ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಇದೇ 26ರಂದು ಬಿಡುಗಡೆ ಆಗಲಿದೆ. ಈಗಾಗಲೇ ದೇಶವ್ಯಾಪಿ 'ಟಾಕ್ಸಿಕ್' ಪ್ರಚಾರ ಸದ್ದು ಮಾಡುತ್ತಿದೆ.
ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣಗೊಂಡು, ಹಿಂದಿ ಸೇರಿದಂತೆ ದಕ್ಷಿಣದ ಇತರೆ ಭಾಷೆಗಳಿಗೆ ಡಬ್ಬಿಂಗ್ ಆಗಿರುವ ಚಿತ್ರದ ಟಿಕೆಟ್‌ಗಳ ಬುಕ್ಕಿಂಗ್ ಆ.21ರಂದೇ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.
'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಸಿನಿಮಾದಲ್ಲಿ ನಟ ಯಶ್ 'ರಾಯ' ಹಾಗೂ 'ಟಿಕೆಟ್' ಹೆಸರಿನ ದ್ವಿಪಾತ್ರದಲ್ಲಿ, ಮೂರು ಶೇಡ್‌ಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಅಲ್ಲದೆ, ಕನ್ನಡದವರೇ ಆದ ರುಕ್ಮಿಣಿ ವಸಂತ್, ದಕ್ಷಿಣ ಭಾರತದ ನಟಿ ನಯನತಾರಾ ಮುಖ್ಯ ಪಾತ್ರದಲ್ಲಿದ್ದಾರೆ. ಬಾಲಾಜಿ ಮನೋಹರ್, ಸುದೇವ್ ನಾಯರ್, ಅಕ್ಷಯ್ ಒಬೆರಾಯ್, ಡ್ಯಾರೆಲ್ ಡಿ'ಸಿಲ್ವ ತಾರಾಬಳಗದಲ್ಲಿದ್ದಾರೆ.
ಕೆವಿಎನ್ ಪ್ರೊಡಕ್ಷನ್, ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿದ್ದು, ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಎಷ್ಟು ಪರದೆಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿಲ್ಲ. ಒಂದು ವರದಿ ಪ್ರಕಾರ, ಚಿತ್ರವು ವಿಶ್ವದಾದ್ಯಂತ 12 ಸಾವಿರ ಪರದೆಗಳಲ್ಲಿ ಬಿಡುಗಡೆ ಕಾಣುತ್ತಿದೆ.
ಕರ್ನಾಟಕದಲ್ಲಿ ಕೆವಿ.ಎನ್ ಪ್ರೊಡಕ್ಷನ್ಸ್ ಹಂಚಿಕೆ ಹೊಣೆ ಹೊತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ನಿರ್ಧಾರವಾಗಿರುವ ಚಿತ್ರಮಂದಿರಗಳ ಜೊತೆಗೆ, ಹೆಚ್ಚುವರಿ ಪರದೆಗಳಲ್ಲಿ ಬಿಡುಗಡೆಗೆ ಸಿದ್ಧತೆ ನಡೆದಿದೆ ಎಂದು ತಂಡ ತಿಳಿಸಿದೆ.v
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-51-2004370207

