Dailyhunt Logo
  • Light mode
    Follow system
    Dark mode
    • Play Story
    • App Story

ಮಹೇಂದ್ರ ಆನೆ ಹಿಂದೇಟು, ಅರ್ಧಕ್ಕೆ ನಿಂತ ಅಂಬಾರಿ ತಾಲೀಮು: ಅಸಲಿ ಕಾರಣವೇನು?

Pratidhvani 2 weeks ago

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಸಿದ್ಧತೆ ನಡೆಸುತ್ತಿರುವ ಗಜಪಡೆಯ ಮಹೇಂದ್ರ ಆನೆ ಮರದ ಅಂಬಾರಿ ಹೊತ್ತು ಸಾಗುವ ತಾಲೀಮಿನ ವೇಳೆ ಹಿಂದೇಟು ಹಾಕಿದ ಘಟನೆ ಗುರುವಾರ ಸಂಜೆ ನಡೆದಿದೆ. ಆಯುರ್ವೇದ ವೃತ್ತದ ಬಳಿ ಆನೆ ಮುಂದೆ ಸಾಗದೆ ನಿಂತಿದ್ದರಿಂದ, ಅದರ ಸುರಕ್ಷತೆಯ ದೃಷ್ಟಿಯಿಂದ ಮರದ ಅಂಬಾರಿಯನ್ನು ಇಳಿಸಿ ತಾಲೀಮನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಈ ಮೂಲಕ ಇದೇ ಮೊದಲ ಬಾರಿಗೆ ರಾಜಮಾರ್ಗದಲ್ಲಿ ಮರದ ಅಂಬಾರಿ ತಾಲೀಮು ಅರ್ಧಕ್ಕೆ ನಿಂತಿದೆ.

ಗುರುವಾರ ಸಂಜೆ 4.30ರ ಸುಮಾರಿಗೆ ಮೈಸೂರು ಅರಮನೆ ಆವರಣದಲ್ಲಿ ತಾಲೀಮು ಆರಂಭವಾಯಿತು. ಮರದ ಅಂಬಾರಿ ಹೊತ್ತು ಜಂಬೂಸವಾರಿ ಮಾರ್ಗದಲ್ಲಿ ಸರಾಗವಾಗಿ ಸಾಗುತ್ತಿದ್ದ ಮಹೇಂದ್ರ ಆನೆ ಕೆ.ಆರ್. ವೃತ್ತ ತಲುಪಿದ ಬಳಿಕ ಹಿಂದೇಟು ಹಾಕಲು ಆರಂಭಿಸಿತು. ಮಾವುತ ರಾಜಣ್ಣ ಮತ್ತು ಕಾವಾಡಿ ಮಲ್ಲಿಕಾರ್ಜುನ ಅವರ ಸೂಚನೆಯಂತೆ ಕುಮ್ಕಿ ಆನೆಗಳ ಸಹಾಯದಿಂದ ಮುಂದೆ ಸಾಗಿತು.ಬಳಿಕ ಬಾಟಾ ಶೋರೂಂ ಜಂಕ್ಷನ್ ದಾಟಿದ ಮಹೇಂದ್ರ, ಆಯುರ್ವೇದ ವೃತ್ತದ ಬಳಿ ಮುಂದೆ ಸಾಗದೆ ನಿಂತುಕೊಂಡಿತು. ಆನೆಯನ್ನು ಮುಂದಕ್ಕೆ ಕರೆದೊಯ್ಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ, ರಸ್ತೆ ಬದಿಯ ಮರಕ್ಕೆ ಹಗ್ಗ ಕಟ್ಟಿ ಮರದ ಅಂಬಾರಿಯನ್ನು ಕೆಳಗಿಳಿಸಲಾಯಿತು. ನಂತರ ಅದನ್ನು ಗೂಡ್ಸ್ ಆಟೋದಲ್ಲಿ ಇರಿಸಿ ಅರಮನೆಗೆ ಸುರಕ್ಷಿತವಾಗಿ ಸಾಗಿಸಲಾಯಿತು. ಉಳಿದ ಆನೆಗಳನ್ನೂ ಅರಮನೆಯ ಆನೆ ಬಿಡಾರಕ್ಕೆ ವಾಪಸ್ ಕರೆತರಲಾಯಿತು.

ಮಹೇಂದ್ರ ಆನೆಯ ಮೇಲೆ ಸುಮಾರು 280 ಕೆ.ಜಿ. ತೂಕದ ಮರದ ಅಂಬಾರಿಯನ್ನು ಕೂರಿಸಲಾಗಿತ್ತು. ಅದರೊಳಗೆ ನಾಲ್ಕು ಮರಳು ಮೂಟೆಗಳನ್ನು ಇರಿಸಲಾಗಿತ್ತು. ಗಾದಿ, ನಾಮದಾ ಸೇರಿದಂತೆ ಒಟ್ಟು ಸುಮಾರು 600 ಕೆ.ಜಿ. ಭಾರವನ್ನು ಹೊತ್ತು ಆನೆ ತಾಲೀಮು ನಡೆಸುತ್ತಿತ್ತು. ಲಕ್ಷ್ಮೀ ಮತ್ತು ರೂಪಾ ಆನೆಗಳು ಕುಮ್ಕಿಗಳಾಗಿ ಮಹೇಂದ್ರನೊಂದಿಗೆ ಸಾಗಿದ್ದವು.ಮಹೇಂದ್ರ ಆನೆಯ ಮರದ ಅಂಬಾರಿ ತಾಲೀಮು ಈ ಬಾರಿ ಎರಡನೇ ಬಾರಿಗೆ ಅರ್ಧಕ್ಕೆ ನಿಂತಿದೆ. ಮೊದಲ ದಿನ ಜೋರು ಮಳೆಯ ಕಾರಣ ಅರಮನೆಯ ಬಲರಾಮ ದ್ವಾರದ ಬಳಿಯೇ ತಾಲೀಮನ್ನು ಮೊಟಕುಗೊಳಿಸಲಾಗಿತ್ತು. ಸೆಪ್ಟೆಂಬರ್ 25ರಂದು ಮಳೆಯ ನಡುವೆ ತಾಲೀಮಿಗೆ ತೆರಳಲು ಮಹೇಂದ್ರ ಹಿಂದೇಟು ಹಾಕಿದ್ದರಿಂದ ಅಂದೂ ಮರದ ಅಂಬಾರಿಯನ್ನು ಇಳಿಸಲಾಗಿತ್ತು.

ಈ ಬಾರಿ ಆಯುರ್ವೇದ ವೃತ್ತದ ಬಳಿ ಆನೆ ನಿಂತಿದ್ದರಿಂದ ಮತ್ತೆ ತಾಲೀಮನ್ನು ಮೊಟಕುಗೊಳಿಸಬೇಕಾಯಿತು. ಆನೆ ಹಿಂದೇಟು ಹಾಕಲು ನಿಖರ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಮಹೇಂದ್ರನ ಆರೋಗ್ಯವನ್ನು ಪರೀಕ್ಷಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.42 ವರ್ಷದ ಮಹೇಂದ್ರ ಆನೆ ಈ ಬಾರಿ ಐದನೇ ಬಾರಿಗೆ ಮೈಸೂರು ದಸರಾ ಗಜಪಡೆಗೆ ಆಗಮಿಸಿದೆ. ಈ ಹಿಂದೆ ಶ್ರೀರಂಗಪಟ್ಟಣ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿತ್ತು. ಹಿಂದಿನ ತಾಲೀಮುಗಳಲ್ಲಿಯೂ ಮರಳು ಮೂಟೆಗಳ ಭಾರ ಮತ್ತು ಮರದ ಅಂಬಾರಿಯನ್ನು ಹೊತ್ತು ಸರಾಗವಾಗಿ ಸಾಗಿದ್ದರಿಂದ, ಈ ಬಾರಿ ಅಂಬಾರಿ ಹೊರುವ ಆನೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇತ್ತು.ಆದರೆ, ಈ ಬಾರಿ ಸತತ ಎರಡು ಸಂದರ್ಭಗಳಲ್ಲಿ ತಾಲೀಮು ಅರ್ಧಕ್ಕೆ ನಿಂತಿರುವುದು ಮಹೇಂದ್ರನ ಆಯ್ಕೆಯ ಕುರಿತು ಪ್ರಶ್ನೆ ಮೂಡಿಸಿದೆ. ಸದ್ಯ ಪ್ರಶಾಂತ ಮತ್ತು ಧನಂಜಯ ಆನೆಗಳು ಅಂಬಾರಿ ಹೊರುವ ಆನೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಸುಗ್ರೀವ ಮತ್ತು ಏಕಲವ್ಯ ಆನೆಗಳೂ ಮರದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಭರವಸೆ ಮೂಡಿಸಿವೆ.

ಮಹೇಂದ್ರನ ಆರೋಗ್ಯ ಪರೀಕ್ಷೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಆದರೆ, ಆನೆಯನ್ನು ಅಂಬಾರಿ ಹೊರುವ ಪಟ್ಟಿಯಿಂದ ಕೈಬಿಡುವ ಕುರಿತು ಈವರೆಗೆ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Pratidhvani