Dailyhunt Logo
  • Light mode
    Follow system
    Dark mode
    • Play Story
    • App Story
ಯುಪಿಐ ಶುಲ್ಕ: ಮಧ್ಯಂತರ ತಡೆಗೆ ಸುಪ್ರೀಂ ಕೋರ್ಟ್‌ ನಕಾರ

ಯುಪಿಐ ಶುಲ್ಕ: ಮಧ್ಯಂತರ ತಡೆಗೆ ಸುಪ್ರೀಂ ಕೋರ್ಟ್‌ ನಕಾರ

ನವದೆಹಲಿ: 'ಆಯ್ದ ಯುಪಿಐ ವಹಿವಾಟಿನ ಮೇಲೆ ಎಂಡಿಆರ್‌ ಶುಲ್ಕ (ಮರ್ಚೆಂಟ್ ಡಿಸ್ಕೌಂಟ್ ರೇಟ್‌) ವಿಧಿಸುವುದಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ಎಂಡಿಆರ್‌ ವಿಧಿಸುವ ನಿರ್ಧಾರ ಕುರಿತು ಪರಿಶೀಲನೆ ನಡೆಸಲು ಒಪ್ಪಿಗೆ ನೀಡಿರುವ ಸುಪ್ರೀಂ ಕೋರ್ಟ್‌, ಈ ವಿಚಾರಕ್ಕೆ ಸಂಬಂಧಿಸಿ ತಿಂಗಳ ಒಳಗಾಗಿ ವಿವರಣೆ ಒಳಗೊಂಡ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರ, ಆರ್‌ಬಿಐ ಹಾಗೂ ಭಾರತ ರಾಷ್ಟ್ರೀಯ ಪಾವತಿಗಳ ನಿಗಮಕ್ಕೆ (ಎನ್‌ಪಿಸಿಐ) ನೋಟಿಸ್‌ ಜಾರಿ ಮಾಡಿದೆ.

ವ್ಯಕ್ತಿಗಳು ಏಕೀಕೃತ ಪಾವತಿ ವ್ಯವಸ್ಥೆ(ಯುಪಿಐ) ಮೂಲಕ ವ್ಯಾಪಾರಿಗಳಿಗೆ ₹2 ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತ ಪಾವತಿಸಿದ ವೇಳೆ ಈ ಶುಲ್ಕ ವಿಧಿಸಲಾಗುತ್ತದೆ. ಇದು ಅಕ್ಟೋಬರ್‌ 15ರಿಂದ ಜಾರಿಗೆ ಬರಲಿದೆ.

ಎಂಡಿಆರ್‌ ಜಾರಿ ಕುರಿತಂತೆ ಹಣಕಾಸು ಸಚಿವಾಲಯ ಸೆಪ್ಟೆಂಬರ್ 14ರಂದು ಹೊರಡಿಸಿರುವ ಗೆಜೆಟ್‌ ಅಧಿಸೂಚನೆಗಳನ್ನು ಪ್ರಶ್ನಿಸಿ ವಕೀಲ ಅಂಜನ್‌ ದತ್ತಾ ಈ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿ.ಮೋಹನಾ ಅವರಿದ್ದ ನ್ಯಾಯಪೀಠ, ಈ ಅರ್ಜಿ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, 'ಯುಪಿಐ ಮೂಲಕ ನಡೆಯುವ ಶೇ 96ರಷ್ಟು ವಹಿವಾಟುಗಳಿಗೆ ಈ ಶುಲ್ಕದ ಹೊರೆ ಬೀಳುವುದಿಲ್ಲ. ಅಲ್ಲದೇ, ಅಗತ್ಯ ಸೇವೆಗಳ ಮೇಲಿನ ಶುಲ್ಕ ₹5 ಇರುವಂತೆ ಮಿತಿ ಹೇರಲಾಗಿದೆ' ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎನ್‌.ವೆಂಕಟರಾಮನ್‌, ಪೀಠಕ್ಕೆ ತಿಳಿಸಿದರು.

'ಇದು ತೆರಿಗೆ ಅಥವಾ ಸೆಸ್‌ ಅಲ್ಲ. ವಹಿವಾಟುಗಳಿಗೆ ತಗಲುವ ವೆಚ್ಚವನ್ನು ಸರಿದೂಗಿಸಲು ಪಾವತಿ ಸೇವೆ ಒದಗಿಸುವ ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳು ಈ ಮೊತ್ತ ವಿಧಿಸುತ್ತವೆ' ಎಂದೂ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯ ಕಾಂತ್‌, 'ಈ ವಿಚಾರವು ಕಾನೂನಾತ್ಮಕ ಅಂಶಗಳಿಗಿಂತ ತಾಂತ್ರಿಕ ಸಂಗತಿಗಳನ್ನೇ ಹೆಚ್ಚು ಒಳಗೊಂಡಿದೆ. ವಾಸ್ತವಾಂಶಗಳನ್ನು ಒಳಗೊಂಡ ಪ್ರಮಾಣಪತ್ರ ಸಲ್ಲಿಸಿ. ವಿಷಯ ಅರ್ಥ ಮಾಡಿಕೊಳ್ಳಲು ಇದು ನೆರವಾಗಲಿದೆ' ಎಂದರು.

'ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಭಾಗೀದಾರರು ಪ್ರಮಾಣಪತ್ರ ಸಲ್ಲಿಸುವವರೆಗೆ, ಎಂಡಿಆರ್‌ ವಿಧಿಸುವ ನಿರ್ಧಾರಕ್ಕೆ ತಡೆ ನೀಡಬೇಕು' ಎಂದು ಅರ್ಜಿದಾರರ ಪರ ವಕೀಲರು ಕೋರಿದರು.

ಮಧ್ಯಂತರ ತಡೆ ನೀಡಲು ನಿರಾಕರಿಸಿದ ಪೀಠ, ವಿಚಾರಣೆಯನ್ನು ಮುಂದೂಡಿತು.

Dailyhunt
Disclaimer: This content has not been generated, created or edited by Dailyhunt. Publisher: Prajavani