
ಐಪಿಎಲ್‌ನಲ್ಲಿ ಆಟಗಾರನಾಗಿ ಮಹೇಂದ್ರ ಸಿಂಗ್ ಧೋನಿ ಅವರ ಪಯಣ ಅಂತ್ಯಗೊಂಡ ಬೆನ್ನಲ್ಲೇ, ಅವರ ಅಭಿಮಾನಿಗಳು ಹಾಗೂ ಗಣ್ಯರಿಂದ ಅಭಿನಂದನೆ ಮತ್ತು ಭಾವುಕ ವಿದಾಯದ ಸಂದೇಶಗಳು ಹರಿದುಬರುತ್ತಿವೆ. ಈ ನಡುವೆ ಕೇರಳದ ನಾಯಕ ವಿ.ಡಿ. ಸತೀಶನ್ ಅವರು ಧೋನಿ ಅವರ ಕ್ರಿಕೆಟ್ ಬದುಕು ಮತ್ತು ಸಾಧನೆಗಳನ್ನು ಸ್ಮರಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
'ಮೌನವಾಗಿದ್ದರೂ ಮೈದಾನದಲ್ಲಿ ದಂತಕಥೆಯೊಬ್ಬರ ಉಪಸ್ಥಿತಿ ಪ್ರತಿಧ್ವನಿಸುತ್ತಿತ್ತು' ಎಂಬ ಅರ್ಥದ ಸಾಲಿನೊಂದಿಗೆ ತಮ್ಮ ಸಂದೇಶ ಆರಂಭಿಸಿರುವ ಸತೀಶನ್, ಧೋನಿ ಅವರನ್ನು ಕ್ರಿಕೆಟ್ ಇತಿಹಾಸದ ಅಪರೂಪದ ವ್ಯಕ್ತಿತ್ವ ಎಂದು ಬಣ್ಣಿಸಿದ್ದಾರೆ. ಕ್ರೀಡಾಂಗಣಗಳಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿದ್ದರೂ ಧೋನಿ ಮಾತ್ರ ಶಾಂತಚಿತ್ತದಿಂದ, ಆತ್ಮವಿಶ್ವಾಸ ಮತ್ತು ಅದ್ಭುತ ಸಮಯಪ್ರಜ್ಞೆಯೊಂದಿಗೆ ತಂಡವನ್ನು ಮುನ್ನಡೆಸುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೆಲುವಿನ ಸಂಭ್ರಮದ ಸಂದರ್ಭಗಳಲ್ಲಿಯೂ, ಕಠಿಣ ಪರಿಸ್ಥಿತಿಗಳಲ್ಲಿಯೂ ಧೋನಿ ತಮ್ಮ ನಾಯಕತ್ವದ ಮೂಲಕ ಅನೇಕ ತಲೆಮಾರಿನ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಕೋಟ್ಯಂತರ ಅಭಿಮಾನಿಗಳಿಗೆ ಮರೆಯಲಾಗದ ಕ್ಷಣಗಳನ್ನು ನೀಡಿದ್ದಾರೆ. ಆಟಗಾರನಾಗಿ ಅವರ ಉಪಸ್ಥಿತಿ ಇನ್ನು ಮೈದಾನದಲ್ಲಿ ಕಾಣಿಸದಿದ್ದರೂ, ಅವರು ನಿರ್ಮಿಸಿರುವ ಪರಂಪರೆ ಮುಂದಿನ ಪೀಳಿಗೆಯಲ್ಲಿಯೂ ಜೀವಂತವಾಗಿರಲಿದೆ ಎಂದು ಸತೀಶನ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗಿನ ಧೋನಿ ಅವರ ಪಯಣ ಈಗ ಹೊಸ ಅಧ್ಯಾಯ ಪ್ರವೇಶಿಸುತ್ತಿದೆ. ಮೆಂಟರ್ ಆಗಿ ತಮ್ಮ ಅನುಭವ ಮತ್ತು ಜ್ಞಾನವನ್ನು ಮುಂದಿನ ತಲೆಮಾರಿನ ಆಟಗಾರರಿಗೆ ಹಂಚಿಕೊಳ್ಳಲಿದ್ದಾರೆ. ಕೆಲವರು ದಾಖಲೆಗಳನ್ನು ಬಿಟ್ಟು ಹೋಗುತ್ತಾರೆ. ಆದರೆ ದಂತಕಥೆಗಳು ಕಾಲವೂ ಅಳಿಸಲಾಗದ ಪರಂಪರೆಯನ್ನು ಬಿಟ್ಟು ಹೋಗುತ್ತಾರೆ ಎಂಬ ಅಭಿಪ್ರಾಯವನ್ನು ಸತೀಶನ್ ವ್ಯಕ್ತಪಡಿಸಿದ್ದಾರೆ.

ಧೋನಿ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಕರೆಯುವ 'ತಲಾ' ಎಂಬ ಹೆಸರನ್ನೂ ಉಲ್ಲೇಖಿಸಿರುವ ಸತೀಶನ್, ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಧೋನಿ ನಿಜವಾದ ಶ್ರೇಷ್ಠತೆ ಪ್ರದರ್ಶನಕ್ಕೆ ಗದ್ದಲದ ಅಗತ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಿದ್ದಾರೆ.
ಮೈದಾನದಲ್ಲಿ ಧೋನಿ ಅವರ ಅನುಪಸ್ಥಿತಿ ಅಭಿಮಾನಿಗಳಿಗೆ ಕಾಡಲಿದೆ. ಆದರೆ ಅವರು ನೀಡಿದ ಸ್ಫೂರ್ತಿ ಮತ್ತು ರೂಪಿಸಿದ ಪರಂಪರೆ ಮುಂದಿನ ಹಲವು ತಲೆಮಾರುಗಳಿಗೂ ಪ್ರೇರಣೆಯಾಗಲಿದೆ ಎಂದು ತಮ್ಮ ಗೌರವ ನಮನದಲ್ಲಿ ತಿಳಿಸಿದ್ದಾರೆ.
ಇದೇ ನವೆಂಬರ್ 17ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಧೋನಿ ಅವರನ್ನು 2027ರ ಐಪಿಎಲ್‌ನಿಂದ ತಂಡದ ಮೆಂಟರ್ ಆಗಿ ನೇಮಕ ಮಾಡಿರುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. 2008ರಿಂದ ತಂಡದೊಂದಿಗಿರುವ ಧೋನಿ, ನಾಯಕನಾಗಿ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಆಟಗಾರನಾಗಿ ಅವರ ಐಪಿಎಲ್ ಪಯಣ ಮುಗಿದಿದ್ದರೂ, ಚೆನ್ನೈ ತಂಡದೊಂದಿಗಿನ ಬಾಂಧವ್ಯ ಹೊಸ ಜವಾಬ್ದಾರಿಯೊಂದಿಗೆ ಮುಂದುವರಿಯಲಿದೆ.
