ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕವು ತನ್ನ 'ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್'ನಿಂದ 'ಇಂಡೋ' ಪದ ಕೈಬಿಟ್ಟು 'ಯುಎಸ್ ಪೆಸಿಫಿಕ್ ಕಮಾಂಡ್' ಎಂದು ಮರುನಾಮಕರಣ ಮಾಡಿದೆ.
ಅಮೆರಿಕದ ರಕ್ಷಣಾ ಇಲಾಖೆಯು ಮಂಗಳವಾರ ಈ ಘೋಷಣೆ ಮಾಡಿದ್ದು, '1947ರಲ್ಲಿ ಅಧ್ಯಕ್ಷರಾಗಿದ್ದ ಹ್ಯಾರಿ ಟ್ರೂಮನ್ ಅವರು ಸ್ಥಾಪಿಸಿದ ಈ ಕಮಾಂಡ್‌ನ ಸುದೀರ್ಘ ಇತಿಹಾಸಕ್ಕೆ ಸಲ್ಲಿಸುವ ಗೌರವ ಇದಾಗಿದೆ' ಎಂದಿದೆ.
ಆರಂಭದಲ್ಲಿ 'ಯುಎಸ್‌ಪಿಎಕಾಂ' ಹೆಸರಿನಿಂದ ಗುರುತಿಸಿಕೊಂಡಿದ್ದ ಈ ಕಮಾಂಡ್ ಅನ್ನು 2018ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 'ಯುಎಸ್ ಇಂಡೋ- ಪೆಸಿಫಿಕ್ ಕಮಾಂಡ್' ಎಂದು ಮರುನಾಮಕರಣ ಮಾಡಲಾಗಿತ್ತು. ಈ ಸೇನಾ ಕಮಾಂಡ್ ವ್ಯಾಪ್ತಿಯು ಅಮೆರಿಕದ ಪಶ್ಚಿಮ ಕರಾವಳಿಯಿಂದ ಭಾರತದ ಪಶ್ಚಿಮ ಗಡಿಯವರೆಗೂ ವಿಸ್ತರಿಸಿದ್ದು, ಈ ವ್ಯಾಪ್ತಿ ಹಾಗೂ ಕಾರ್ಯಾಚರಣೆ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
'ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ನಡುವೆ ಹೆಚ್ಚುತ್ತಿರುವ ಸಂಪರ್ಕವನ್ನು ಗಮನಿಸಿ 'ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್' ಎಂದು ಮರುನಾಮಕರಣ ಮಾಡಲಾಗುತ್ತಿದೆ. ಇದು ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ಹಾಗೂ ಪೆಂಗ್ವಿನ್‌ನಿಂದ ಹಿಮಕರಡಿಗಳವರೆಗೆ ವ್ಯಾಪಿಸಿದೆ' ಎಂದು 2018ರಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಗಿದ್ದ ಜೇಮ್ಸ್ ಮ್ಯಾಟಿಸ್ ಹೇಳಿದ್ದರು.
ಶೋಷಣೆಯ ಸ್ನೇಹ: ಕಾಂಗ್ರೆಸ್ ವಾಗ್ದಾಳಿ
ಯುಎಸ್ ಪೆಸಿಫಿಕ್ ಕಮಾಂಡ್ ಭಾರತದ ತಪ್ಪಾದ ಭೂಪಟವನ್ನು ಬಳಸುತ್ತಿದೆ ಎಂಬ ವರದಿಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಬುಧವಾರ ಟೀಕೆಗಳ ಸುರಿಮಳೆಗರೆದಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನದ ಪ್ರದೇಶ ಎಂದು ಬಿಂಬಿಸುವ ಹಾಗೂ ಜಮ್ಮು ಮತ್ತು ಕಾಶ್ಮೀರ ಇಲ್ಲದ ಭಾರತದ ತಪ್ಪಾದ ನಕ್ಷೆಯನ್ನು ಪ್ರಕಟಿಸಿದ್ದ ಯುಸ್ ಪೆಸಿಫಿಕ್ ಕಮಾಂಡ್‌ನ 'ಎಕ್ಸ್' ಪೋಸ್ಟ್ ಅನ್ನು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹಂಚಿಕೊಂಡು ವಾಗ್ದಾಳಿ ನಡೆಸಿದ್ದಾರೆ.
'ಸ್ವತಃ ಪ್ರಧಾನಿಯೇ ತನ್ನ ದೇಶವನ್ನು ಶೋಷಣೆಯ ಸ್ನೇಹಕ್ಕೆ ಅಡಿಯಾಳಾಗಿ ಮಾಡಿದ ಮೇಲೆ ಆ ದೇಶಕ್ಕೆ ಬೇರೆ ವಿರೋಧಿಗಳ ಅಗತ್ಯವಾದರೂ ಏನಿದೆ. ಮೋದಿ ಅವರ 'ಸ್ನೇಹಿತ' ಭಾರತ ಭಾರತದ ಹಿತಾಸಕ್ತಿ ಹಾಗೂ ತನ್ನ ಸ್ನೇಹಿತರಿಗೆ ವ್ಯತಿರಿಕ್ತವಾದ ಕಾರ್ಯ ಮಾಡುವ ವಿಲಕ್ಷಣ ಚಾಳಿ ಹೊಂದಿದ್ದಾರೆ' ಎಂದು ಟೀಕಿಸಿದ್ದಾರೆ.

