ಅಸ್ಸಾಂನ ಭಾಜಪದ ನೂತನವಾಗಿ ಆಯ್ಕೆಯಾದ ಶಾಸಕ ದಿಗಂತ ಕಲಿತಾ ಅವರ ಆಗ್ರಹ
ಗೌಹಾಟಿ (ಅಸ್ಸಾಂ) - ಅಸ್ಸಾಂನ ಭಾಜಪದ ನೂತನವಾಗಿ ಆಯ್ಕೆಯಾದ ಶಾಸಕ ದಿಗಂತ ಕಲಿತಾ ಅವರು ಅಜಾನ್ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ಮಿತಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅವರು, ಕಳೆದ ೫ ವರ್ಷಗಳಿಂದ ನಾನು ಶಾಸಕರ ನಿವಾಸದಲ್ಲಿ ವಾಸಿಸುತ್ತಿದ್ದೇನೆ. ಅಲ್ಲಿ ಹತ್ತಿರದಲ್ಲೇ ಇರುವ ಒಂದು ಮಸೀದಿಯಿಂದ ಮುಂಜಾನೆಯಿಂದ ಸಂಜೆಯವರೆಗೆ ೫ ಬಾರಿ ಧ್ವನಿವರ್ಧಕಗಳ ಮೂಲಕ ಅಜಾನ್ ಕೇಳಿಸಲಾಗುತ್ತದೆ. ಅದರ ದೊಡ್ಡ ಧ್ವನಿಯಿಂದಾಗಿ ಅಲ್ಲಿ ವಾಸಿಸುವ ಜನರು ತೀವ್ರ ತೊಂದರೆಯನ್ನು ಎದುರಿಸಬೇಕಾಗಿದೆ.
ಈ ವಿಷಯದ ಕುರಿತಾದ ನ್ಯಾಯಾಲಯದ ತೀರ್ಪುಗಳು ಮತ್ತು ಕಾನೂನು ನಿಬಂಧನೆಗಳ ಬಗ್ಗೆ ನಾನು ಆಳವಾದ ಅಧ್ಯಯನ ನಡೆಸುತ್ತಿದ್ದೇನೆ. ಶೀಘ್ರದಲ್ಲೇ ಈ ಇಡೀ ವಿಷಯವನ್ನು ಅಸ್ಸಾಂ ಸರಕಾರದ ಮುಂದೆ ಮಂಡಿಸಲಿದ್ದೇನೆ. ನಂಬಿಕೆ ತನ್ನ ಜಾಗದಲ್ಲಿದೆ; ಆದರೆ ಅದಕ್ಕಾಗಿ ಧ್ವನಿವರ್ಧಕಗಳ ಬಳಕೆ ಮಾಡುವುದು ಅನಿವಾರ್ಯವೇನಲ್ಲ. ಇದರಿಂದ ಇತರರಿಗೆ ಉಂಟಾಗುವ ಅನಾನುಕೂಲತೆಯನ್ನು ತಡೆಯಬೇಕು, ಎಂದು ಹೇಳಿದರು.
ತಾವು ಅಜಾನ್ ವಿರುದ್ಧವಾಗಿಲ್ಲ; ತಮ್ಮ ವಿರೋಧ ಕೇವಲ ಧ್ವನಿವರ್ಧಕಗಳ ಅತಿಯಾದ ಧ್ವನಿಗೆ ಮಾತ್ರ ಎಂದು ಶಾಸಕ ಕಲಿತಾ ಅವರು ಸ್ಪಷ್ಟಪಡಿಸಿದ್ದಾರೆ.

