ಡಾ. ಜಯಲಕ್ಷ್ಮಿ ನಾಯಿಕ್
ತಾಯ್ತನ ಎಂಬುದು ಮಹಿಳೆಯ ಜೀವನದ ಅತ್ಯಂತ ಅಮೂಲ್ಯ ಮತ್ತು ಜವಾಬ್ದಾರಿಯುತ ಹಂತ. ಗರ್ಭಾವಸ್ಥೆ ಎಂದರೆ ಕೇವಲ ಮಗುವನ್ನು ಹೆರುವುದಲ್ಲ. ಹಾಗೆಯೇ ತಾಯ್ತನವೆಂದರೆ ತಾಯಿಯು ತನ್ನ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮಗುವಿನ ಲಾಲನೆ, ಪಾಲನೆ ಕುರಿತು ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು.
ಇದು, ತಾಯಿಯಾಗುವ ಸಿದ್ಧತೆ ಯಲ್ಲಿನ ಮೊದಲ ಹೆಜ್ಜೆ. ಬನ್ನಿ, ಈ ಸಿದ್ಧತೆಯ ಬಗೆಯನ್ನು ಒಂದೊಂದಾಗಿ ತಿಳಿದುಕೊಳ್ಳೋಣ.
ಗರ್ಭಿಣಿಯ ಆರೋಗ್ಯವೇ ಮಗುವಿನ ಆರೋಗ್ಯದ ಮೂಲ ಬೇರು. ತಾಯಿಯಾಗುವವಳು ಆರೋಗ್ಯಕ್ಕೆ ಸಂಬಂಧಿಸಿದ ಈ ಕೆಳಗಿನ ಅಂಶಗಳ ಬಗ್ಗೆ ಬಹಳಷ್ಟು ಕಾಳಜಿ ವಹಿಸಬೇಕು.
l ಪೌಷ್ಟಿಕ ಆಹಾರ ಸೇವನೆ (ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್‌ಗಳು) ಕುರಿತು ಗರ್ಭಿಣಿಯು ವೈದ್ಯರಿಂದ ಅಥವಾ ಸೂಕ್ತ ಮೂಲಗಳಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬೇಕು.
l ನಿಯಮಿತ ವೈದ್ಯಕೀಯ ತಪಾಸಣೆ ಮಾಡಿಸುವುದರಿಂದ ತಾಯಿ- ಮಗು ಇಬ್ಬರ ಆರೋಗ್ಯದ ಬಗ್ಗೆಯೂ ವೈದ್ಯರಿಂದ ಸೂಕ್ತ ಸಲಹೆ ಸಿಗುತ್ತದೆ.
l ನಡಿಗೆ, ಪ್ರೆಗ್ನೆನ್ಸಿ ಯೋಗದಂತಹ ಹಗುರವಾದ ವ್ಯಾಯಾಮವು ಹೆರಿಗೆಗೆ ಹಾಗೂ ಪ್ರಸವದ ನಂತರ ತಾಯಿಯ ಶೀಘ್ರ ಚೇತರಿಕೆಗೆ ನೆರವಾಗುತ್ತದೆ.
l ಗರ್ಭಿಣಿಯು ಒಳ್ಳೆಯ ನಿದ್ರೆ ಹಾಗೂ ಸಾಕಷ್ಟು ವಿಶ್ರಾಂತಿ ಪಡೆಯುವುದರಿಂದ ಒತ್ತಡ ಕಡಿಮೆಯಾಗಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯವಾಗುತ್ತದೆ.
l ಸ್ವಸ್ಥ ದೇಹವು ಸುಗಮ ಗರ್ಭಧಾರಣೆ ಮತ್ತು ಆರೋಗ್ಯಕರ ಮಗುವನ್ನು ಪಡೆಯುವುದರಲ್ಲಿ ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ಕೆಲವು ವಿಷಯಗಳ ಬಗ್ಗೆ ಆತಂಕ, ಭಾವನಾತ್ಮಕ ಬದಲಾವಣೆಗಳು ಸಹಜ. ಅದಕ್ಕಾಗಿ ಹೀಗೆ ಮಾಡಬೇಕು:
l ಪ್ರಸವದ ಕುರಿತು, ಗರ್ಭದಲ್ಲಿನ ತನ್ನ ಮಗುವಿನ ಕುರಿತು ಸಕಾರಾತ್ಮಕ ಯೋಚನೆಗಳನ್ನು ಬೆಳೆಸಿಕೊಳ್ಳಬೇಕು.
l ಧ್ಯಾನ, ಪ್ರಾಣಾಯಾಮ, ಪ್ರಾರ್ಥನೆಯು ಮಗುವಿನ ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತವೆ.
l ನಕಾರಾತ್ಮಕ ಮಾತುಗಳಿಂದ, ಯೋಚನೆಗಳಿಂದ, ಮಾಹಿತಿಯಿಂದ ದೂರವಿರಬೇಕು.
l ಯಾವುದೇ ರೀತಿಯ ಭಯ ಮತ್ತು ಆತಂಕವಿದ್ದರೆ ಹಿಂಜರಿಯದೆ ಸೂಕ್ತ ಸಲಹೆ ಪಡೆದು ಅವನ್ನು ಬಗೆಹರಿಸಿಕೊಳ್ಳಬೇಕು.
l ಶಾಂತ ಮನಸ್ಸು ತಾಯಿ- ಮಗುವಿನ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ.
ಎಲ್ಲವನ್ನೂ ತಾವೇ ಮಾಡಬೇಕೆಂಬ ಒತ್ತಡ ದಂಪತಿಗಳಿಗೆ ಬೇಡ.
l ಅವಶ್ಯಕತೆ ಬಂದರೆ ತವರಿನವರ ಜೊತೆಗೆ ಪತಿಯ ಕುಟುಂಬದವರು, ಹತ್ತಿರದ ಸಂಬಂಧಿಕರು ಅಥವಾ ಇನ್ನಿತರ ಸಹಾಯಕರ ಸಹಕಾರ ಪಡೆಯಲು ಹಿಂಜರಿಯಬಾರದು.
l ಸ್ತ್ರೀರೋಗ ತಜ್ಞರಿಗೆ ಗರ್ಭಿಣಿಯ ಆತಂಕಗಳನ್ನು ನಿವಾರಿಸಲು ಹಾಗೂ ಸಮಾಲೋಚನೆ ನಡೆಸಲು ಸಾಕಷ್ಟು ಸಮಯಾವಕಾಶ ಇರುವುದಿಲ್ಲ. ಅದಕ್ಕಾಗಿಯೇ ಗರ್ಭವತಿ ಆದಾಗಿನಿಂದ ಹೆರಿಗೆಆಗುವವರೆಗೆ ಅವಳ ಆತಂಕಗಳನ್ನು ದೂರ ಮಾಡಲು ಹಾಗೂ ಮಾನಸಿಕವಾಗಿ ಸ್ಥೈರ್ಯ ನೀಡಲು ಈಗ ಬರ್ತ್ ಎಜುಕೇಟರ್‌ಗಳು ಆನ್‌ಲೈನ್ ಸಂಪರ್ಕಕ್ಕೆ ಲಭ್ಯವಿರುತ್ತಾರೆ. ನೀವು ಬಯಸಿದರೆ ಹೆರಿಗೆ ಸಮಯದಲ್ಲೂ ಮಾನಸಿಕ ಬಲ ನೀಡಲು ಜೊತೆಗಿರುತ್ತಾರೆ. ಈ ಸೌಲಭ್ಯವನ್ನು ಬೇಕಾದ ಗರ್ಭಿಣಿಯರು ಪಡೆದುಕೊಳ್ಳಬಹುದು.
ಮಗುವಿನೊಂದಿಗಿನ ತಾಯಿಯ ಬಂಧವು ಗರ್ಭಾವಸ್ಥೆಯಲ್ಲೇ ಆರಂಭವಾಗುತ್ತದೆ.
l7-8 ತಿಂಗಳಿನ ಗರ್ಭಾವಸ್ಥೆಯಲ್ಲಿಯೇ ಮಗು ಧ್ವನಿಗಳನ್ನು ಆಲಿಸಿ ಗುರುತಿಸಲು ಪ್ರಾರಂಭಿಸುತ್ತದೆ. ಮಗುವಿನೊಂದಿಗೆ ಮಾತನಾಡುವುದು, ಹಾಡುವುದು ಅಥವಾ ಒಳ್ಳೆಯದನ್ನು ಓದಿ ಹೇಳುವುದು ತಾಯಿ- ಮಗುವಿನ ಬಾಂಧವ್ಯವನ್ನು ಬಲಪಡಿಸುತ್ತದೆ. ಈ ಸುಪ್ತ ಮನದ ಸ್ಮರಣೆಯಿಂದಾಗಿ ಶಿಶುಗಳು ಜನನದ ನಂತರ ತಾಯಿಯ ಧ್ವನಿಯನ್ನು ಗುರುತಿಸುತ್ತವೆ.
lಗರ್ಭಿಣಿಯು ಮಗುವಿನ ಸಂತೋಷಕರ ಭವಿಷ್ಯವನ್ನು ಕಲ್ಪಿಸಿಕೊಳ್ಳುವುದು ಮಗುವಿನ ಉತ್ತಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಕೊನೆಯ ಮಾತು: ಯಶಸ್ವಿ ತಾಯಿ ಎಂದರೆ ಎಲ್ಲವನ್ನೂ ತಿಳಿದವಳು ಎಂದಲ್ಲ; ಪ್ರೇಮದಿಂದ, ಸಹನೆಯಿಂದ, ಅರಿವಿನಿಂದ ತನ್ನ ಮಗುವಿನ ಭವಿಷ್ಯಕ್ಕಾಗಿ ದೃಢ ನಿರ್ಧಾರ ತೆಗೆದುಕೊಂಡು ದಿಟ್ಟ ಹೆಜ್ಜೆ ಇಡುತ್ತಾ ಸಾಗುವವಳು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-51-1827316869

