
ನವದೆಹಲಿ : ಪ್ರತಿ ತಿಂಗಳ ಆರಂಭದಂತೆಯೇ ಅಕ್ಟೋಬರ್ 1 ರಿಂದ (October) ಸಾಮಾನ್ಯ ಜನರ ದೈನಂದಿನ ಬಜೆಟ್ ಮತ್ತು ಜೇಬಿನ ಮೇಲೆ ಪರಿಣಾಮ ಬೀರುವ ಹಲವು ಮಹತ್ವದ ಆರ್ಥಿಕ ನಿಯಮಗಳು (Rules Change) ಜಾರಿಗೆ ಬಂದಿವೆ. ಬ್ಯಾಂಕಿಂಗ್ ವಹಿವಾಟು, ಎಲ್‌ಪಿಜಿ ಸಿಲಿಂಡರ್, ಯುಪಿಐ ಪಾವತಿಗಳು ಹಾಗೂ ಠೇವಣಿ ನಿಯಮಗಳಲ್ಲಿ ಪ್ರಮುಖ ಮಾರ್ಪಾಡುಗಳಾಗಿವೆ.

ಎಸ್‌ಬಿಐ ಎಟಿಎಂ ಉಚಿತ ವಹಿವಾಟು ಮಿತಿ ಇಳಿಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವೇತನ (ಸ್ಯಾಲರಿ) ಖಾತೆದಾರರಿಗೆ ಅನಿರೀಕ್ಷಿತ ಶಾಕ್ ನೀಡಿದೆ. ಇತರೆ ಬ್ಯಾಂಕುಗಳ ಎಟಿಎಂಗಳ ಮೂಲಕ ತಿಂಗಳಿಗೆ ಪಡೆಯಬಹುದಾಗಿದ್ದ ಉಚಿತ ವಹಿವಾಟಿನ ಮಿತಿಯನ್ನು 10 ರಿಂದ 5ಕ್ಕೆ ಇಳಿಸಲಾಗಿದೆ. ಆದರೆ ಎಸ್‌ಬಿಐ ತನ್ನ ಸ್ವಂತ ಎಟಿಎಂಗಳಲ್ಲಿ ಮಾಡುವ ವಹಿವಾಟುಗಳಿಗೆ ಈ ಮಿತಿ ಅನ್ವಯಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಗ್ಯಾಸ್ ಸಬ್ಸಿಡಿಗೆ ಇ-ಕೆವೈಸಿ ಕಡ್ಡಾಯ
ಅಡುಗೆ ಅನಿಲ ಸಬ್ಸಿಡಿ ದುರ್ಬಳಕೆಯನ್ನು ತಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಬಯೋಮೆಟ್ರಿಕ್ ಆಧಾರ್ ಇ-ಕೆವೈಸಿ ಪ್ರಕ್ರಿಯೆಯ ಗಡುವನ್ನು ಮುಕ್ತಾಯಗೊಳಿಸಲಾಗಿದೆ. ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರಿಗೆ ಇನ್ನು ಮುಂದೆ ಗ್ಯಾಸ್ ಸಬ್ಸಿಡಿ ದೊರೆಯುವುದಿಲ್ಲ. ಇಂತಹ ಗ್ರಾಹಕರು ಸಿಲಿಂಡರ್‌ಗಳನ್ನು ಪೂರ್ಣ ಮಾರುಕಟ್ಟೆ ದರದಲ್ಲೇ ಖರೀದಿಸಬೇಕಾಗುತ್ತದೆ.
ವಾಣಿಜ್ಯ ಸಿಲಿಂಡರ್ ದರ ಏರಿಕೆ
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಆದರೆ ಹೋಟೆಲ್ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಸುವ 19 ಕೆಜಿ ತೂಕದ ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ₹62.50 ರಷ್ಟು ಹೆಚ್ಚಿಸಿವೆ.

ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ದರ
ಅಕ್ಟೋಬರ್ 15 ರಿಂದ ₹2,000 ಕ್ಕಿಂತ ಹೆಚ್ಚಿನ ಮೌಲ್ಯದ ವ್ಯಾಪಾರ ಸಂಬಂಧಿ ಯುಪಿಐ ಪಾವತಿಗಳಿಗೆ 0.4% ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ವಯವಾಗಲಿದೆ. ಸಾಮಾನ್ಯ ವ್ಯಕ್ತಿಗಳ ನಡುವಿನ ವರ್ಗಾವಣೆ (P2P) ಹಾಗೂ ಸಣ್ಣ ವ್ಯಾಪಾರಿಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದ್ದು, ಪೆಟ್ರೋಲ್ ಬಂಕ್ ಮತ್ತು ವಿಮಾ ಸೇವೆಗಳಂತಹ ಪಾವತಿಗಳಿಗೆ ಫ್ಲಾಟ್ ₹5 ದರ ನಿಗದಿಯಾಗಿದೆ.
ಬಲ್ಕ್ ಫಿಕ್ಸೆಡ್ ಡೆಪಾಸಿಟ್ ನಿಯಮಗಳಲ್ಲಿ ಪಾರದರ್ಶಕತೆ
₹3 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಬಲ್ಕ್ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಬ್ಯಾಂಕುಗಳು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ. ಯಾವುದೇ ಗ್ರಾಹಕರ ನಡುವೆ ಬಡ್ಡಿದರ ನೀಡಿಕೆಯಲ್ಲಿ ತಾರತಮ್ಯ ಮಾಡಬಾರದು ಎಂದು ಆರ್‌ಬಿಐ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ
ಅಕ್ಟೋಬರ್ 5 ರಿಂದ 7 ರವರೆಗೆ ಆರ್‌ಬಿಐನ ಹಣಕಾಸು ನೀತಿ ಸಮಿತಿ (MPC) ಸಭೆ ನಡೆಯಲಿದೆ. ಪ್ರಸ್ತುತ 5.25% ನಷ್ಟಿರುವ ರೆಪೋ ದರದ ಕುರಿತು ಅಕ್ಟೋಬರ್ 7 ರಂದು ಅಂತಿಮ ತೀರ್ಮಾನ ಹೊರಬೀಳಲಿದ್ದು, ಸಾಲದ ಮೇಲಿನ ಬಡ್ಡಿದರಗಳ ಭವಿಷ್ಯ ನಿರ್ಧಾರವಾಗಲಿದೆ.
