
ಜಗತ್ತಿನಾದ್ಯಂತದ ಕೋಟ್ಯಂತರ ಫುಟ್‌ಬಾಲ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತೀಯ ಕಾಲಮಾನ ಪ್ರಕಾರ ಭಾನುವಾರ ಮಧ್ಯರಾತ್ರಿ 12.30ಕ್ಕೆ ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತು ಯುರೋಪಿಯನ್ ಚಾಂಪಿಯನ್ ಸ್ಪೇನ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಈ ಮಹತ್ವದ ಪಂದ್ಯದಲ್ಲಿ ಟೂರ್ನಿಯ ಅತಿ ಹೆಚ್ಚು ಗೋಲು ಗಳಿಸಿರುವ ಅರ್ಜೆಂಟೀನಾ ದಾಳಿಪಡೆ ಹಾಗೂ ಅತ್ಯಂತ ಬಲಿಷ್ಠ ರಕ್ಷಣಾ ಆಟ ಪ್ರದರ್ಶಿಸಿರುವ ಸ್ಪೇನ್ ತಂಡದ ನಡುವೆ ರೋಚಕ ಪೈಪೋಟಿ ನಡೆಯುವ ನಿರೀಕ್ಷೆಯಿದೆ.ಎಲ್ಲರ ಗಮನ ಸೆಳೆದಿರುವುದು ಅರ್ಜೆಂಟೀನಾದ ಅನುಭವಿ ನಾಯಕ ಲಿಯೋನೆಲ್ ಮೆಸ್ಸಿ ಮತ್ತು ಸ್ಪೇನ್‌ನ ಯುವ ಪ್ರತಿಭೆ ಲ್ಯಾಮಿನ್ ಯಮಲ್ ನಡುವಿನ ಮುಖಾಮುಖಿ. ಅನುಭವ ಮತ್ತು ಯುವ ಶಕ್ತಿಯ ಈ ಹೋರಾಟ ಫೈನಲ್ ಪಂದ್ಯಕ್ಕೆ ಮತ್ತಷ್ಟು ರೋಚಕತೆ ತಂದಿದೆ.

ಪಂದ್ಯದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸೋಮವಾರ ಎಲ್ಲಾ ಶಾಲೆಗಳು ಹಾಗೂ ಕಾಲೇಜುಗಳಿಗೆ (ವೃತ್ತಿಪರ ಕಾಲೇಜುಗಳು ಸೇರಿ) ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಪಂದ್ಯವು ಮಧ್ಯರಾತ್ರಿಯಿಂದ ಆರಂಭವಾಗಿ ಹೆಚ್ಚುವರಿ ಸಮಯ ಅಥವಾ ಪೆನಾಲ್ಟಿ ಶೂಟೌಟ್‌ಗೆ ಹೋದರೆ ಮುಂಜಾನೆವರೆಗೂ ಮುಂದುವರಿಯುವ ಸಾಧ್ಯತೆ ಇರುವುದರಿಂದ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.ಆದಾಗ್ಯೂ, ಈಗಾಗಲೇ ನಿಗದಿಯಾಗಿರುವ ಸರ್ಕಾರಿ ಪರೀಕ್ಷೆಗಳು ಯಾವುದೇ ಬದಲಾವಣೆ ಇಲ್ಲದೆ ಪೂರ್ವನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಧಿಕೃತ ಆದೇಶ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.

ಒಂದೆಡೆ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯವಾಡಲಿದ್ದು, ಅರ್ಜೆಂಟೀನಾ ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಮತ್ತೊಂದೆಡೆ, 2010ರ ಬಳಿಕ ಮತ್ತೆ ವಿಶ್ವಕಪ್ ಎತ್ತಿಹಿಡಿಯುವ ಗುರಿಯೊಂದಿಗೆ ಸ್ಪೇನ್ ತಂಡ ಆತ್ಮವಿಶ್ವಾಸದಿಂದ ಮೈದಾನಕ್ಕಿಳಿಯಲಿದೆ. ಈ ಹೈವೋಲ್ಟೇಜ್ ಫೈನಲ್ ವಿಶ್ವದ ಫುಟ್‌ಬಾಲ್ ಪ್ರೇಮಿಗಳಿಗೆ ಮರೆಯಲಾಗದ ಕ್ಷಣಗಳನ್ನು ನೀಡುವ ನಿರೀಕ್ಷೆಯಿದೆ.
