Dailyhunt Logo
  • Light mode
    Follow system
    Dark mode
    • Play Story
    • App Story
ಯೂರಿಯಾ, ಡಿಎಪಿ ಸೇರಿ ಮುಂಗಾರಿಗೆ ಸಾಕಾಗುವಷ್ಟು ರಸಗೊಬ್ಬರ ದಾಸ್ತಾನಿದೆ; ಕೇಂದ್ರ

ಯೂರಿಯಾ, ಡಿಎಪಿ ಸೇರಿ ಮುಂಗಾರಿಗೆ ಸಾಕಾಗುವಷ್ಟು ರಸಗೊಬ್ಬರ ದಾಸ್ತಾನಿದೆ; ಕೇಂದ್ರ

ವದೆಹಲಿ: ಮುಂಗಾರು ಬೆಳಗೆ ರಸಗೊಬ್ಬರದ ಕೊರತೆ ಇಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ಸಾಕಷ್ಟು ದಾಸ್ತಾನು ಇದೆ ಎಂದು ಹೇಳಿದೆ. ರೈತರು ಅಗತ್ಯವಿರುವ ಅಂದಾಜು ರಸಗೊಬ್ಬರದ ಪೈಕಿ ಶೇ 37ರಷ್ಟನ್ನು ಈಗಾಗಲೇ ಖರೀದಿಸಿದ್ದಾರೆ ಎಂದಿದೆ.

ರಸಗೊಬ್ಬರ ಇಲಾಖೆಯ ಪ್ರಕಾರ, ಈವರೆಗೆ ರೈತರು 102.78 ಲಕ್ಷ ಟನ್‌ನಷ್ಟು ರಸಗೊಬ್ಬರ ಖರೀದಿಸಿದ್ದಾರೆ.

ದೇಶದಲ್ಲಿ ಮುಂಗಾರು ಬಿತ್ತನೆಗೆ ಅಗತ್ಯವಿರುವ ರಸಗೊಬ್ಬರದ ಪ್ರಮಾಣವನ್ನು ಮರು ಅಂದಾಜು ಮಾಡಿರುವ ಕೃಷಿ ಸಚಿವಾಲಯವು 383.9 ಲಕ್ಷ ಟನ್ ಅಗತ್ಯವಿದೆ ಎಂದು ಸೋಮವಾರ ಹೇಳಿದೆ. ಇನ್ನೂ196.65 ಲಕ್ಷ ಟನ್ ದಾಸ್ತಾನು ಇದ್ದು, ಸಾಮಾನ್ಯ ಕಾಪು ದಾಸ್ತಾನಿಗಿಂತ ಹೆಚ್ಚೇ ಇದೆ ಎಂದು ರಸಗೊಬ್ಬರ ಇಲಾಖೆಯ ಜಂಟಿ ಕಾರ್ಯದರ್ಶಿ ವಂದನಾ ಪ್ರೇಯಶಿ ತಿಳಿಸಿದ್ದಾರೆ.

ಬಲಿಷ್ಠ ದೇಶೀಯ ಉತ್ಪಾದನೆ ಮತ್ತು ನಿಯಮಿತವಾಗಿ ಆಮದು ಮಾಡಿಕೊಳ್ಳುವುದರಿಂದ ಈಗಿರುವ ದಾಸ್ತಾನು ಅಗತ್ಯಕ್ಕೆ ತಕ್ಕಷ್ಟಿದೆ ಎಂದಿದ್ದಾರೆ.

ಈ ಋತುವಿಗೆ ಸರ್ಕಾರವು 50 ಲಕ್ಷ ಟನ್‌ಗೂ ಅಧಿಕ ಯೂರಿಯಾ, ಫಾಸ್ಪೆಟ್, ಪೊಟಾಶಿಯಂ ಅನ್ನು ದಾಸ್ತಾನು ಇರಿಸಿಕೊಂಡಿದೆ. ಇನ್ನೂ ಹೆಚ್ಚುವರಿ 17 ಲಕ್ಷ ಟನ್ ರಸಗೊಬ್ಬರ ಆಮದು ಮಾಡಿಕೊಳ್ಳಲು ಸರ್ಕಾರ ಕ್ರಮ ವಹಿಸುತ್ತಿದೆ. ಈ ಸಂಬಂಧ ರಾಷ್ಟ್ರೀಯ ರಸಗೊಬ್ಬರ ನಿಯಮಿತ ಸಂಸ್ಥೆಯು ಟೆಂಡರ್ ಕರೆದಿದೆ.

ಸರಬರಾಜು ಸರಪಳಿಯು ಬಲಿಷ್ಠವಾಗಿದ್ದು, 3.3 ಲಕ್ಷ ಟನ್ ಯೂರಿಯಾ, 2.57 ಲಕ್ಷ ಟನ್ ಡಿಎಪಿ, 1.1 ಲಕ್ಷ ಟನ್ ಸಲ್ಫರ್ ಮತ್ತು ಅಮೋನಿಯಾ ಸಲ್ಫೆಟ್ ಹೊತ್ತ 16 ಹಡಗುಗಳು ಹೊರ್ಮುಜ್ ಜಲಸಂಧಿ ಬಳಿ ಇವೆ ಎಂದು ಸರ್ಕಾರ ತಿಳಿಸಿದೆ.

ಒಮಾನ್, ಮಲೇಶಿಯಾ, ವಿಯಟ್ನಾಂ, ಜಾರ್ಜಿಯಾ, ನೈಜೀರಿಯಾ, ರಷ್ಯಾ, ಫಿನ್‌ಲ್ಯಾಂಡ್, ಈಜಿಫ್ಟ್, ಅಲ್ಗೇರಿಯಾ, ಟರ್ಕಿ ಮತ್ತು ನೆದರ್ಲ್ಯಾಂಡ್ಸ್‌ನಿಂದ ಭಾರತ ಯೂರಿಯಾ ಆಮದು ಮಾಡಿಕೊಳ್ಳುತ್ತಿದೆ.

ಡಿಎಪಿ, ಎನ್‌ಪಿಕೆ ರಸಗೊಬ್ಬರವನ್ನು ರಷ್ಯಾ ಮೊರೊಕ್ಕೊ, ಈಜಿಫ್ಟ್, ಅಮೆರಿಕ, ಜೋರ್ಡಾನ್, ದಕ್ಷಿಣ ಕೊರಿಯಾ, ಟುನಿಶಿಯಾ ಮತ್ತು ಸೌದಿ ಅರೇಬಿಯಾದಿಂದ ಆಮದು ಮಾಡಿಕೊಳ್ಳುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani