Dailyhunt Logo
  • Light mode
    Follow system
    Dark mode
    • Play Story
    • App Story
ಬೇರೆಯವರ ಜೊತೆ ಮಾತಾಡಿದಂಗೆ ನನ್ ಹತ್ರ ಮಾತಾಡ್ಬೇಡಿ: ಅಕ್ರಮ ಮುಚ್ಚಿಹಾಕಲು ಗೃಹ ಇಲಾಖೆ ತಗೊಂಡ್ರಾ- ಪ್ರಿಯಾಂಕ್ ಖರ್ಗೆಗೆ HD ಕುಮಾರಸ್ವಾಮಿ ಖಡಕ್ ವಾರ್ನಿಂಗ್

ಬೇರೆಯವರ ಜೊತೆ ಮಾತಾಡಿದಂಗೆ ನನ್ ಹತ್ರ ಮಾತಾಡ್ಬೇಡಿ: ಅಕ್ರಮ ಮುಚ್ಚಿಹಾಕಲು ಗೃಹ ಇಲಾಖೆ ತಗೊಂಡ್ರಾ- ಪ್ರಿಯಾಂಕ್ ಖರ್ಗೆಗೆ HD ಕುಮಾರಸ್ವಾಮಿ ಖಡಕ್ ವಾರ್ನಿಂಗ್

Saaksha TV 2 weeks ago

ಮೈಸೂರು: ರಾಜ್ಯ ರಾಜಕಾರಣದಲ್ಲಿ ಈಗ ಕೆಪಿಎಸ್ಸಿ ಅಕ್ರಮದ ವಿಚಾರವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಭೀಕರ ವಾಕ್ಸಮರ ಶುರುವಾಗಿದೆ. ಕೆಪಿಎಸ್ಸಿ ನೇಮಕಾತಿ ಹಗರಣದ ಬಗ್ಗೆ ಗಂಭೀರ ಆರೋಪ ಮಾಡಿರುವ ಕುಮಾರಸ್ವಾಮಿ ಅವರು ಪ್ರಿಯಾಂಕ್ ಖರ್ಗೆ ಅವರಿಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.

ಬೇರೆಯವರ ಜೊತೆ ಮಾತನಾಡಿದಂತೆ ನನ್ನ ಹತ್ತಿರ ಮಾತನಾಡಬೇಡಿ ಎಂದು ಗುಡುಗುವ ಮೂಲಕ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಕೆಪಿಎಸ್ಸಿ ಸದಸ್ಯರ ನೇಮಕಾತಿಗೂ ರೇಟ್ ಫಿಕ್ಸ್ ಆರೋಪ

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಕೆಪಿಎಸ್ಸಿ ಸಂಸ್ಥೆಯ ಇಂದಿನ ಸ್ಥಿತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೆಪಿಎಸ್ಸಿ ಮೇಲೆ ಜನರಿಗೆ ಇದ್ದ ವಿಶ್ವಾಸ ಸಂಪೂರ್ಣವಾಗಿ ಕುಸಿದು ಹೋಗಿದೆ. ಈ ಸಂಸ್ಥೆಗೆ ಸರ್ಕಾರ ಉತ್ತಮರನ್ನು ನೇಮಕ ಮಾಡಬೇಕಿತ್ತು. ಆದರೆ ದುರದೃಷ್ಟವಶಾತ್ ಸದಸ್ಯರ ನೇಮಕಾತಿಗೂ ಇಂತಿಷ್ಟು ಎಂದು ರೇಟ್ ಫಿಕ್ಸ್ ಮಾಡಲಾಗಿದೆ. ಇದು ಅಕ್ಷರಶಃ ಕರ್ಮಕಾಂಡ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಅಕ್ರಮ ಮುಚ್ಚಿ ಹಾಕಲು ಗೃಹ ಇಲಾಖೆ ಬೇಕಿತ್ತೇ

ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಹೆಚ್ ಡಿ ಕೆ ಅವರು ಅಸಿಸ್ಟೆಂಟ್ ಇಂಜಿನಿಯರ್ ಆಯ್ಕೆಯ ಸಮಯದಲ್ಲಿ ಅಕ್ರಮ ನಡೆದಿದ್ದು ಎಲ್ಲರಿಗೂ ಗೊತ್ತಿದೆ. ಆ ಸಮಯದಲ್ಲಿ ಇಲಾಖೆಯ ಮಂತ್ರಿಯಾಗಿದ್ದವರು ಯಾರು? ಅಕ್ರಮ ಹೊರಗೆ ಬಂದ ಕೂಡಲೇ ನೀವು ಗೃಹ ಇಲಾಖೆಯನ್ನು ಯಾಕೆ ಪಡೆದುಕೊಂಡಿರಿ? ಈ ಹಗರಣವನ್ನು ಮುಚ್ಚಿ ಹಾಕುವುದಕ್ಕಾಗಿಯೇ ನೀವು ಇಲಾಖೆಯನ್ನು ಬದಲಾಯಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು. ಹೈಕೋರ್ಟ್ ಈಗಾಗಲೇ ಸರ್ಕಾರದ ಮುಖಕ್ಕೆ ಮಂಗಳಾರತಿ ಎತ್ತಿ ದಂಡ ವಿಧಿಸಿದೆ. ನಿಮ್ಮ ಪಾರದರ್ಶಕತೆ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಸಿದ್ಧಾಂತದ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ

ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. ದೇಶಕ್ಕೆ ಗಂಡಾಂತರ ತಂದಿರುವುದು ಆರ್ ಎಸ್ ಎಸ್ ಅಲ್ಲ ಬದಲಾಗಿ ಕಾಂಗ್ರೆಸ್ ಪಕ್ಷ. ನಿಮ್ಮ ಸಿದ್ಧಾಂತದ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ಬಿಟ್ಟು ಟಿವಿಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದು ನಿಮ್ಮ ಸಿದ್ಧಾಂತವೇ? ನಾವು ಅಕ್ರಮಗಳ ಬಗ್ಗೆ ಮಾತನಾಡಿದರೆ ನೀವು ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುತ್ತೀರಿ. ಮೊದಲು ನೀವು ಮಾಡಿರುವ ಅಕ್ರಮಗಳಿಗೆ ಉತ್ತರ ಕೊಡಿ. ಅದನ್ನು ಬಿಟ್ಟು ನನ್ನ ಮುಂದೆ ಹಗುರವಾಗಿ ಮಾತನಾಡಬೇಡಿ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಪ್ರಿಯಾಂಕ್ ಖರ್ಗೆ ತಿರುಗೇಟು ರಾಜಕೀಯ ಅಸ್ತಿತ್ವಕ್ಕೆ ನನ್ನ ಹೆಸರು ಬೇಕು

ಇತ್ತ ಕುಮಾರಸ್ವಾಮಿ ಅವರ ಎಚ್ಚರಿಕೆಗೆ ಅಷ್ಟೇ ವೇಗವಾಗಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ ಅವರು ನನ್ನ ನಾಲಿಗೆ ಬಗ್ಗೆ ಮಾತನಾಡಲು ಜೆಡಿಎಸ್ ನವರು ಯಾರು ಎಂದು ಪ್ರಶ್ನಿಸಿದ್ದಾರೆ. ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಅವರಿಗೆ ಈಗ ಪ್ರಿಯಾಂಕ್ ಖರ್ಗೆ ಹೆಸರು ಬೇಕಾಗಿದೆ. ನನ್ನ ಹೆಸರನ್ನು ಬಳಸಿಕೊಂಡು ಅವರು ರಾಜಕೀಯ ಮಾಡುತ್ತಿದ್ದಾರೆ ಎಂದರೆ ಮಾಡಿಕೊಳ್ಳಲಿ. ನಾನು ಬಿಜೆಪಿ ಅಥವಾ ಜೆಡಿಎಸ್ ನಿಂದ ಕಲಿಯುವುದು ಏನೂ ಇಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಸಂಘರ್ಷ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Saaksha TV