ಚನ್ನರಾಯಪಟ್ಟಣ: ಯುವಸಮೂಹ ದುಶ್ಚಟಕ್ಕೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಚೇತನ್ ಕುಮಾರ್ ಸಲಹೆ ನೀಡಿದರು.
ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಪಡುವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಈಚೆಗೆ ಏರ್ಪಡಿಸಿದ್ದ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.
ದೇಶದ ಆಸ್ತಿ ಎನ್ನಿಸಿಕೊಂಡಿರುವಯುವಜನಾಂಗದ ಶಕ್ತಿ ಸದ್ಬಳಕೆಯಾಗಬೇಕು. ಸಕಾರಾತ್ಮಕ ಯೋಚನೆಗಳನ್ನು ರೂಢಿಸಿಕೊಂಡು ಉತ್ತಮ ಸಾಧನೆಮಾಡಬೇಕು. ಸಹವಾಸ ದೋಷದಿಂದ ಮಾದಕ ವಸ್ತುಗಳ ವ್ಯಸನಿಯಾಗಬಾರದು. ಇದರ ಬಗ್ಗೆ ಅರಿವು ಮೂಡಿಸಲು ಶಾಲಾ, ಕಾಲೇಜುಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
'ಧೂಮಪಾನ, ಮದ್ಯಪಾನ, ಮಾದಕ ದ್ರವದ ವ್ಯಸನಿಯಾದರೆ ಆರೋಗ್ಯ ಹದಗೆಡುತ್ತದೆ. ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ.ಆರ್ಥಿಕ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಉತ್ತಮ ಚಿಂತನೆ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು' ಎಂದು ತಾಲ್ಲೂಕು ಸ್ಕೌಟ್ಸ್ ಗೈಡ್ಸ್ ಘಟಕದ ಖಜಾಂಚಿ ಎ.ಎಂ. ಜಯರಾಂ ಹೇಳಿದರು.
ಮುಖ್ಯಶಿಕ್ಷಕಿ ಶೋಭಾಶ್ರೀ, ಶಿಕ್ಷಕರಾದ ರಾಘವೇಂದ್ರ, ಜಿ.ಬಿ. ನಾಗರಾಜ, ಮೋಹನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕ ನಾಗರಾಜು, ಸೇವಾ ಪ್ರತಿನಿಧಿ ಗೀತಾ ಭಾಗವಹಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260615-36-208080821

