Sunday, 20 Sep, 2.03 pm Saaksha TV

ರಾಜ್ಯ
ಮತ್ತೆ ಒಂದಾದ್ರ ಬದ್ಧ ವೈರಿಗಳು: ಕೆ.ಎನ್ ರಾಜಣ್ಣ ಮನೆಗೆ ಟಿ.ಬಿ ಜಯಚಂದ್ರ ಭೇಟಿ..!

ತುಮಕೂರು: ಜಿಲ್ಲೆಯ ಶಿರಾ ಕ್ಷೇತ್ರದ ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಟಿ.ಬಿ ಜಯಚಂದ್ರ ಅವರು ತಮ್ಮ ರಾಜಕೀಯ ಬದ್ಧವೈರಿ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಅವರ ಮನೆಗೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ.
ಕೆ.ಎನ್ ರಾಜಣ್ಣ ಸಹ ಶಿರಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕೆ.ಎನ್ ರಾಜಣ್ಣ ಅವರಿಗೆ ಟಿಕೆಟ್ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿರಾಕರಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ
ಕೆಲಸ ಮಾಡಿದ ಆರೋಪ ಕೇಳಿ ಬಂದಿತ್ತು. ನನ್ನ ಪಕ್ಕದ ಮನೆಗೆ ಬಂದಿದ್ದ ದೇವೇಗೌಡರು ನನ್ನ ಮನೆಗೆ ಬಂದಿಲ್ಲ. ಇದು ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಆದ್ದರಿಂದ ನಾನು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದೆ ಎಂದು ಕೆ.ಎನ್ ರಾಜಣ್ಣ ಬಹಿರಂಗವಾಗಿಯೇ ಹೇಳಿದ್ದರು.


ಈ ಹಿನ್ನೆಲೆಯಲ್ಲಿ ಕೆ.ಎನ್ ರಾಜಣ್ಣ ಹಾಗೂ ಅವರ ಆಪ್ತ ಮಧುಗಿರಿ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್ ಅವರನ್ನು ಕಾಂಗ್ರೆಸ್‍ನಿಂದ ಉಚ್ಛಾಟನೆ ಮಾಡಲಾಗಿತ್ತು.
ಇದೀಗ ಶಿರಾ ಉಪಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಟಿ.ಬಿ ಜಯಚಂದ್ರ ಹೆಸರನ್ನು ಹೈಕಮಾಂಡ್‍ಗೆ ಡಿ.ಕೆ ಶಿವಕುಮರ್ ಶಿಫಾರಸು ಮಾಡಿದ್ದಾರೆ. ಜತೆಗೆ ಇತ್ತೀಚೆಗೆ ಕೆ.ಎನ್ ರಾಜಣ್ಣ ಅವರ ಮನೆಗೆ ಖುದ್ದು ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಕೆ.ಎನ್ ರಾಜಣ್ಣ ಹಾಗೂ ಶ್ರೀನಿವಾಸ್ ವಿರುದ್ಧದ ಅಮಾನತು ಆದೇಶ ವಾಪಸ್ ಪಡೆಯುವ ಮೂಲಕ ಮನವೊಲಿಸಿದ್ದರು.


ಈ ಬೆಳವಣಿಗೆಗಳ ಬೆನ್ನಲ್ಲೇ, ಇಂದು ಕೈ ಟಿಕೆಟ್ ಆಕಾಂಕ್ಷಿ ಟಿ.ಬಿ ಜಯಚಂದ್ರ ತಮ್ಮ ರಾಜಕೀಯ ಶತೃವಿನ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದರಲ್ಲದೆ, ಪರಸ್ಪರ ಸನ್ಮಾನ ಮಾಡಿಕೊಂಡು ಹಿಂದಿನ ಹಳೆಯ ಕಹಿ ಘಟನೆಗಳನ್ನು ಮರೆಯುವ ಪ್ರಯತ್ನ ಮಾಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Saaksha TV
Top