ಟೆಹರಾನ್: ಅಮೆರಿಕದೊಂದಿಗಿನ ಯುದ್ಧವು ಅಂತ್ಯವಾದ ಬಳಿಕವೂ ಹೊರ್ಮುಜ್ ಜಲಸಂಧಿಯನ್ನು ಟೆಹರಾನ್ ನಿರ್ವಹಿಸುತ್ತದೆ ಎಂದು ಇರಾನ್‌ನ ಮುಖ್ಯ ಸಂಧಾನಕಾರ ಮೊಹಮ್ಮದ್ ಬಘರ್ ಗಾಲಿಬಾಫ್ ಹೇಳಿದ್ದಾರೆ ಎಂದು ಐಆರ್‌ಎನ್‌ಎ ಸುದ್ಧಿಸಂಸ್ಥೆ ವರದಿ ಮಾಡಿವೆ.
ಅಮೆರಿಕ-ಇರಾನ್ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯ ನಂತರ, ಉಭಯ ದೇಶಗಳೂ ಕೂಡ ಹೊರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಮತ್ತು ಲೆಬನಾನ್‌ನಲ್ಲಿನ ಹೋರಾಟವನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ ಎಂದು ಮಧ್ಯವರ್ತಿಗಳು ತಿಳಿಸಿದ್ದರು.
ಸಂಧಾನ ಮಾತುಕತೆಯಿಂದ ಹಿಂದಿರುಗಿದ ನಂತರ ಮಾತನಾಡಿರುವ ಗಾಲಿಬಾಫ್, ಹೊರ್ಮುಜ್ ಜಲಸಂಧಿಯು ಮತ್ತೆಂದಿಗೂ ಯುದ್ಧಪೂರ್ವ ಪರಿಸ್ಥಿತಿಗಳಿಗೆ ಮರಳುವುದಿಲ್ಲ ಮತ್ತು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಅದು ಇರಾನ್‌ನಿಂದಲೇ ನಿರ್ವಹಿಸಲ್ಪಡುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಅವರು ಟೆಲಿಗ್ರಾಮ್‌ನಲ್ಲಿ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದು, 'ಬರ್ಗೆನ್‌ಸ್ಟಾಕ್‌ನ ಐಷಾರಾಮಿ ಸ್ವಿಸ್ ರೆಸಾರ್ಟ್‌ನಲ್ಲಿ ನಡೆದ ಮಾತುಕತೆಗಳು ಉತ್ತಮ ಫಲಿತಾಂಶ ನೀಡುವ ಸಾಧ್ಯತೆಯಿದೆ. ಪ್ರಮುಖವಾಗಿ ಹೊರ್ಮುಜ್ ಜಲಸಂಧಿ, ಲೆಬನಾನ್ ಚರ್ಚೆ, ತೈಲ ವ್ಯಾಪಾರದ ಕುರಿತಂತೆ ಒಮ್ಮತಕ್ಕೆ ಬರುವ ಸಾಧ್ಯತೆಯಿದೆ' ಎಂದು ಹೇಳಿದ್ದಾರೆ.
ಸೋಮವಾರ(ಜೂನ್ 22) ನಡೆದ ಮಾತುಕತೆಯ ನಂತರ, ಅಮೆರಿಕವು ಇರಾನ್ ತೈಲದ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

