ ನಿಜವಾದ ಬಣ್ಣವನ್ನು ತೋರಿಸಿದೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
'ಬಿಜೆಪಿ ಗೂಂಡಾಗಳು ಮುರ್ಶಿದಾಬಾದ್‌ನಲ್ಲಿರುವ ನಮ್ಮ ಪಕ್ಷದ ಕಚೇರಿಯ ಮೇಲೆ ಹಿಂಸಾತ್ಮಕ ದಾಳಿ ನಡೆಸಿದ್ದಾರೆ. ಧ್ವಂಸ ಮತ್ತು ಅರಾಜಕತೆ -ಇದು ಬಿಜೆಪಿಯ ನಿಜವಾದ ಮುಖ. ಬಿಜೆಪಿಯ ಕೀಳುಮಟ್ಟದ ರಾಜಕಾರಣಕ್ಕೆ ಇದುವೇ ಸಾಕ್ಷಿ' ಎಂದು ಟಿಎಂಸಿ ಕಿಡಿಕಾರಿದೆ.

