
ಬೆಂಗಳೂರು: ಬಿಜೆಪಿ ನಾಯಕರ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸರು ಪ್ರಮುಖ ಆರೋಪಿ ಪುಣ್ಯೇಶ್ ಎನ್ನುವಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿ ಒಂದು ಬಾಕ್ಸ್‌ನಲ್ಲಿ ಮೊಟ್ಟೆಗಳನ್ನು ತಂದು ಘಟನೆ ನಡೆಸಿರುವುದು ತಿಳಿದು ಬಂದಿದ್ದು, ಈ ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ಪ್ರಮುಖ ಆರೋಪಿ ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೊಟ್ಟೆಗಳನ್ನು ಎಲ್ಲಿಂದ ತರಲಾಗಿತ್ತು, ಘಟನೆ ಪೂರ್ವಯೋಜಿತವಾಗಿತ್ತೇ, ಯಾರಾದರೂ ಸೂಚನೆ ನೀಡಿದ್ದರೇ ಹಾಗೂ ಪುಣ್ಯೇಶ್ ಜೊತೆಗೆ ಇದ್ದವರು ಯಾರು ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ ಏನು..?
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಕಚೇರಿಗೆ ತೆರಳುತ್ತಿದ್ದ ವೇಳೆ, ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರು ಕ್ವೀನ್ಸ್ ರೋಡ್ ಬಳಿ ಕಾರಿನಿಂದ ಇಳಿದ ತಕ್ಷಣ ಕೆಲವರು ಅವರ ಮೇಲೆ ಮೊಟ್ಟೆ ಎಸೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಶಾಸಕ ಹರೀಶ್ ಅವರನ್ನು ಸುರಕ್ಷಿತವಾಗಿ ಸ್ಥಳದಿಂದ ಕರೆದೊಯ್ದಿದ್ದರು. ಈ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

