
ಮಂಗಳೂರು: ಮಹಾಮಳೆಗೆ ಉಡುಪಿಯ ಗಡಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹೋಬಳಿಯು ಜಲಾವೃತವಾಗಿದೆ. ಕಳೆದ ತಡರಾತ್ರಿಯಿಂದ ಆರಂಭವಾದ ಮಳೆ ಶಾಂಭವಿ ನದಿ ತಟದಲ್ಲಿ ಪ್ರವಾಹ ಸನ್ನಿವೇಶವನ್ನೇ ಸೃಷ್ಟಿ ಮಾಡಿದೆ.
ಮಹಾಮಳೆಗೆ ಕೃಷ್ಣ ನಗರಿ ಉಡುಪಿ ತತ್ತರಿಸಿ ಹೋಗಿದ್ದರೆ, ಇತ್ತ ಅದರ ಗಡಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹೋಬಳಿಯು ಹೊರತಾಗಿಲ್ಲ. ಕಳೆದ ತಡರಾತ್ರಿಯಿಂದ ಆರಂಭವಾದ ಮಳೆ ಮುಂಜಾನೆ ಮನೆಗಳನ್ನ ಜಲಾವೃತಗೊಳಿಸಿತ್ತು. ಎಲ್ಲೆಲ್ಲೂ ಜಲಧಾರೆಯ ಕಂಡು ಬರುತ್ತಿದೆ.
ಸ್ಥಳೀಯರು ತಮ್ಮ ನಾಡದೋಣಿಗಳನ್ನ ಏರಿ ಸಹಾಯಕ್ಕಿಳಿದಿದ್ದಾರೆ. ಮುಲ್ಕಿ ಹೋಬಳಿಯ ಮಟ್ಟು, ಬಳ್ಕುಂಜೆ, ಕಿಲೆಂಜೂರು, ಏಳಿಂಜೆ, ಕಿನ್ನಿಗೋಳಿ ಈ ಎಲ್ಲಾ ಪ್ರದೇಶಗಳಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿದ್ದ ಪರಿಣಾಮ ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದೆ.
ಮಟ್ಟು ಪ್ರದೇಶವೊಂದರಲ್ಲೆ ಮಂಗಳೂರಿನ ಕದ್ರಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನಾಡದೋಣಿ ಸಹಕಾರದಿಂದ ಸುಮಾರು 60 ಕುಟುಂಬಗಳನ್ನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.
ಸ್ಥಳೀಯ ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ನಿಂದ ನೆರೆ ಪೀಡಿತ ಪ್ರದೇಶಗಳ ಮನೆಗಳಿಗೆ ಹಾಲು ವಿತರಣೆಯನ್ನೂ ಮಾಡಲಾಯಿತು. ಎರಡು ವರುಷಗಳ ಹಿಂದೆ ಇಂತಹದ್ದೇ ಪ್ರವಾಹ ಸ್ಥಿತಿ ಎದುರಿಸಿದ್ದ ಇಲ್ಲಿನ ಸ್ಥಳೀಯರು ಈ ಬಾರಿ ಅದಕ್ಕೂ ಮಿಕ್ಕಿದ ನೆರೆ ಪ್ರವಾಹ ಕಾಣುವಂತಾಗಿದೆ. ಶಾಂಭವಿ ನದಿ, ತೊರೆ ಪ್ರದೇಶಗಳಿಂದ ಕೂಡಿರುವ ಈ ಭಾಗಕ್ಕೆ ಸೂಕ್ತ ಯಾಂತ್ರೀಕೃತ ಬೋಟ್ ಗಳ ವ್ಯವಸ್ಥೆ ಕಲ್ಪಿಸಬೇಕು ಅನ್ನೋ ಹಲವು ವರುಷಗಳ ಬೇಡಿಕೆಯನ್ನ ಮತ್ತೊಮ್ಮೆ ಸ್ಥಳೀಯರು ಮುಂದಿಟ್ಟಿದ್ದಾರೆ.
ಮಳೆಯಿಂದ ಹಲವು ಒಳರಸ್ತೆಗಳು ಜಲಾವೃತವಾದ ಪರಿಣಾಮ ಗ್ರಾಮ-ಗ್ರಾಮಗಳ ನಡುವಿನ ಸಂಪರ್ಕವೇ ಕಡಿತಗೊಂಡಿದೆ. ಕೃಷಿ ಭೂಮಿಗಳೆಲ್ಲವೂ ಒಂದೇ ಸಮನೆ ಸುರಿದ ಮಳೆಗೆ ಕಾಣದಾಗಿದೆ. ಜಲಪ್ರವಾಹ ಸೃಷ್ಟಿಯಾದ್ದರಿಂದ ವಿದ್ಯುತ್ ಸಂಪರ್ಕವೂ ಕೈಕೊಟ್ಟಿತ್ತು. ಅತ್ತ ಶಾಂಭವಿ ನದಿ ಈಗಾಗಲೇ ಅಪಾಯಮಟ್ಟ ಮೀರಿ ಗ್ರಾಮಗಳಿಗೆ ನುಗ್ಗಿದ್ದರೆ, ಇತ್ತ ಗ್ರಾಮದ ಒಳಗೇ ಹರಿಯುತ್ತಿದ್ದ ತೊರೆಗಳು ಕೂಡಾ ರೌದ್ರ ರೂಪ ತಾಳಿವೆ.
ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ವೇಳೆ ಮೊಮ್ಮಕ್ಕಳನ್ನ ಹಿಡಿದು ಸಾಗಿದ ಅಜ್ಜಿಯೊಬ್ಬರ ಮಮತೆಯೂ ಜಡಿಮಳೆಯ ನಡುವೆಯೂ ಮುದ ನೀಡುವಂತಿತ್ತು.. ಆದರೆ ಸದ್ಯ ಮಹಾಮಳೆಗೆ ಕೃಷಿ ಬೆಳೆ ಹಾನಿ ಹೊರತು ಪ್ರಾಣಹಾನಿ ಸಂಭವಿಸಿಲ್ಲ ಅನ್ನೋದು ಸಮಾಧಾನದ ಸಂಗತಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ನೆರೆ ಪ್ರಮಾಣ ಇಳಿಕೆಯಾಗಿಲ್ಲ. ಇನ್ನೂ ಎರಡು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಭರದ ರಕ್ಷಣಾ ಕಾರ್ಯಾಚರಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸನ್ನದ್ಧವಾಗಬೇಕಿದೆ.