ಯಶ್ ಅಭಿನಯದ 'ಟಾಕ್ಸಿಕ್' ಮತ್ತು ಪ್ರೇಮ್ ನಿರ್ದೇಶನದ 'ಕೆಡಿ' ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ದೊಡ್ಡ ಬಜೆಟ್ ಚಲನಚಿತ್ರಗಳನ್ನು ನಿರ್ಮಿಸುತ್ತಿರುವ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ 'ಕೆವಿಎನ್ ಪ್ರೊಡಕ್ಷನ್ಸ್' ಇದೀಗ ತನ್ನ ಕ್ರಿಯೇಟಿವ್ ತಂಡವನ್ನು ವಿಸ್ತರಿಸಲು ಮುಂದಾಗಿದೆ.
ಚಿತ್ರರಂಗದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಸಾಧನೆ ಮಾಡಬೇಕೆಂಬ ಹಂಬಲವಿರುವ ಯುವ ತಂತ್ರಜ್ಞರಿಗೆ ಸಂಸ್ಥೆಯು ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿದೆ. ಸಿನಿಮಾಗಳ ಪ್ರೀ-ಪ್ರೊಡಕ್ಷನ್ ಮತ್ತು ಪೋಸ್ಟ್-ಪ್ರೊಡಕ್ಷನ್ ಕೆಲಸಗಳಿಗಾಗಿ ಕೆವಿಎನ್ ಪ್ರೊಡಕ್ಷನ್ಸ್, ಕಾನ್ಸೆಪ್ಟ್ ಆರ್ಟ್, ಕೃತಕ ಬುದ್ಧಿಮತ್ತೆ (ಎಐ), ತ್ರಿಡಿ ವಿನ್ಯಾಸ ಹಾಗೂ ಅನಿಮೇಷನ್ ಲೋಕದಲ್ಲಿ ಆಸಕ್ತಿ ಇರುವವರಿಂದ ಸಂಸ್ಥೆಯು ಅರ್ಜಿಗಳನ್ನು ಆಹ್ವಾನಿಸಿದೆ.
ಯಾವೆಲ್ಲಾ ವಿಭಾಗಗಳಲ್ಲಿ ಅವಕಾಶಗಳಿವೆ?
ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸ್ಥೆಯು, 'ನಾವು ನಮ್ಮ ಕ್ರಿಯೇಟಿವ್ ತಂಡವನ್ನು ವಿಸ್ತರಿಸುತ್ತಿದ್ದೇವೆ. ನಿಮಗೇನಾದರೂ ಕಾನ್ಸೆಪ್ಟ್ ಆರ್ಟ್, ಎಐ, 3D, ಅನಿಮೇಷನ್ ಅಥವಾ ಕಂಪೋಸಿಟಿಂಗ್‌ನಲ್ಲಿ ಆಸಕ್ತಿ ಮತ್ತು ಕೌಶಲ್ಯವಿದ್ದರೆ, ನಿಮ್ಮೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ' ಎಂದು ತಿಳಿಸಿದೆ.

