ಕೋಲ್ಕತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಯಸ್ ಚಂಡಮಾರುತದಿಂದ ಉಂಟಾದ ಹಾನಿ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪ್ರಧಾನಿ ಮೋದಿ ಅವರು ಇಂದು ಮಧ್ಯಾಹ್ನ ಕಲೈಕುಂಡ ವಾಯುನೆಲೆಗೆ ಬಂದಿಳಿಯಲಿದ್ದಾರೆ. ನಂತರ ಅವರು, ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಮೋದಿ ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್‌ಕರ್ ಅವರು ಬರಮಾಡಿಕೊಳ್ಳಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೋದಿ ಅವರು ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಬುಧವಾರ ಗಂಟೆಗೆ 130ರಿಂದ 145 ಕಿ.ಮೀ. ವೇಗದ ಗಾಳಿಯೊಂದಿಗೆ ಪೂರ್ವ ಕರಾವಳಿಗೆ ಅಪ್ಪಳಿಸಿದ್ದ 'ಯಸ್' ಚಂಡಮಾರುತವು, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಪಾರ ಹಾನಿಗೆ ಕಾರಣವಾಗಿದೆ.

