Dailyhunt Logo
  • Light mode
    Follow system
    Dark mode
    • Play Story
    • App Story
ಯುವಕರ ದಾರಿ ತಪ್ಪಿಸಲು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸಿಜೆಐ

ಯುವಕರ ದಾರಿ ತಪ್ಪಿಸಲು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸಿಜೆಐ

ವದೆಹಲಿ: ನ್ಯಾಯಾಲಯದ ಕಲಾಪ ನಡೆಯುತ್ತಿದ್ದಾಗ ತಾವು ನೀಡಿದ ಹೇಳಿಕೆಯ ವಿಡಿಯೊದ ಸಣ್ಣ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿ ಯುವಕರನ್ನು ದಾರಿತಪ್ಪಿಸುವ ದುರುದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.

ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಡಿಡಿನ್ಯೂಸ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ನ್ಯಾಯಾಂಗದ ಕಲಾಪಗಳಲ್ಲಿ ನೀಡಲಾದ ಹೇಳಿಕೆಗಳನ್ನು ಅದರ ಸಂದರ್ಭವನ್ನು ಉಲ್ಲೇಖಿಸದೆಯೇ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಪ್ರಮಾಣ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಗಗಳು ದುರದೃಷ್ಟಕರ. ನನ್ನ ಹೇಳಿಕೆಯನ್ನು ಆ ರೀತಿ ಅರ್ಥೈಸಲಾಗುತ್ತದೆ ಎಂದು ಊಹಿಸಿಯೂ ಇರಲಿಲ್ಲ ಎಂದಿದ್ದಾರೆ.

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಾನು ಹೇಳದೇ ಇರುವುದನ್ನು ಹೇಳಿದ್ದೇನೆ ಎಂಬಂತೆ ಬಿಂಬಿಸಲಾಗಿದೆ. ಇದು ಅತ್ಯಂತ ದುರದೃಷ್ಟಕರ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ಯುವಜನರನ್ನು ದಾರಿ ತಪ್ಪಿಸುವ ಒಂದು ದುರುದ್ದೇಶಪೂರಿತ ಪ್ರಯತ್ನವಾಗಿದೆ. ನ್ಯಾಯಾಂಗ ಕಲಾಪಗಳ ಕುರಿತು ವರದಿ ಮಾಡುವಾಗ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕೆಂದು ಒತ್ತಾಯಿಸಿದ ಸೂರ್ಯಕಾಂತ್, ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯುವ ಸಾಂವಿಧಾನಿಕ ಜವಾಬ್ದಾರಿ ನಾಗರಿಕರಿಗೂ ಇದೆ ಎಂದು ಹೇಳಿದರು.

ಸಂವಿಧಾನವು ನಮಗೆ ಹಕ್ಕುಗಳ ಜೊತೆಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನೂ ನೀಡಿದೆ. ನಾವು ಹಕ್ಕುಗಳ ಬಗ್ಗೆ ಮಾತನಾಡುವಾಗ, ನಮ್ಮ ಕರ್ತವ್ಯಗಳನ್ನೂ ಪಾಲಿಸಬೇಕು. ಆದ್ದರಿಂದ, ತಮ್ಮ ಜವಾಬ್ದಾರಿಗಳನ್ನು ನೆನಪಿನಲ್ಲಿಟ್ಟುಕೊಂಡು ಮುಂದುವರಿಯಬೇಕೆಂದು ನಾನು ಒತ್ತಾಯಿಸುತ್ತೇನೆ. ಸಮಾಜದಲ್ಲಿ ಸಾಮರಸ್ಯ ನೆಲೆಸುವಂತೆ ಮಾಡಲು ನಾವೆಲ್ಲರೂ ಅವಿರತ ಪ್ರಯತ್ನ ಮಾಡಬೇಕು ಎಂದಿದ್ದಾರೆ.

2026ರ ಮೇ 15 ರಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದಾಗ ಹೇಳಿಕೆ ನೀಡಿದ್ದ ಮುಖ್ಯ ನ್ಯಾಯಮೂರ್ತಿ , ನಕಲಿ ಪದವಿಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗುವ ಅಥವಾ ಆರ್‌ಟಿಐ ಕಾರ್ಯಕರ್ತರಾಗುವ ಕೆಲವು ವ್ಯಕ್ತಿಗಳನ್ನು ವ್ಯವಸ್ಥೆಯ ಮೇಲೆ ದಾಳಿ ಮಾಡುವ ಜಿರಳೆಗಳಿಗೆ ಹೋಲಿಸಿದ್ದರು.

ಈ ಹೇಳಿಕೆಯು ಯುವಜನರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ಆನ್‌ಲೈನ್ ಚಳವಳಿಗೆ ನಾಂದಿ ಹಾಡಿತ್ತು.

ನೀಟ್-ಯುಜಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜಂತರ್ ಮಂತರ್‌ನಲ್ಲಿ ಸಿಜೆಪಿ ನೇತೃತ್ವದ ಪ್ರತಿಭಟನೆಗಳು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದವು. ಜುಲೈ 20 ರಂದು ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಉಂಟಾಗಿ, ಎರಡೂ ಕಡೆಯ ಹಲವರು ಗಾಯಗೊಂಡಿದ್ದರು. ಈ ಪ್ರತಿಭಟನೆಗಳ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani