ಬೆಂಗಳೂರು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಪೆಲೆಟ್ ಗನ್, ರೈಫಲ್‌ಗಳನ್ನು ಬಳಕೆ ಮಾಡಿರುವುದು ಅತ್ಯಂತ ಆಘಾತಕಾರಿ ವಿಚಾರವಾಗಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಲವು ಪೊಲೀಸರು ವಿದ್ಯಾರ್ಥಿಗಳನ್ನು ಕಾಲುಕೊಟ್ಟು ಬೀಳಿಸುತ್ತಿರುವುದು, ಕೆಲವರು ಮಹಿಳೆಯರು, ಅಪ್ರಾಪ್ತರು ಎಂದು ಲೆಕ್ಕಿಸದೆ ಕಪಾಳಕ್ಕೆ ಹೊಡೆಯುತ್ತಿರುವುದು, ವಿದ್ಯಾರ್ಥಿನಿಯರಿಗೆ ಲಾಠಿಯಿಂದ ಹಿಂದಿನಿಂದ ತಿವಿಯುತ್ತಿರುವುದು, ಜೇಬಿನಲ್ಲಿ ಗಾಂಜಾ ಇಟ್ಟು ಪ್ರಕರಣ ದಾಖಲಿಸುವುದಾಗಿ ವಿದ್ಯಾರ್ಥಿಗಳನ್ನು ಹೆದರಿಸುತ್ತಿರುವ ವಿಡಿಯೋಗಳನ್ನು ನೋಡಿದ್ದೇವೆ ಎಂದು ಕಿಡಿಕಾರಿದ್ದಾರೆ.
ಸಮವಸ್ತ್ರ ಧರಿಸದ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಹೊಡೆಯುತ್ತಿರುವುದು, ಮೊಳೆಗಳಿರುವ ಲಾಠಿಗಳನ್ನು ಬಳಕೆ ಮಾಡುತ್ತಿರುವುದು, ಪೊಲೀಸರೇ ವಾಹನಗಳ ಗಾಜುಗಳನ್ನು ಪುಡಿ ಮಾಡುತ್ತಿರುವುದು ಹೀಗೆ ಸಾಕಷ್ಟು ರೀತಿಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿರುವ ದೃಶ್ಯಗಳನ್ನು ವೀಕ್ಷಿಸಿದ್ದೇವೆ. ಹೀಗೆ ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ವಿರುದ್ಧ ದಾಳಿ ನಡೆಸಿರುವುದು ಅಕ್ಷಮ್ಯ ಎಂದು ಸಿದ್ದರಾಮಯ್ಯ ಖಂಡಿಸಿದ್ದಾರೆ.
ಇದನ್ನೂ ಓದಿ : ನೀಟ್ ಪ್ರತಿಭಟನೆಗೆ ಲಕ್ಷಾಂತರ ರೂ. ವೆಚ್ಚ : ಹಣ ಎಲ್ಲಿಂದ ಬಂತು?
ದೆಹಲಿ ಪೊಲೀಸರು ಗೃಹ ಇಲಾಖೆಯ ಸುಪರ್ದಿಯಲ್ಲಿ ಬರುವುದರಿಂದ ಸಚಿವಅಮಿತ್ ಶಾ ನೇರ ಹೊಣೆ. ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ದಾಳಿ ನಡೆಸಲು ಅಮಿತ್ ಶಾ ಅವರೇ ಆದೇಶ ನೀಡಿರುವ ಅನುಮಾನ ವ್ಯಕ್ತವಾಗುತ್ತಿದೆ. ಅವರು ಆದೇಶ ಮಾಡಿಲ್ಲದಿದ್ದರೆ ಬೇರೆ ಯಾರು ಮಾಡಿರುತ್ತಾರೆ? ಅಮಿತ್ ಶಾ ಅವರ ಗಮನಕ್ಕೆ ಬಾರದಂತೆ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಅವರೇ ನೇರವಾಗಿ ಆದೇಶಿಸಿದ್ದಾರೆ ಎಂದಾದರೆ ಗೃಹಸಚಿವರು ಅಸಮರ್ಥ ಎಂದರ್ಥವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅಮಿತ್ ಶಾ ದಾಳಿಯ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂಬ ರಾಹುಲ್ ಗಾಂಧಿ ಅವರ ಒತ್ತಾಯಕ್ಕೆ ನನ್ನ ಬೆಂಬಲವೂ ಇದೆ. ಉಪವಾಸ ಸತ್ಯಾಗ್ರಹ ನಡೆಸುವುದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ನ್ಯಾಯ ಕೇಳುವ ವಿದ್ಯಾರ್ಥಿಗಳನ್ನು ಭಯೋತ್ಪಾದಕರಿಗಿಂತ ಕಡೆಯಾಗಿ ನಡೆಸಿಕೊಳ್ಳುವುದು ಪ್ರಜಾಪ್ರಭುತ್ವ ಸರ್ಕಾರಕ್ಕೆ ತಕ್ಕುದಾದುದ್ದಲ್ಲ ಎಂದು ಸಿದ್ದರಾಮಯ್ಯ ಗೃಹ ಸಚಿವ ಅಮಿತ್ ಶಾ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
