
ಬಾಗಲಕೋಟೆ :
ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.ಸಭೆಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಅವರ ಆಹಾರ ಅಭ್ಯಾಸಗಳ ಕುರಿತು ಟೀಕಿಸುವ ವೇಳೆ ಅಸಭ್ಯ ಪದಗಳನ್ನು ಬಳಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಯುಗಾದಿ ಮತ್ತು ದೀಪಾವಳಿ ದಿನಗಳಲ್ಲಿಯೂ ಮಾಂಸ ಸೇವನೆ ಕುರಿತು ಸಿದ್ದರಾಮಯ್ಯ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ ಅವರು, ಅದನ್ನು ಟೀಕಿಸುವ ಭರದಲ್ಲಿ ಏಕವಚನ ಬಳಸಿ ಮಾತಾಡಿದ್ದಾರೆ.

ಈ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ. ವಿವಿಧ ರಾಜಕೀಯ ನಾಯಕರು ಹಾಗೂ ಸಾರ್ವಜನಿಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಪ್ರತಾಪ್ ಸಿಂಹ ಅವರು ಈ ಹಿಂದೆ ಕೂಡ ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದರು. ಆದರೆ ಈ ಬಾರಿ ಬಳಸಿದ ಪದಗಳು ಹೆಚ್ಚು ಟೀಕೆಗೆ ಗುರಿಯಾಗಿದ್ದು, ರಾಜಕೀಯ ವಾತಾವರಣ ಕಾವೇರಿಸಿದೆ.ಚುನಾವಣಾ ಹೊತ್ತಿನಲ್ಲಿ ಉಗ್ರವಾಗುತ್ತಿರುವ ವಾಗ್ವಾದಗಳು ರಾಜಕೀಯ ಮಟ್ಟವನ್ನು ಕೆಡಿಸುತ್ತಿವೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
