Dailyhunt Logo
  • Light mode
    Follow system
    Dark mode
    • Play Story
    • App Story
ಫ್ರಾನ್ಸ್ ಸರಕಾರವು ಇನ್ನು ಮುಂದೆ 'ಶೂನ್ಯ ಸಹಿಷ್ಣುತೆ'ಯ ನೀತಿಯನ್ನು ಅಳವಡಿಸಿಕೊಳ್ಳಲಿ !

ಫ್ರಾನ್ಸ್ ಸರಕಾರವು ಇನ್ನು ಮುಂದೆ 'ಶೂನ್ಯ ಸಹಿಷ್ಣುತೆ'ಯ ನೀತಿಯನ್ನು ಅಳವಡಿಸಿಕೊಳ್ಳಲಿ !

ಫುಟ್‌ಬಾಲ್ ಪಂದ್ಯದ ನಂತರ ಭುಗಿಲೆದ್ದ ರಾಷ್ಟ್ರವ್ಯಾಪಿ ಗಲಭೆಗಳ ಹಿನ್ನೆಲೆಯಲ್ಲಿ 'ಬ್ಯೂರೋ ಆಫ್ ಹ್ಯೂಮನ್ ರೈಟ್ಸ್ ಅಂಡ್ ಜಸ್ಟಿಸ್' ಸಂಸ್ಥೆಯ ಆಗ್ರಹ

ಪ್ಯಾರಿಸ್‌ನ ಜಗತ್ಪ್ರಸಿದ್ಧ 'ಐಫಿಲ್ ಟವರ್' ಬಳಿ ನಡೆದ ಹಿಂಸಾಚಾರ

ಪ್ಯಾರಿಸ್ (ಫ್ರಾನ್ಸ್) - ಇಲ್ಲಿ 'ಚಾಂಪಿಯನ್ಸ್ ಲೀಗ್' ಫುಟ್‌ಬಾಲ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ 'ಪ್ಯಾರಿಸ್ ಸೇಂಟ್-ಜರ್ಮನ್' (ಪಿ.ಎಸ್.ಜಿ.) ತಂಡವು 'ಆರ್ಸೆನಲ್' ತಂಡದ ವಿರುದ್ಧ ವಿಜಯ ಸಾಧಿಸಿತು.

ಮೇ 30 ರಂದು ನಡೆದ ಪಂದ್ಯದ ನಂತರ ಇಡೀ ಫ್ರಾನ್ಸ್‌ನಲ್ಲಿ ರಾತ್ರಿಯ ವೇಳೆಯಲ್ಲೇ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯಿತು. ಇದರ ವಿರುದ್ಧ 'ಬ್ಯೂರೋ ಆಫ್ ಹ್ಯೂಮನ್ ರೈಟ್ಸ್ ಅಂಡ್ ಜಸ್ಟಿಸ್' ಸಂಸ್ಥೆಯು ತುರ್ತು ಪ್ರಕಟಣೆಯನ್ನು ಹೊರಡಿಸಿದೆ. ಹಿಂಸಾಚಾರವನ್ನು ತೀವ್ರ ಶಬ್ದಗಳಲ್ಲಿ ಖಂಡಿಸಲಾಗಿದ್ದು, ದೇಶದ ಸಾರ್ವಜನಿಕ ಸುವ್ಯವಸ್ಥೆ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು, ಹಾಗೂ 'ಶೂನ್ಯ ಸಹಿಷ್ಣುತೆ'ಯ (ಜೀರೋ ಟಾಲರೆನ್ಸ್) ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಂಸ್ಥೆಯು ಆಗ್ರಹಿಸಿದೆ.

 ಪ್ಯಾರಿಸ್ ನಗರದಲ್ಲಿ ನಡೆದ ಬೆಂಕಿ ಹಚ್ಚುವಿಕೆಯ ಘಟನೆ

ಹಿಂಸಾಚಾರದ ವ್ಯಾಪ್ತಿ ಹೀಗಿದೆ…!

ಗೃಹಸಚಿವ ಲಾರೆಂಟ್ ನ್ಯುನೆಜ್ ಘೋಷಿಸಿದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ರಾತ್ರಿಯ ಅವಧಿಯಲ್ಲಿ ನಡೆದ ಘರ್ಷಣೆಗಳು ಮತ್ತು ಗಲಭೆಗಳ ಅಪರಾಧಕ್ಕಾಗಿ ದೇಶಾದ್ಯಂತ 780 ಜನರನ್ನು ಬಂಧಿಸಲಾಗಿದೆ. ಈ ಹಿಂಸಾಚಾರವು 71 ಮುನ್ಸಿಪಾಲಿಟಿಗಳ (ನಗರಸಭೆಗಳ) ವ್ಯಾಪ್ತಿಯವರೆಗೆ ಹರಡಿತ್ತು. ಈ ಘಟನೆಗಳಲ್ಲಿ ಭದ್ರತಾ ಪಡೆಯ 57 ಸೈನಿಕರು, ಹಾಗೂ 219 ನಾಗರಿಕರು ಗಾಯಗೊಂಡಿದ್ದಾರೆ. ಇದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಪ್ಯಾರಿಸ್‌ನಲ್ಲಿ ಚಾಕುವಿನಿಂದ ಇರಿಯುವ ಹಲವು ಗಂಭೀರ ಘಟನೆಗಳು ನಡೆದಿವೆ.

ಈ ದಾಳಿಯು ಪೂರ್ವನಿಯೋಜಿತ! - ಬ್ಯೂರೋ ಆಫ್ ಹ್ಯೂಮನ್ ರೈಟ್ಸ್ ಅಂಡ್ ಜಸ್ಟಿಸ್

ಈ ಇಡೀ ಘಟನೆಯು 'ಫುಟ್‌ಬಾಲ್ ಅಭಿಮಾನಿಗಳ ಸ್ವಯಂಪ್ರೇರಿತ ಮತ್ತು ನೈಸರ್ಗಿಕ ಪ್ರತಿಕಕ್ರಿಯೆಯಾಗಿದೆ' ಎಂಬ ವಾದವನ್ನು 'ಬ್ಯೂರೋ ಆಫ್ ಹ್ಯೂಮನ್ ರೈಟ್ಸ್ ಅಂಡ್ ಜಸ್ಟಿಸ್' ಸಂಸ್ಥೆಯು ದೃಢವಾಗಿ ತಿರಸ್ಕರಿಸಿದೆ. ಇದು ಒಂದು ಪೂರ್ವನಿಯೋಜಿತ ದಾಳಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ. ದೀಪನ್ ಮಿತ್ರ ಅವರು 'ಸನಾತನ ಪ್ರಭಾತ'ದ ಪ್ರತಿನಿಧಿಯೊಂದಿಗೆ ಮಾತನಾಡುವಾಗ ತಿಳಿಸಿದರು. ಕಳೆದ ವರ್ಷದ ವಿಜಯೋತ್ಸವದ ವೇಳೆಯಲ್ಲೂ ನಾವು ಹಿಂಸಾಚಾರದ ಇಂತಹದ್ದೇ ಪ್ರಕರಣವನ್ನು ನೋಡಿದ್ದೆವು. ಇದು ಈಗ ಒಂದು 'ದೀರ್ಘಕಾಲದ ಬಿಕ್ಕಟ್ಟಾಗಿ' ಮಾರ್ಪಟ್ಟಿದೆ, ಇದು ಫ್ರೆಂಚ್ ಗಣರಾಜ್ಯದ ದೀರ್ಘಕಾಲೀನ ಭದ್ರತೆಗೆ ಗಂಭೀರ ಆಪತ್ತನ್ನು ತಂದೊಡ್ಡುತ್ತಿದೆ. ಒಂದು ವೇಳೆ ಆಡಳಿತವು ಈಗಲೇ ಇದರ ಮೇಲೆ ದೃಢವಾದ ನಿಯಂತ್ರಣವನ್ನು ಸಾಧಿಸದಿದ್ದರೆ, ಭವಿಷ್ಯದಲ್ಲಿ ಫ್ರಾನ್ಸ್ ಇದಕ್ಕೆ ಭಾರಿ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಕಠಿಣವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಶ್ರೀ. ಮಿತ್ರ ಅವರು ಈ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ವಿನಂತಿಸಿದರು. ಸಾರ್ವಜನಿಕ ಭದ್ರತಾ ನೀತಿಯನ್ನು ತುರ್ತಾಗಿ ಜಾರಿಗೆ ತರುವಾಗ 'ಶೂನ್ಯ ಸಹಿಷ್ಣುತೆ'ಯ ನೀತಿಯನ್ನು ಹೊಂದಿರಬೇಕು ಎಂದೂ ಅವರು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada