
ಲಕ್ನೋ : ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಆಘಾತಕಾರಿ (Shocking) ಘಟನೆಯೊಂದು ನಡೆದಿದ್ದು, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ತಾಯಿ ವಿರೋಧ ವ್ಯಕ್ತಪಡಿಸಿದ್ದಕ್ಕೆ 17 ವರ್ಷದ ಅಪ್ರಾಪ್ತ ಮಗನೊಬ್ಬ ತಾಯಿಯನ್ನೇ ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ (Murder) ಮಾಡಿದ್ದಾನೆ.
ಗುರುವಾರ ಲಕ್ನೋದ ಅಪಾರ್ಟ್‌ಮೆಂಟ್ ಒಂದರಲ್ಲಿ ನಡೆದ ಈ ದುರ್ಘಟನೆಯ ಬಳಿಕ, ಅಪ್ರಾಪ್ತನೇ ಖುದ್ದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು 42 ವರ್ಷದ ಮಹಿಳೆಯ ಮೃತದೇಹವನ್ನು ವಶಪಡಿಸಿಕೊಂಡು, ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ.

ಶಸ್ತ್ರಚಿಕಿತ್ಸೆ ವಿಚಾರಕ್ಕೆ ಭುಗಿಲೆದ್ದ ಕೌಟುಂಬಿಕ ಕಲಹ
ಪ್ರಾಥಮಿಕ ತನಿಖೆಯ ಪ್ರಕಾರ, ಈ ಘಟನೆಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಯ ವಿವಾದವೇ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಅಪ್ರಾಪ್ತನು ಹೆಣ್ಣಾಗಿ ಬದುಕಲು ಬಯಸಿದ್ದು, ಸಂಪೂರ್ಣವಾಗಿ ಲಿಂಗ ಬದಲಾವಣೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದನು. ಆದರೆ ಇದಕ್ಕೆ ಆತನ ತಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶಸ್ತ್ರಚಿಕಿತ್ಸೆಯ ಬದಲು ವೈದ್ಯಕೀಯ ಹಾಗೂ ಮಾನಸಿಕ ಸಮಾಲೋಚನೆ ಪಡೆಯುವಂತೆ ತಾಯಿ ಸಲಹೆ ನೀಡಿದ್ದರು. ಈ ವಿಚಾರವಾಗಿ ತಾಯಿ ಮತ್ತು ಮಗನ ನಡುವೆ ಹಲವು ದಿನಗಳಿಂದ ತೀವ್ರ ಜಗಳ ಮತ್ತು ಮನಸ್ತಾಪ ನಡೆಯುತ್ತಿತ್ತು.
ಗುರುವಾರ ರಾಜೇಂದ್ರ ನಗರ ಕ್ರಾಸಿಂಗ್ ಬಳಿಯ ವಿಶನ್ ಅಪಾರ್ಟ್‌ಮೆಂಟ್‌ನಲ್ಲಿ ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. ಜಗಳದ ವೇಳೆ ಕೋಪೋದ್ರಿಕ್ತನಾದ ಅಪ್ರಾಪ್ತನು ಮನೆಯಲ್ಲಿದ್ದ ಕಬ್ಬಿಣದ ರೆಂಚ್‌ನಿಂದ ತಾಯಿಯ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆಯ ನಂತರ ಆತ ಸ್ಥಳದಿಂದ ಪರಾರಿಯಾಗದೆ ಪೊಲೀಸರಿಗೆ ಸ್ವತಃ ಕರೆ ಮಾಡಿದ್ದು, ಪೊಲೀಸರು ಬಂದಾಗಲೂ ಸ್ಥಳದಲ್ಲೇ ಇದ್ದನೆಂದು ತಿಳಿದುಬಂದಿದೆ.

ಫೋರೆನ್ಸಿಕ್ ತಂಡದಿಂದ ಪರಿಶೀಲನೆ, ಮುಂದುವರಿದ ತನಿಖೆ
ನಾಕಾ ಹಿಂದೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಕೃತ್ಯಕ್ಕೆ ಬಳಸಲಾದ ಕಬ್ಬಿಣದ ರೆಂಚ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಪ್ರಾಪ್ತನು ‘ಜೆಂಡರ್ ಡಿಸ್ಫೋರಿಯಾ’ದಿಂದ ಬಳಲುತ್ತಿರುವ ಸಾಧ್ಯತೆ ಕಂಡುಬಂದಿದ್ದು, ತನಿಖೆಯ ಭಾಗವಾಗಿ ವೈದ್ಯಕೀಯ ತಜ್ಞರು ಹಾಗೂ ಆಪ್ತಸಮಾಲೋಚಕರಿಂದ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಂಪೂರ್ಣ ಸತ್ಯಾಸತ್ಯತೆ ತಿಳಿಯಲು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
44 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ | Asian Games
