Dailyhunt Logo
  • Light mode
    Follow system
    Dark mode
    • Play Story
    • App Story

ರೈತರ ಹಿತಾಸಕ್ತಿ ಬಲಿಕೊಟ್ಟು ಕಾಂಗ್ರೆಸ್‌ನ ರಾಜಕೀಯ ಲೆಕ್ಕಾಚಾರ: ವಿಜಯೇಂದ್ರ ಕಿಡಿ

Pratidhvani 3 weeks ago

ಮಂಡ್ಯ: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅಧಿಕಾರಕ್ಕೆ ಬಂದ ಬಳಿಕ ರೈತರ ಸಂಕಷ್ಟವನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದರು.

ಕೆಆರ್‌ಎಸ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರದ ಮುನ್ಸೂಚನೆ ನೀಡಿದ್ದರೂ ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿಲ್ಲ.

ಬದಲಾಗಿ ಆಡಳಿತದ ಗಮನ ಅಧಿಕಾರದ ಒಳಜಗಳ ಮತ್ತು ಕುರ್ಚಿ ರಾಜಕಾರಣದತ್ತವೇ ಇತ್ತು. ಇದರ ಪರಿಣಾಮವಾಗಿ ರೈತರ ಬದುಕಿನೊಂದಿಗೆ ಚೆಲ್ಲಾಟ ನಡೆಸಲಾಗಿದೆ. ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ಸರ್ಕಾರ ರಾಜಕೀಯ ಲೆಕ್ಕಾಚಾರ ನಡೆಸುತ್ತಿದೆ ಎಂದು ಟೀಕಿಸಿದರು.

 ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ನೀರಾವರಿ ಸಚಿವರಾಗಿಯೂ, ಉಪಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಾವೇರಿ ವಿಚಾರದ ಸಂಪೂರ್ಣ ಅರಿವು ಇದ್ದರೂ ತಮಿಳುನಾಡಿಗೆ ನೀರು ಬಿಡುಗಡೆಗೆ ಒಪ್ಪಿಗೆ ನೀಡಿರುವುದು ರೈತರಿಗೆ ಅನ್ಯಾಯವಾಗಿದೆ. ದೆಹಲಿಗೆ ಹಲವು ಬಾರಿ ತೆರಳಿ ಪಕ್ಷದ ನಾಯಕತ್ವದೊಂದಿಗೆ ಸಭೆ ನಡೆಸಿದರೂ, ಕಾವೇರಿ ಕೊಳ್ಳದ ರೈತರ ಹಿತಾಸಕ್ತಿಗಾಗಿ ಒಮ್ಮೆಯಾದರೂ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಿಲ್ಲ ಎಂದರು.

ತಮಿಳುನಾಡು ನೀರು ಕೇಳುವ ಮೊದಲುವೇ ಸುಮಾರು 3.5 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಸರ್ವಪಕ್ಷ ಸಭೆ ಕರೆಯುವ ಅಗತ್ಯ ಸರ್ಕಾರಕ್ಕೆ ಕಾಣಿಸಲಿಲ್ಲ. ಈಗ ಸರ್ವಪಕ್ಷ ಸಭೆ ಕರೆಯುತ್ತಿರುವುದು ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ. ಈಗಿನ ಸರ್ವಪಕ್ಷ ಸಭೆ ರೈತರ ಹಿತಕ್ಕಾಗಿ ಅಲ್ಲ, ಮುಖ್ಯಮಂತ್ರಿಯವರ ರಾಜಕೀಯ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಿದ ವಿಜಯೇಂದ್ರ, “ಕುರ್ಚಿ ಹೋದರೂ ಪರವಾಗಿಲ್ಲ, ರೈತರ ಪರ ನಿಲ್ಲುತ್ತೇನೆ, ನೀರು ಬಿಡುವುದಿಲ್ಲ” ಎಂಬ ಸ್ಪಷ್ಟ ಘೋಷಣೆಯನ್ನು ಮುಖ್ಯಮಂತ್ರಿ ಮಾಡಬೇಕು. ಅಂತಹ ನಿಲುವು ಪ್ರಕಟಿಸಿದರೆ ಬಿಜೆಪಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಸಿದ್ಧವಿದೆ ಎಂದು ಹೇಳಿದರು.

ಬಿಜೆಪಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ರೈತರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ. ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದಲೇ ಈ ಪ್ರತಿಭಟನೆ ನಡೆಸಲಾಗಿದೆ. ಮುಂದೆಯೂ ರೈತರ ಹಿತಾಸಕ್ತಿಗಾಗಿ ಬಿಜೆಪಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಿದೆ. ಮೈಸೂರು ಒಡೆಯರು ತಮ್ಮ ಸ್ವಂತ ಆಭರಣಗಳನ್ನು ಮಾರಾಟ ಮಾಡಿ ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸಿದ್ದರು. ಆ ಕಟ್ಟೆಯ ಉದ್ದೇಶವೇ ರಾಜ್ಯದ ರೈತರ ಹಿತಾಸಕ್ತಿಯನ್ನು ಕಾಪಾಡುವುದು. ಅಂತಹ ಐತಿಹಾಸಿಕ ಪರಂಪರೆಯನ್ನು ಗೌರವಿಸುವ ಬದಲು ಸರ್ಕಾರ ರೈತರ ಹಿತವನ್ನು ಕಡೆಗಣಿಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Pratidhvani