Dailyhunt Logo
  • Light mode
    Follow system
    Dark mode
    • Play Story
    • App Story
ಯುಎಇ ಹಡಗುಗಳ ಮೇಲೆ ಇರಾನ್‌ ದಾಳಿ: ಭಾರತೀಯ ನಾವಿಕ ಸಾವು, ಭಾರತ ಖಂಡನೆ

ಯುಎಇ ಹಡಗುಗಳ ಮೇಲೆ ಇರಾನ್‌ ದಾಳಿ: ಭಾರತೀಯ ನಾವಿಕ ಸಾವು, ಭಾರತ ಖಂಡನೆ

ವದೆಹಲಿ/ದುಬೈ (ಪಿಟಿಐ/ಎಎಫ್‌ಪಿ): ಒಮಾನ್‌ನ ಜಲಗಡಿಯಲ್ಲಿ ಸಾಗುತ್ತಿದ್ದ, ಯುಎಇಗೆ ಸೇರಿದ ಎರಡು ತೈಲ ಹಡಗುಗಳ ಮೇಲೆ ಇರಾನ್‌ ಮಂಗಳವಾರ ದಾಳಿ ನಡೆಸಿದ್ದು, ಇವುಗಳಲ್ಲಿ ಒಂದು ಹಡಗಿನಲ್ಲಿದ್ದ ಒಬ್ಬ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದಾರೆ. 10 ಭಾರತೀಯರಿಗೆ ಗಾಯಗಳಾಗಿವೆ, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಭಾರತವು ಇರಾನ್‌ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ತೀವ್ರವಾಗಿ ಖಂಡಿಸಿದೆ. ನವದೆಹಲಿಯಲ್ಲಿರುವ ಇರಾನ್‌ನ ಉಪ ರಾಯಭಾರಿಯನ್ನು ಕರೆಸಿ, ಈ ಸಂಬಂಧ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ. ದಾಳಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದೆ. ಮಾತುಕತೆ ಮೂಲಕ ಸಂಘರ್ಷ ಅಂತ್ಯಗೊಳಿಸಿಕೊಳ್ಳುವಂತೆಯೂ ಕರೆ ನೀಡಿದೆ.

'ವಾಣಿಜ್ಯ ಹಡಗುಗಳು ಮತ್ತು ದೇಶಗಳ ಮೂಲಸೌಕರ್ಯಗಳನ್ನು ಗುರಿಯಾಗಿಸುವುದನ್ನು ನಿಲ್ಲಿಸಬೇಕು. ಅಂತರರಾಷ್ಟ್ರೀಯ ಸಮುದ್ರದಲ್ಲಿ ಮುಕ್ತ ಸಂಚಾರಕ್ಕೆ ಯಾವುದೇ ತಡೆ ಇರಬಾರದು. ಅಂತರರಾಷ್ಟ್ರೀಯ ಕಾನೂನುಗಳ ಅನ್ವಯ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಿ' ಎಂದೂ ಭಾರತವು ಇರಾನ್‌ಗೆ ಹೇಳಿದೆ.

'ಯುಎಇ ಮತ್ತು ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಎರಡೂ ದೇಶಗಳ ಸಂಬಂಧಪಟ್ಟ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ದಾಳಿಗಳಿಂದ ಪರಿಣಾಮ ಎದುರಿಸುತ್ತಿರುವ ಭಾರತೀಯ ನಾವಿಕರ ಅನುಕೂಲಕ್ಕಾಗಿ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ' ಎಂದಿದೆ.

ಈ ಭಾರತೀಯರು ಯುಎಇಗೆ ಸೇರಿದ ಹಡಗುಗಳಲ್ಲಿ ಉದ್ಯೋಗದಲ್ಲಿದ್ದರು. ಹಡುಗುಗಳ ಮೇಲೆ ದಾಳಿ ನಡೆದ ಬಗ್ಗೆ ಯುಎಇ ರಕ್ಷಣಾ ಸಚಿವಾಲಯವು 'ಎಕ್ಸ್‌'ನಲ್ಲಿ ಮಾಹಿತಿ ಹಂಚಿಕೊಂಡಿತು. ಇದೇ ದಾಳಿಯಲ್ಲಿ ಇಬ್ಬರು ಉಕ್ರೇನ್‌ ಪ್ರಜೆಗಳಿಗೂ ಗಾಯಗಳಾಗಿವೆ. ಯುಎಇ ಕೂಡ ಈ ದಾಳಿಯನ್ನು ಖಂಡಿಸಿದೆ.

ಇರಾನ್‌ ಎಚ್ಚರಿಕೆ

'ನಾವು ಪದೇಪದೇ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿ ಜಲಸಂಧಿಯಿಂದ ಹಾದು ಹೋಗುವ 'ಅಪರಾಧ' ಎಸಗಿದ ಎರಡು ಹಡಗುಗಳ ಮೇಲೆ ದಾಳಿ ನಡೆಸಿದ್ದೇವೆ' ಎಂದು ಇರಾನ್‌ ತಿಳಿಸಿದೆ. ಯುಎಇ ಮಾಹಿತಿ ನೀಡಿದ ಹಡಗುಗಳ ಕುರಿತೇ ಇರಾನ್‌ ಈ ಹೇಳಿಕೆ ನೀಡಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

'ಅಕ್ರಮ ಮಾರ್ಗದಲ್ಲಿ ಪ್ರಚೋದನೆಗೆ ಮುಂದಾಗಲು ಅಮೆರಿಕವು ಒತ್ತಡ ಹೇರುತ್ತಿದೆ. ಸದಾ ಆಕ್ರಮಣಕಾರಿಯಾಗಿ ವರ್ತಿಸುವ ನಮ್ಮ ಶತ್ರುಗಳಿಗೆ ಸಹಕಾರ ನೀಡಬಾರದು. ಇದು ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಜಲಸಂಧಿಯು ಮುಕ್ತ ಸಂಚಾರಕ್ಕೆ ತೆರೆದುಕೊಳ್ಳುವುದನ್ನು ವಿಳಂಬ ಮಾಡಲಿದೆ' ಎಂದೂ ಇರಾನ್ ಎಚ್ಚರಿಸಿದೆ.

14;ಫೆ.28ರಿಂದ ಆರಂಭವಾದ ಯುದ್ಧದಲ್ಲಿ ಇಲ್ಲಿಯವರೆಗೆ ಮೃತಪಟ್ಟ ಭಾರತೀಯರ ಸಂಖ್ಯೆ

ದಾಳಿಗೆ ಒಳಗಾದ ಹಡಗುಗಳು: ಎಂಟಿ ಅಲ್‌ ಬಹಿಯಾ ಮತ್ತು ಎಂಟಿ ಮೊಂಬಾಸಾ

30;ಎರಡೂ ಹಡಗುಗಳಲ್ಲಿದ್ದ ಭಾರತೀಯರ ಒಟ್ಟು ಸಂಖ್ಯೆ

12;ಅಲ್‌ ಬಹಿಯಾದಲ್ಲಿದ್ದ ಭಾರತೀಯ ಸಿಬ್ಬಂದಿ ಸಂಖ್ಯೆ

ಒಬ್ಬ ಭಾರತೀಯ ಮೃತ, ಒಬ್ಬರಿಗೆ ಗಾಯ

18;ಅಲ್‌ ಮೊಂಬಾಸಾದಲ್ಲಿದ್ದ ಭಾರತೀಯ ಸಿಬ್ಬಂದಿ ಸಂಖ್ಯೆ

9 ಭಾರತೀಯರಿಗೆ ಗಾಯ, ಇಬ್ಬರು ಗಂಭೀರ

* ಭಾರತೀಯ ವಿದೇಶಾಂಗ ಸಚಿವಾಲಯ ನೀಡಿದ ಮಾಹಿತಿ

ಇಲ್ಲಿವೆ ಏಳು ಭಾರತೀಯ ಹಡಗುಗಳು

ಪರ್ಷಿಯನ್‌ ಗಲ್ಫ್‌ನಲ್ಲಿ ಸದ್ಯ ಭಾರತೀಯ ಧ್ವಜ ಇರುವ 7 ಹಡಗುಗಳು ಇವೆ ಎಂದು ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ಮಂಗಳವಾರ ತಿಳಿಸಿದ್ದಾರೆ. 'ಈಗ ಮತ್ತೊಮ್ಮೆ ಆರಂಭವಾಗಿರುವ ಯುದ್ಧ ಕೊನೆಗೊಳ್ಳುವವರೆಗೂ ಇವು ಹೊರ್ಮುಜ್‌ ಜಲಸಂಧಿಯನ್ನು ದಾಟಲು ಸಾಧ್ಯವಿಲ್ಲ. ಜಲಸಂಧಿಯನ್ನು ದಾಟುವ ಯೋಚನೆಯನ್ನೂ ಈ ಹಡಗುಗಳು ಮಾಡುತ್ತಿಲ್ಲ' ಎಂದು ಅಧಿಕಾರಿ ತಿಳಿಸಿದ್ದಾರೆ.

ಏಳು ಹಡಗುಗಳು

2 ತೈಲ ಕಂಟೇನರ್‌ ಹಡಗುಗಳು

5 ಸರಕು ಸಾಗಣೆ ಹಡಗುಗಳು

148;ಏಳೂ ಹಡಗುಗಳಲ್ಲಿ ಇರುವ ಭಾರತೀಯ ನಾವಿಕರ ಸಂಖ್ಯೆ

Dailyhunt
Disclaimer: This content has not been generated, created or edited by Dailyhunt. Publisher: Prajavani