ಮಡಿಕೇರಿ: ಯುವ ಜನರು ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ನಮ್ಮ ಶ್ರೀಮಂತ ಪರಂಪರೆಯ ನೈಜ ವಾರಸುದಾರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಹಬಾಳ್ವೆಯ ಸಂದೇಶ, ಸೌಹಾರ್ದತೆ ಸಾರುವ ಕನ್ನಡ ನಾಡು, ಸ್ವಾಭಿಮಾನದ ಜೊತೆಗೆ ಸೋದರ ಭಾಷೆಗಳನ್ನು ಗೌರವಿಸುವ ವಿಶಾಲ ಭಾವನೆಯನ್ನೂ ಒಳಗೊಂಡಿದೆ. ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯದೊಂದಿಗೆ ಕರುನಾಡಿನ ಹಿರಿಮೆಯನ್ನು ಜಗದಗಲಕ್ಕೂ ಸಾರಿದೆ ಎಂದರು.
ಕೊಡಗಿನವರು ತಮ್ಮದೇ ಆದ ವಿಶಿಷ್ಟ ಕೊಡವ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದರೂ, ವಿಶಾಲ ಕನ್ನಡಿಗರ ಹಿತದೃಷ್ಟಿಯಿಂದ ಕರ್ನಾಟಕ ಏಕೀಕರಣಕ್ಕೆ ಒಮ್ಮತದ ಬೆಂಬಲ ಸೂಚಿಸಿದ್ದರು. ತಮ್ಮ ವಿಶಿಷ್ಟ ಸಾಂಸ್ಕೃತಿಕ ಹೆಜ್ಜೆ ಗುರುತು ಮೂಡಿಸುವ ಜೊತೆಗೆ ವಿಶಾಲ ಕರ್ನಾಟಕದ ನಿರ್ಮಾಣಕ್ಕಾಗಿ ತೋರಿದ ಸೌಹಾರ್ದತೆ ಮತ್ತು ಬೆಂಬಲ ಕನ್ನಡ ಏಕೀಕರಣದ ಇತಿಹಾಸದಲ್ಲಿ ಇಂದಿಗೂ ಚಿರಸ್ಮರಣೀಯವಾಗಿದೆ ಎಂದು ತಿಳಿಸಿದರು.

