Dailyhunt Logo
  • Light mode
    Follow system
    Dark mode
    • Play Story
    • App Story
ಯೋಜನೆ ಜಾರಿ ವಿಳಂಬದಿಂದ ನೀರಿನ ಸಮಸ್ಯೆ ಉಲ್ಬಣ

ಯೋಜನೆ ಜಾರಿ ವಿಳಂಬದಿಂದ ನೀರಿನ ಸಮಸ್ಯೆ ಉಲ್ಬಣ

ಔರಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಸಮಸ್ಯೆ ಪರಿಹರಿಸಲು ಸರ್ಕಾರ ವಿಫಲವಾಗಿದೆ ಎಂದು ಶಾಸಕ ಪ್ರಭು ಚವಾಣ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಔರಾದ್ ಪಟ್ಟಣ ಹಾಗೂ ಅನೇಕ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ ಕಾರಂಜಾ ಜಲಾಶಯದಿಂದ ನೀರು ತರಲು ₹84 ಕೋಟಿ ಯೋಜನೆ ಮಂಜೂರು ಮಾಡಿಸಿದ್ದೇನೆ. ಇದಕ್ಕೆ 2023ರಲ್ಲಿ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. 2026 ಜನವರಿಯಲ್ಲೇ ಕಾಮಗಾರಿ ಪೂರ್ಣ ಆಗಬೇಕಿತ್ತು. ಆದರೆ ಈಗಲೂ ಕಾಮಗಾರಿ ಪೂರ್ಣ ಆಗಿಲ್ಲ. ಈ ಕಾರಣ ಜನ ಇಂದು ನೀರಿಗಾಗಿ ಹಾಹಾಕಾರ ಪಡಬೇಕಾಗಿದೆ. 36 ಕೆರೆ ತುಂಬಿಸುವ ಯೋಜನೆಯೂ ಇದೇ ರೀತಿ ಆಗಿದೆ. ಈ ಕುರಿತು ಸಂಬಂಧಿತರಿಗೆ ಅನೇಕ ಬಾರಿ ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿ ಭೇಟಿ ಮಾಡಲು ಹೋದರೆ ಅವರು ಸಮಯ ಕೊಡುತ್ತಿಲ್ಲ. ಹೀಗಾಗಿ ನಾನು ಈಗ ಅಸಹಾಯಕನಾಗಿದ್ದೇನೆ ಎಂದು ಹೇಳಿದರು.

ತಹಶೀಲ್ದಾರ್ ಮಹೇಶ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕ ಜಗನ್ನಾಥ ದೇಶಮುಖ ಕನ್ನಡ ನಾಡು ನುಡಿಯ ಮಹತ್ವ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾಲಾಜಿ ಅಮರವಾಡಿ, ತಾಲ್ಲೂಕು ಪಂಚಾಯತ್ ಇಒ ಕಿರಣ ಪಾಟೀಲ, ಶಿವಕುಮಾರ ಘಾಟೆ, ಎಇಇ ಪ್ರೇಮಸಾಗರ, ಡಾ. ಅನೀಲಕುಮಾರ ಇದ್ದರು. ಪತ್ರಕರ್ತ ಶರಣಪ್ಪ ಚಿಟ್ಮೆ, ಶಿಕ್ಷಕ ಗೋವಿಂದ ಪಾಟೀಲ, ಕಲಾವಿದ ಚಂದ್ರಕಾಂತ ಧಬಾಲೆ, ಸಿಪಿಐ ರಘುವೀರಸಿಂಗ್ ಠಾಕೂರ್ ಅವರಿಗೆ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.

ಕಾಟಾಚಾರದ ರಾಜ್ಯೋತ್ಸವ, ಆಕ್ರೋಶ

ಔರಾದ್ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಕಾಟಾಚಾರದಿಂದ ಕೂಡಿತ್ತು ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಮೆರವಣಿಗೆಯಲ್ಲಿ ಉತ್ಸಾಹ ಇರಲಿಲ್ಲ. ಮುಖ್ಯ ಕಾರ್ಯಕ್ರಮದ ಬಳಿ ಜನ ಇಲ್ಲದೆ ಭಣಗುಡುತ್ತಿತ್ತು. ಸರ್ಕಾರಿ ನೌಕರರು, ಅಧಿಕಾರಿಗಳ ಸಂಖ್ಯೆಯೂ ತೀರಾ ವಿರಳ. ಹೀಗಾಗಿ ಕಾರ್ಯಕ್ರಮ ಆಯೋಜನೆ ಸರಿಯಾಗಿ ಆಗಿಲ್ಲ. ಈ ವಿಷಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ನವರು ಆಸಕ್ತಿ ವಹಿಸಿಲ್ಲ. ಕನ್ನಡ ಭವನಕ್ಕೆ ಕನಿಷ್ಠ ದೀಪಾಲಂಕಾರ ಮಾಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜು ಯಡವೆ ಅವರು ಆಕ್ರೋಶ ಹೊರ ಹಾಕಿದ್ದಾರೆ.

261103-33-83636088

Dailyhunt
Disclaimer: This content has not been generated, created or edited by Dailyhunt. Publisher: Prajavani