Dailyhunt

"ಒಳ್ಳೆಯ ಕಾರಣಕ್ಕೆ ಸರ್ಕಾರ ಒಂದು ದಿನವೂ ಸುದ್ದಿಯಾಗಿಲ್ಲ": ಸಿ.ಟಿ. ರವಿ ವಾಗ್ದಾಳಿ

Pratidhvani 3 weeks ago

ಮುಖ್ಯಮಂತ್ರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಕಾಂಗ್ರೆಸ್ ಸರ್ಕಾರದ ಕಾರ್ಯಕ್ಷಮತೆಯನ್ನು ಪ್ರಶ್ನಿಸಿದರು. ಸರ್ಕಾರದ ದುರಾಡಳಿತ ಕುರಿತ ಆರೋಪಪಟ್ಟಿಯನ್ನು ಬಿಡುಗಡೆ ಮಾಡಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿರುವ ಉದಾಹರಣೆ ಇಲ್ಲ ಎಂದು ಆರೋಪಿಸಿದ ಅವರು, ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ಅಪರಾಧ ಪ್ರಕರಣಗಳೇ ಸರ್ಕಾರದ ಹೆಸರು ಕೇಳಿಸಿಕೊಳ್ಳಲು ಕಾರಣವಾಗಿವೆ ಎಂದು ಹೇಳಿದರು. ಇದೇ ಅವಧಿಯಲ್ಲಿ ನಡೆದ ದುರಾಡಳಿತ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಗಳ ಕುರಿತ ಚಾರ್ಜ್‌ಶೀಟ್ ಅನ್ನು ಬಿಡುಗಡೆ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಡ್ರಗ್ಸ್ ಪ್ರಕರಣಗಳು, ರೈತರ ಹಾಗೂ ಸರ್ಕಾರಿ ನೌಕರರ ಆತ್ಮಹತ್ಯೆಗಳು, ಬಾಣಂತಿಯರು ಮತ್ತು ಶಿಶುಗಳ ಸಾವಿನ ಪ್ರಕರಣಗಳು ಹೆಚ್ಚಳವಾಗಿರುವುದರಿಂದ ಸರ್ಕಾರ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಲ್ಲಿದೆ ಎಂದು ಟೀಕಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಪ್ರತಿಭಟನೆಗಳು, ಅತಿಥಿ ಉಪನ್ಯಾಸಕರ ಹಾಗೂ ಗುತ್ತಿಗೆ ನೌಕರರ ಹೋರಾಟಗಳು ಸರ್ಕಾರದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿವೆ ಎಂದರು.

ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳು ಸಹ ಸರ್ಕಾರದ ವೈಫಲ್ಯವನ್ನು ತೋರಿಸುತ್ತವೆ ಎಂದು ಅವರು ಆರೋಪಿಸಿದರು. ಅಭಿವೃದ್ಧಿ ಕಾರ್ಯಗಳ ಮೂಲಕ ಸರ್ಕಾರ ಸುದ್ದಿಯಾಗಿರುವುದು ಕಾಣಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳನ್ನು ಉಲ್ಲೇಖಿಸಿದ ಅವರು, ಈ ಪ್ರಕರಣಗಳಲ್ಲಿ ಸಚಿವರ ರಾಜೀನಾಮೆ ಕೂಡ ನಡೆದಿರುವುದು ಸರ್ಕಾರದ ಮಾನಹಾನಿಯ ಉದಾಹರಣೆ ಎಂದು ಹೇಳಿದರು. ಸಾರ್ವಜನಿಕ ಹಣದ ದುರುಪಯೋಗದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು.

ಕಮಿಷನ್ ಆರೋಪಗಳ ವಿಚಾರದಲ್ಲಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ ರವಿ, ಗುತ್ತಿಗೆದಾರರಿಂದಲೇ 60% ಕಮಿಷನ್ ಆರೋಪ ಕೇಳಿಬಂದಿದೆ ಎಂದು ಹೇಳಿದರು. ಈ ಹಿನ್ನೆಲೆ ಅಧಿಕಾರದಲ್ಲೇ ಮುಂದುವರಿಯುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಇದಲ್ಲದೆ, ರಾಜ್ಯದಲ್ಲಿ ವಿವಿಧ ಸೇವೆಗಳ ದರ ಏರಿಕೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ನಂದಿನಿ ಹಾಲು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್, ಬಸ್ ಮತ್ತು ಮೆಟ್ರೋ ಪ್ರಯಾಣ ದರ, ವಿದ್ಯುತ್ ದರ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ ಎಂದು ಆರೋಪಿಸಿದರು.

ಸ್ಟಾಂಪ್ ಡ್ಯೂಟಿ ಹೆಚ್ಚಳ ಮತ್ತು ಕಡಿಮೆ ಮೌಲ್ಯದ ಸ್ಟಾಂಪ್ ಪೇಪರ್ ಲಭ್ಯವಿಲ್ಲದಿರುವುದೂ ಜನರಿಗೆ ಭಾರವಾಗಿದೆ ಎಂದು ಹೇಳಿದರು. ಸರ್ಕಾರ ಜನಪರ ಕಾರ್ಯಗಳಿಗಿಂತಲೂ ದರ ಏರಿಕೆ ಮತ್ತು ದುರಾಡಳಿತದ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿದೆ ಎಂದು ಸಿ.ಟಿ. ರವಿ ಆರೋಪಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Pratidhvani