ಇಪ್ಪತ್ತೊಂದನೇ ಶತಮಾನಕ್ಕೆ ಬೇಕಾದ ಹೊಸ ಸಂವಿಧಾನ ಹೇಗಿರಬೇಕು? ವಿರೂಪಗೊಂಡ ಭಾರತದ ಸಂವಿಧಾನದ ಘೋರ ಚಿತ್ರ ನಮ್ಮಲ್ಲಿ ಪ್ರಶ್ನೆಗಳನ್ನು ಎತ್ತುತ್ತದೆ. ಆದರೆ, ಸಂವಿಧಾನ ಎಂದರೆ ಸ್ಥಾಪಕ ಪಠ್ಯವಷ್ಟೇ ಅಲ್ಲ, ಅದು ಅಧಿಕಾರದ ಮೂಲಭೂತ ಏರ್ಪಾಡು ಎಂದು ಭಾವಿಸಿದರೆ, ಜಗತ್ತಿನಾದ್ಯಂತ ಈ ಪ್ರಶ್ನೆಗೆ ಇರುವ ಮಹತ್ವದ ಸ್ವರೂಪವನ್ನು ನಾವು ಗುರ್ತಿಸಬಹುದು. ಅಮೆರಿಕದ ಬಿಕ್ಕಟ್ಟು ಮತ್ತು ಯುರೋಪ್ನಲ್ಲಿ ತೀವ್ರವಾಗಿರುವ ಬಲಪಂಥೀಯ ಅಲೆಯು ಜಗತ್ತಿನಾದ್ಯಂತ ಪ್ರಜಾಪ್ರಭುತ್ವವು ದಯನೀಯ ಸ್ಥಿತಿಯಲ್ಲಿದೆ ಎಂಬುದನ್ನು ನಮಗೆ ತೋರಿಸುತ್ತದೆ. 'ಸಂವಿಧಾನ' ಎಂಬುದಕ್ಕೆ 'ರಚನೆ' ಎಂಬ ಅರ್ಥವೂ ಇದೆ. ಸಂವಿಧಾನವನ್ನು ಕ್ರಿಯಾ
ಪದವಾಗಿ ತೆಗೆದುಕೊಂಡರೆ, ರಚಿಸುವುದಕ್ಕೆ ಎಂಬ ಅರ್ಥವು ಹೊಳೆಯುತ್ತದೆ ಮತ್ತು ಹೊಸ ಸಂವಿಧಾನವು ಪ್ರಜಾಪ್ರಭುತ್ವದ ಭವಿಷ್ಯದ ಮರುರಚನೆಯ ಸಾಧ್ಯತೆಗಳನ್ನು ನಮ್ಮೆದುರು ತೆರೆದಿರಿಸುತ್ತದೆ.
ಭಾರತವು ಪ್ರಜಾಪ್ರಭುತ್ವದ ಅವನತಿಯ ಅಧ್ಯಯನಯೋಗ್ಯ ಪ್ರಕರಣವಷ್ಟೇ ಅಲ್ಲ, 'ಇಪ್ಪತ್ತೊಂದನೇ ಶತಮಾನಕ್ಕೆ ಬೇಕಾದ ಹೊಸ ಸಂವಿಧಾನ ಹೇಗಿರಬೇಕು?' ಎನ್ನುವ ಜಾಗತಿಕ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ಇರುವ ಪ್ರಮುಖ ಸ್ಥಳವೂ ಹೌದು ಎಂಬುದು ಆಶ್ಚರ್ಯಕರವಾದರೂ ಸತ್ಯ. ಪ್ರಜಾಪ್ರಭುತ್ವದ ಪುನಶ್ಚೇತನಕ್ಕೆ ಬೇಕಿರುವ ಚಿಂತನೆಗಳ ಮೂಲವಾಗಿಯೂ ಭಾರತವು ಇದೆ.
ಪ್ರಜಾಸತ್ತಾತ್ಮಕ ಆದರ್ಶವನ್ನು ಸಮೃದ್ಧಗೊಳಿಸಲು ಸ್ವರಾಜ್ಯದ ಪರಿಕಲ್ಪನೆಯು ನೆರವಾಗುತ್ತದೆ. ಸ್ವಯಂ ಆಡಳಿತವಾಗಿ ಪ್ರಜಾಪ್ರಭುತ್ವದ ಪ್ರಧಾನ ಚಿಂತನೆಯು ಆಡಳಿತಗಾರರನ್ನು ಜನರು ಹೇಗೆ ನೋಡುತ್ತಾರೆ ಎಂಬುದಕ್ಕೆ ಸೀಮಿತ: ತಮ್ಮನ್ನು ಆಳುವವರನ್ನು ಆಯ್ಕೆ ಮಾಡುವ ಸಮಾನ ಹಕ್ಕು ಪೌರರಿಗೆ ಇರಬೇಕು ಹಾಗೂ ಬಳಿಕ ಅವರನ್ನು ಉತ್ತರದಾಯಿಗಳನ್ನಾಗಿ ಮಾಡಬೇಕು ಎಂಬುದೇ ಈ ಚಿಂತನೆಯಾಗಿದೆ. ಆದರೆ, ಈ ಪೌರರು ಪರಸ್ಪರರಿಗೆ ಏನನ್ನು ಮಾಡಬೇಕು ಮತ್ತು ಅದು ಹೇಗಿರಬೇಕು ಎಂಬುದರತ್ತ ನಮ್ಮ ಗಮನವನ್ನು ಇದು ಸೆಳೆಯುವುದಿಲ್ಲ. ಮಹಾತ್ಮ ಗಾಂಧೀಜಿ ವ್ಯಾಖ್ಯಾನಿಸಿದ ಸ್ವರಾಜ್ಯದ ಚಿಂತನೆಯು ಪರಿಕಲ್ಪನಾತ್ಮಕ ತಿರುವೊಂದನ್ನು ಹೊಂದಿದೆ: ಸ್ವರಾಜ್ಯ ಎಂದರೆ ಸ್ವಯಂ ಆಳ್ವಿಕೆ ಅಷ್ಟೇ ಅಲ್ಲ, ಅದರಲ್ಲಿ ಸ್ವಯಂ ನಿಯಂತ್ರಣವೂ ಇದೆ. ಇದು, ಆಳುವವರನ್ನು ಜನರು ಹೇಗೆ ನೋಡುತ್ತಾರೆ ಎಂಬುದಕ್ಕೆ ಸೀಮಿತವಲ್ಲ, ಬದಲಿಗೆ ಪೌರರು ಪರಸ್ಪರರನ್ನು ಹೇಗೆ ನೋಡುತ್ತಾರೆ ಮತ್ತು ತಮ್ಮನ್ನು ಅವರು ಹೇಗೆ ನೋಡುತ್ತಾರೆ ಎಂಬುದನ್ನೂ ಒಳಗೊಂಡಿದೆ. ಈ ದಿಸೆಯಲ್ಲಿ ನೋಡಿದಾಗ, ರಾಜಕೀಯ ಸಮುದಾಯವೊಂದನ್ನು ಕಟ್ಟುವಲ್ಲಿ ಹಂಚಿಕೊಂಡ ನಿಯಮಗಳು, ಮುಕ್ತ ಸಂವಾದ ಮತ್ತು ಸ್ವಯಂ ನಿಯಂತ್ರಣಗಳನ್ನು ಒಳಗೊಂಡ ಪ್ರಜಾಪ್ರಭುತ್ವದ ಚಿಂತನೆಯು ಮುಖ್ಯವಾಗುತ್ತದೆ. ಇದೇ ಮಾದರಿಯಲ್ಲಿ, ಯಶಸ್ವೀ ಪ್ರಜಾಪ್ರಭುತ್ವಕ್ಕೆ ಭ್ರಾತೃತ್ವವು ಅತ್ಯಗತ್ಯ ಎಂಬುದಕ್ಕೆ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಒತ್ತು ನೀಡಿದ್ದಾರೆ.
ಹೀಗಾಗಿ, ಪ್ರಜಾಪ್ರಭುತ್ವ ಎಂದರೆ ಉತ್ತಮ ಸಂಸ್ಥೆಗಳಷ್ಟೇ ಅಲ್ಲ, ಸದೃಢವಾದ ಪದ್ಧತಿಗಳು ಕೂಡ ಹೌದು. ಪ್ರಜಾಪ್ರಭುತ್ವವನ್ನು ಕಟ್ಟುವುದು ಎಂದರೆ,
ಬೀಜವನ್ನು ಬಿತ್ತುವುದಷ್ಟೇ ಅಲ್ಲ; ಅದು, ನಿರಂತರವಾದ ಭರವಸೆಯ ವ್ಯವಸಾಯವಾಗಿದೆ. ಬೇಸಾಯದ ಚಟುವಟಿಕೆಗಳು 'ಪೋಷಣೆ, ಸಂಯಮ, ಕಣ್ಗಾವಲು ಮತ್ತು ಭರವಸೆ'ಗಳೆಂಬ ಪ್ರಜಾಸತ್ತಾತ್ಮಕ ಪದ್ಧತಿಗಳ ಮೂಲಕ ಪ್ರಜಾಪ್ರಭುತ್ವವನ್ನು ಕಟ್ಟುವಲ್ಲಿಯೂ ಉತ್ತೇಜನ ನೀಡುತ್ತವೆ ಎಂಬುದರತ್ತ ಮಾನವಶಾಸ್ತ್ರಜ್ಞೆ ಮುಕುಲಿಕಾ ಬ್ಯಾನರ್ಜಿ ಅವರು ನಮ್ಮ ಗಮನ ಸೆಳೆಯುತ್ತಾರೆ. ಸಮುದಾಯ ಬಂಧಗಳ ರೂಪಿಸುವಿಕೆ ಅಥವಾ ಭ್ರಾತೃತ್ವ, ಹಂಚಿಕೊಂಡ ಆಶಯದ ಕಟ್ಟುವಿಕೆ, ಪ್ರತಿ ಹೊಸ ತಲೆಮಾರಿಗಾಗಿ ಆಶಯಗಳ ಮರುರೂಪಿಸುವಿಕೆ, ರಾಜಕೀಯ ನಾಯಕರನ್ನು ಬೆಳೆಸುವುದಕ್ಕೆ ಹೂಡಿಕೆ ಮತ್ತು ಉದ್ಯಮಿಗಳಾಗಿ ಅಲ್ಲ, ಮಿಶನರಿಗಳಂತೆ ಪ್ರಜಾಪ್ರಭುತ್ವದ ಚಟುವಟಿಕೆಯಲ್ಲಿ ಭಾಗವಹಿಸುವುದಕ್ಕೆ ಸಣ್ಣ 'ಆದರ್ಶ'ವಾದಿ
ಗಳನ್ನು ಬೆಳೆಸುವುದು ಪ್ರಜಾಪ್ರಭುತ್ವ ಸಂಸ್ಕೃತಿಗೆ ಅಗತ್ಯವಾಗಿದೆ.
21ನೇ ಶತಮಾನದ ಪ್ರಜಾಪ್ರಭುತ್ವದ ಸಾಂಸ್ಥಿಕ ವಿನ್ಯಾಸವನ್ನು ಮರುಚಿಂತಿಸಲು 20ನೇ ಶತಮಾನದ ಭಾರತದ ಹಲವು ರಾಜಕೀಯ ಚಿಂತಕರು ನಮಗೆ ನೆರವಾಗುತ್ತಾರೆ. ಇವರೆಲ್ಲರೂ ತೀವ್ರಗಾಮಿ ಪ್ರಜಾಪ್ರಭುತ್ವವಾದಿಗಳಾಗಿದ್ದರೂ ಸ್ವಾತಂತ್ರ್ಯೋತ್ತರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಗಾಢವಾದ ಅನುಮಾನಗಳನ್ನು ಹೊಂದಿದ್ದರು. 'ಪ್ರಜಾಪ್ರಭುತ್ವಕ್ಕೆ ಪೂರ್ವ ಷರತ್ತು'ಗಳಿಗಾಗಿ ಅಂಬೇಡ್ಕರ್ ಅವರ ಒತ್ತಾಯ, ರಾಜಕೀಯ ಮೀಮಾಂಸಕ ಎಂ.ಎನ್. ರಾಯ್ ಅವರ ಪಕ್ಷರಹಿತ ಪ್ರಜಾಪ್ರಭುತ್ವದ ಪ್ರತಿಪಾದನೆ, ಭಾರತದ ಆಡಳಿತ ವ್ಯವಸ್ಥೆಯ ಪುನರ್ರಚನೆಗೆ ಜಯಪ್ರಕಾಶ್ ನಾರಾಯಣ್ ಅವರ ಮನವಿ, ರಾಮಮನೋಹರ ಲೋಹಿಯಾ ಅವರ ನಾಲ್ಕು ಸ್ತಂಭಗಳ ಪ್ರಜಾಪ್ರಭುತ್ವದ ಪ್ರಸ್ತಾವಗಳು, ಇವೆಲ್ಲವು ಅವರ ಕಾಲದಲ್ಲಿಯೇ ಮನ್ನಣೆ ಪಡೆಯದಿರಬಹುದು. ಹಾಗೆಯೇ, ಈ ಚಿಂತನೆ ಗಳನ್ನು ಅವುಗಳ ಮೂಲ ರೂಪದಲ್ಲಿ ಅಳವಡಿಸಿಕೊಳ್ಳುವುದು ಇಂದು ಸಾಧ್ಯವಿಲ್ಲ. ಆದರೆ, ಆಧುನಿಕ ಪ್ರಜಾಪ್ರಭುತ್ವಗಳಲ್ಲಿ ಹೆಚ್ಚು ಯೋಚಿಸದೆಯೇ ಅಳವಡಿಸಿಕೊಂಡ ಕೆಲವು ಅಂಶಗಳನ್ನು ಮರುರೂಪಿಸುವಂತೆ ಈ ಚಿಂತನೆಗಳಿಗೆ ಬಂದ ವಿಮರ್ಶೆಗಳು ನಮ್ಮನ್ನು ಪ್ರೇರೇಪಿಸಬಹುದು.
ವಿನ್ಯಾಸದಲ್ಲಿನ ಈ ನಾಲ್ಕು ಲೋಪಗಳನ್ನು ಗಮನಿಸೋಣ. ಒಂದು, ಸ್ವಯಂ ಆಳ್ವಿಕೆಯ ಚಿಂತನೆಯನ್ನು ಅರ್ಥಪೂರ್ಣಗೊಳಿಸಲು ಸಾಧ್ಯವಿಲ್ಲದಷ್ಟು ವಿಸ್ತಾರವಾಗಿ ಆಧುನಿಕ ಪ್ರಜಾಪ್ರಭುತ್ವಗಳು ಕಾರ್ಯನಿರ್ವಹಿಸುತ್ತಿವೆ. ಯಾವುದೇ ಅರ್ಥಪೂರ್ಣ ಸ್ವಯಂ ಆಳ್ವಿಕೆ ಸಾಧ್ಯವಿಲ್ಲದಷ್ಟು ರಾಷ್ಟ್ರ-ರಾಜ್ಯಗಳು ಅಥವಾ ಅವುಗಳ ಒಕ್ಕೂಟ ಘಟಕಗಳು ಬೃಹತ್ತಾಗಿವೆ. ಎರಡು, ಸಮಸ್ಯೆಯು ಕಾಣಿಸಿಕೊಳ್ಳುವ ಮಟ್ಟ ಮತ್ತು ಈ ಸಮಸ್ಯೆಯನ್ನು ಪರಿಹರಿಸಬಲ್ಲ ಅಧಿಕಾರವು ಇರುವ ಮಟ್ಟಗಳ ನಡುವೆ ಹೊಂದಿಕೆಯೇ ಇಲ್ಲ. ಪ್ರಜಾಪ್ರಭುತ್ವದ ಕಟ್ಟಡವನ್ನು ತಳದಿಂದ ಮೇಲಕ್ಕೆ ಕಟ್ಟಿಕೊಂಡು ಬರಬೇಕಾದ ಅಗತ್ಯ ಇದೆ; ಕಟ್ಟುವ ಈ ಕ್ರಿಯೆಯು ಗ್ರಾಮ ಅಥವಾ ತಳಮಟ್ಟದಿಂದ ಆರಂಭಿಸಿ ಜಾಗತಿಕ ಆಡಳಿತದವರೆಗೆ ಸಾಗಬೇಕು; ವಿಕೇಂದ್ರೀಕರಣದ ತತ್ತ್ವವನ್ನು ಇಲ್ಲಿ ಅನುಸರಿಸಬೇಕು. ಕೆಳಗಿನ ಮಟ್ಟದಲ್ಲಿ ನಿರ್ಧಾರವಾಗಬೇಕಾದ ಒಂದು ವಿಚಾರವನ್ನು ಅದರ ನಂತರದ ಹಂತಕ್ಕೆ ಒಯ್ಯಲೇಬಾರದು. ಮೂರು, ಪ್ರಜಾಪ್ರಭುತ್ವದ ಉತ್ತರದಾಯಿತ್ವದ ಅವಧಿಯು ಪ್ರತಿ ಐದು ಅಥವಾ ನಾಲ್ಕು ಅಥವಾ ಎರಡೇ ವರ್ಷ ಎಂದು ಇರಿಸಿಕೊಂಡರೆ, ಒಂದು ಅತ್ಯಲ್ಪ ಅವಧಿಯೆಂದು ಇನ್ನೊಂದು ಅತೀ ದೀರ್ಘ ಅವಧಿ ಎಂದೂ ಅನಿಸುತ್ತದೆ. ದೀರ್ಘಾವಧಿ ನೀತಿ ನಿರೂಪಣೆಗಳಿಗೆ ಈ ಅವಧಿ ಚಿಕ್ಕದು ಎನಿಸಿದರೆ, ಅಧಿಕಾರದ ಸ್ವೇಚ್ಛೆಯ ಬಳಕೆಗೆ ತಡೆ ಒಡ್ಡಲು ಭಾರೀ ದೀರ್ಘ ಎನಿಸುತ್ತದೆ. ನಾಲ್ಕು, ಚುನಾವಣೆಯಲ್ಲಿ ಸರಳ ಬಹುಮತ ಗೆದ್ದರೆ ಸಾಕು ಎಂಬ ವ್ಯವಸ್ಥೆಯು ಆಧುನಿಕ ಪ್ರಭುತ್ವದ ಅಗಾಧ ಅಧಿಕಾರದ ಹಸ್ತಾಂತರಕ್ಕೆ ತೀರಾ ಕಡಿಮೆ ಅನಿಸುತ್ತದೆ. ನಮ್ಮ ಸುತ್ತಲೂ ಕಾಣಿಸುತ್ತಿರುವ ಬಹುಸಂಖ್ಯಾತವಾದವು ವಿಕೃತಿಯಲ್ಲ; ಬದಲಿಗೆ ಅದು, ನಾವು ಪ್ರಜಾಪ್ರಭುತ್ವ ಎಂದು ಕರೆಯುವ ವ್ಯವಸ್ಥೆಯ ಸಹಜವಾದ ತೆರೆದುಕೊಳ್ಳುವಿಕೆಯಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಮೂರು ಲೋಪಗಳ ಬಗ್ಗೆಯೂ ಈ ಚಿಂತಕರು ನಮ್ಮ ಗಮನ ಸೆಳೆದಿದ್ದಾರೆ. ಒಂದು, ಜಾತಿ ಮತ್ತು ವರ್ಗಗಳ ಸಾಮಾಜಿಕ ಶ್ರೇಣೀಕರಣವು 'ಒಬ್ಬ ವ್ಯಕ್ತಿಗೆ ಒಂದು ಮತ' ಎಂಬ ಭರವಸೆಯನ್ನು ಅಲ್ಲಗಳೆಯುತ್ತದೆ. ಜಾತಿ ವ್ಯವಸ್ಥೆ ಮತ್ತು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯು ಸಾಮಾಜಿಕ ಮತ್ತು ಆರ್ಥಿಕ ಅಧಿಕಾರದ ಕೇಂದ್ರೀಕರಣವನ್ನು ಉತ್ತೇಜಿಸುತ್ತದೆ ಮತ್ತು ಸಮಾನ ಪೌರರ ಸ್ವಯಂ ಆಳ್ವಿಕೆಯ ಚಿಂತನೆಯೊಂದಿಗೆ ಇದು ಹೊಂದುವುದೇ ಇಲ್ಲ.
ಎರಡು, ಈಗ ಇರುವ ಉದ್ಯಮ ನಿಯಂತ್ರಿತ ಸಾಮೂಹಿಕ ಮಾಧ್ಯಮ ವ್ಯವಸ್ಥೆಯು ಪ್ರಜಾಸತ್ತಾತ್ಮಕ ಸಾರ್ವಜನಿಕ ಅಭಿಪ್ರಾಯದ ಸಾಧ್ಯತೆಯನ್ನೇ ಅಲ್ಲಗಳೆಯುತ್ತದೆ. ಇದು ಮಾಹಿತಿ ಮುಚ್ಚಿಡಲು ಮತ್ತು ತಪ್ಪು ಮಾಹಿತಿ ನೀಡಲು ಪ್ರಯತ್ನಿಸುತ್ತದೆ ಹಾಗೂ ಪ್ರಜಾಪ್ರಭುತ್ವದ ಸುಲಭ ಕಬಳಿಸುವಿಕೆಗೆ ಅವಕಾಶ ಕೊಡುತ್ತದೆ.
ಮೂರು, ಜಗತ್ತಿನೆಲ್ಲೆಡೆಯ ರಾಜಕೀಯ ಪಕ್ಷಗಳ ನಿಯಂತ್ರಣವು ಕೆಲವೇ ಕೆಲವರ ಕೈಯಲ್ಲಿದ್ದು, ಇತರರ ರಾಜಕೀಯ ಪ್ರವೇಶ ದುಸ್ತರವಾಗಿದೆ ಮತ್ತು ಇದು ಮತದಾರರಿಗೆ ಸ್ಪಂದಿಸದ ಕೆಲವೇ ಕೆಲವರ ಕೈಯಲ್ಲಿ ಆಳ್ವಿಕೆ ಉಳಿಯುವಂತೆ ಮಾಡುತ್ತದೆ. ಹಕ್ಕುಗಳ ಪಟ್ಟಿ ಇಲ್ಲದ ಪ್ರಜಾಸತ್ತಾತ್ಮಕ ಮಸೂದೆಯನ್ನು 20ನೇ ಶತಮಾನದಲ್ಲಿ ಊಹಿಸಲು ಹೇಗೆ ಸಾಧ್ಯವಿರಲಿಲ್ಲವೋ ಹಾಗೆಯೇ, ಉದ್ಯಮಗಳಲ್ಲಿ ಆರ್ಥಿಕ ಅಧಿಕಾರದ ಕೇಂದ್ರೀಕರಣ ತಡೆಗೆ ಸಾಂಸ್ಥಿಕ ವ್ಯವಸ್ಥೆ, ಸಾಮೂಹಿಕ ಮಾಧ್ಯಮದಲ್ಲಿ ಮಾಹಿತಿ ಹರಿವು, ರಾಜಕೀಯ ಪಕ್ಷಗಳಲ್ಲಿ ರಾಜಕೀಯ ನಿರ್ಧಾರ ಕೈಗೊಳ್ಳುವಿಕೆಗೆ ಸಂಬಂಧಿಸಿ ಒಂದು ಅಧ್ಯಾಯ ಇಲ್ಲದ ಸಂವಿಧಾನವನ್ನು 21ನೇ ಶತಮಾನದಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ.
ಯೋಗೇಂದ್ರ ಯಾದವ್
