ಯಾದಗಿರಿ: ಮೋಡ ಮುಸಿಕಿದ ವಾತಾವರಣದೊಂದಿಗೆ ನಗರವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಭಾನುವಾರ ಉತ್ತಮ ಮಳೆಯಾಗಿದ್ದು, ಬಾಡುತ್ತಿರುವ ಬೆಳೆಗಳಿಗೆ ಅಲ್ಪ ಆಸರೆಯಾಗಿದೆ.
ಕಳೆದ ಎರಡ್ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣದೊಂದಿಗೆ ಕೆಲವೆಡೆ ಹಗುರ, ತುಂತುರು ಮಳೆಯಾಗುತ್ತಿತ್ತು.
ಭಾನುವಾರವೂ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿತ್ತಿ. ಮಧ್ಯಾಹ್ನದ ಬಳಿಕ ಸಾಧಾರಣವಾಗಿ ಸುರಿದು, ಬಿಸಿಲಿನಿಂದ ಬಳಲಿದ್ದ ಇಳೆ ಹಾಗೂ ಬೆಳೆಗಳಿಗೆ ಮಳೆಯು ತಂಪೆರೆಯಿತು.
ಹುಣಸಗಿ, ಶಹಾಪುರ, ಸುರಪರ ತಾಲ್ಲೂಕಿನ ಕೆಲವೆಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು. ಬಿಸಿಲ ಝಳಕ್ಕೆ ಒಣಗುತ್ತಿರುವ ಹತ್ತಿ, ತೊಗರಿ, ಹೆಸರು ಸೇರಿದಂತೆ ಇತರ ಬೆಳೆಗಳಿಗೆ ಮಳೆಯು ತಣ್ಣನೆ ಆಸರೆ ನೀಡಿತು. ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ರೈತರ ಮೊಗದಲ್ಲಿ ಸಂತಸ ಕಂಡುಬಂತು.
ದೇವಿಕೇರಾದಲ್ಲಿ ಅತ್ಯಧಿಕ ಮಳೆ: ಸುರಪುರ ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಅತ್ಯಧಿಕ 58 ಮಿ.ಮೀ. ಮಳೆಯಾಗಿದೆ. ಮಾಲಗತ್ತಿಯಲ್ಲಿ 55.5, ಅರಕೇರಾ (ಕೆ) ಗ್ರಾಮದಲ್ಲಿ 53, ಸುರಪುರದಲ್ಲಿ 47, ಪೇಠಅಮ್ಮಪುರದಲ್ಲಿ 33, ನಾಗನೂರದಲ್ಲಿ 32.5, ಮಲ್ಲಾ (ಬಿ) ಗ್ರಾಮದಲ್ಲಿ 29 ಮಿ.ಮೀ.ನಷ್ಟು ಮಳೆ ಬಿದ್ದಿದೆ.
ವಡಗೇರಾದ ತಡಿಬಿಡಿಯಲ್ಲಿ 34, ಗುರುಮಠಕಲ್‌ನ ಜೈಗ್ರಾಮ ಹಾಗೂ ಯಾದಗಿರಿಯ ಹೊನಗೇರಾದಲ್ಲಿ ತಲಾ 25, ಹುಣಸಗಿಯ ಬೈಚಬಾಳದಲ್ಲಿ 24, ಶಹಾಪುರದ ಹೊಸಕೇರಾದಲ್ಲಿ 22, ಹೋತಪೇಟದಲ್ಲಿ 21, ಅಣಬಿಯಲ್ಲಿ 20 ಮಿ.ಮೀ ಮಳೆಯಾಗಿದೆ.
ಗ್ರಾಮೀಣ ಭಾಗದಲ್ಲಿ ಮಳೆಯು ಸಂತಸ ತಂದಿದ್ದರೆ ನಗರದಲ್ಲಿ ಚರಂಡಿ ಹಾಗೂ ಗುಂಡಿಗಳ ಅವ್ಯವಸ್ಥೆಯನ್ನು ಎತ್ತಿ ತೋರಿಸಿತ್ತು. ರಸ್ತೆಯ ಗುಂಡಿಗಳಲ್ಲಿ ನೀರು ನಿಂತು, ವಾಹನ ಸವಾರರು ಪರದಾಡಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260720-30-56903122

