- ಸಂಸ್ಕೃತ ಭಾಷೆಯಲ್ಲಿ ರಚಿತ ಈ ಪುರಾಣದಲ್ಲಿ ೯ ಸಾವಿರ ಶ್ಲೋಕಗಳಿವೆ.
- ದಾನವರ ಸಂಹಾರ ಮತ್ತು ಧರ್ಮಸಂಸ್ಥಾಪನೆಗಾಗಿ ಗಣೇಶನು ತಾಳಿದ ೮ ಅವತಾರಗಳ ವರ್ಣನೆಯಿದೆ.
ಗಣೇಶ ಪುರಾಣವು ಗಣೇಶನಿಗೆ ಸಂಬಂಧಿಸಿದ ಏಕೈಕ ಮಹಾಪುರಾಣ !
ಹಿಂದೂ ಧರ್ಮದಲ್ಲಿ ೧೮ ಪುರಾಣಗಳ ಕುರಿತು ಮಾಹಿತಿ ನೀಡಲಾಗಿದೆ.
ಈ ಪುರಾಣಗಳಲ್ಲಿ ದೇವಿ-ದೇವತೆಗಳ ಕಥೆಗಳನ್ನು ಹೇಳಲಾಗಿದೆ. ಆ ಕಥೆಗಳ ಮೂಲಕ ಜೀವನ ನಡೆಸುವ ಮಾರ್ಗದರ್ಶನ ಮಾಡಲಾಗಿದೆ. ಈ ಪುರಾಣಗಳಲ್ಲಿ ಗಣೇಶಪುರಾಣವೂ ಒಂದಾಗಿದೆ ! ಗಣೇಶಪುರಾಣದಲ್ಲಿ ೫ ಖಂಡಗಳಿವೆ. ಅವುಗಳ ವಿವೇಚನೆಯನ್ನು ತಿಳಿಯೋಣ !
ಪ್ರಥಮ ಖಂಡ
ಇದರಲ್ಲಿ ತಿಳಿಸಲಾದ ಕಥೆಗಳನ್ನು ಓದಿದರೆ ಸಂಸಾರದಲ್ಲಿರುವ ಎಲ್ಲರ ಕಲ್ಯಾಣವಾಗುತ್ತದೆ. ಮೊದಲ ಕಥೆಯಲ್ಲಿ ಸಂಸಾರದ ನಿರ್ಮಿತಿಯ ಮಾಹಿತಿ ನೀಡಲಾಗಿದೆ. ಈ ಖಂಡದಲ್ಲಿ ಭಗವಾನ್ ಶಂಕರನ ವಿವಿಧ ರೂಪಗಳ ಕುರಿತು ಮಾಹಿತಿ ಕೊಡಲಾಗಿದೆ. ಮುಂದಿನ ಕಥೆಗಳಲ್ಲಿ ಭಗವಾನ್ ಶಂಕರನು ಜಗತ್ತಿನ ಉತ್ಪತ್ತಿಯನ್ನು ಹೇಗೆ ಮಾಡಿದನು ಎಂಬುದರ ಕುರಿತು ಹೇಳಲಾಗಿದೆ.
ಎರಡನೆಯ ಖಂಡ
ಗಣೇಶನ ಜನನದ ಕಥೆಯೊಂದಿಗೆ ಈ ಖಂಡವು ಪ್ರಾರಂಭವಾಗುತ್ತದೆ. ತದನಂತರ ಶಿವಲಿಂಗ ಮತ್ತು ಪದ್ಮಪುರಾಣಗಳನ್ನು ಅನುಸರಿಸಿ ಅನೇಕ ಕಥೆಗಳನ್ನು ಹೇಳಲಾಗಿದೆ. ಕೊನೆಯಲ್ಲಿ ಗಣೇಶನ ಜನನದ ವಿಸ್ತಾರವಾದ ಕಥೆಯ ವರ್ಣನೆ ಇದೆ.
ಮೂರನೆಯ ಖಂಡ
ಗಣೇಶ ಪುರಾಣದಲ್ಲಿ ಮೂರನೆಯ ಖಂಡವನ್ನು ಮಹತ್ವದ್ದು ಎಂದು ಪರಿಗಣಿಸಲಾಗುತ್ತದೆ. ಈ ಖಂಡದಲ್ಲಿ ಮಾತಾ ಪಾರ್ವತಿಯ ಜನನದಿಂದ ಹಿಮಾಲಯದ ಪುತ್ರಿಯಾಗುವವರೆಗಿನ ಪ್ರಯಾಣದ ವಿವರಣೆ ಇದೆ. ಪಾರ್ವತಿ ಮತ್ತು ಭಗವಾನ್ ಶಂಕರನೊಂದಿಗಿನ ವಿವಾಹ ಮಹೋತ್ಸವ ಹೇಗೆ ನೆರವೇರಿತು ? ತಾರಕಾಸುರನ ವಧೆ ಮತ್ತು ಕಾರ್ತಿಕೇಯನ ಜನನದ ಸುಂದರ ವರ್ಣನೆಯನ್ನು ಮಾಡಲಾಗಿದೆ. ಈ ಖಂಡದಲ್ಲಿ ವಸಿಷ್ಠರು ತಿಳಿಸಿದ ಅರಣ್ಯರಾಜನ ಕಥೆಯೂ ಇದೆ.
ನಾಲ್ಕನೆಯ ಖಂಡ
ಈ ಖಂಡದಲ್ಲಿ ಯುದ್ಧಕ್ಕೆ ಸಂಬಂಧಿಸಿದ ಕಥೆಗಳಿವೆ. ಇದರ ಪ್ರಾರಂಭದಲ್ಲಿ 'ಮತ್ಸರ'ನೆಂಬ ಅಸುರನ ಕಥೆಯಿದೆ. ಅವನು ಅಸುರರ ಗುರು ಶುಕ್ರಾಚಾರ್ಯರಿಂದ ಶಿವ ಪಂಚಾಕ್ಷರಿ ಮಂತ್ರದ ದೀಕ್ಷೆ ಪಡೆದಿದ್ದನು. ಅದರ ಮುಂದೆ ತಾರಕಾಸುರನ ಕಥೆಯಿದೆ. ಅವನು ಬ್ರಹ್ಮದೇವರ ತಪಸ್ಸು ಮಾಡಿ ತ್ರೈಲೋಕ್ಯದ ಅಧಿಪತ್ಯವನ್ನು ಕೇಳಿದ್ದನು. ಈ ಖಂಡದಲ್ಲಿ ಮಹೋದರ ಮತ್ತು ಮಹಾಸುರ ಎಂಬ ಅಸುರರ ಯುದ್ಧದ ಕಥೆಯೂ ಇದೆ. 'ಲೋಭಾಸುರ'ನೆಂಬ ಅಸುರನು ಮತ್ಸರ ಭಾವನೆಯಿಂದ ಗಣಪತಿಯೊಂದಿಗೆ ಯುದ್ಧ ಮಾಡಿದನು; ಆದರೆ ಅವನಿಗೆ ತನ್ನ ತಪ್ಪಿನ ಅರಿವಾದಾಗ, ಅವನು ಗಣೇಶನ ಚರಣಗಳಿಗೆ ಶರಣಾಗತನಾದನು.
ಐದನೆಯ ಖಂಡ
ಐದನೆಯ ಖಂಡದಲ್ಲಿ ಮಹಾದೇವನ ಪುಣ್ಯಕಥೆಗಳ ಮಾಹಿತಿಯನ್ನು ನೀಡಲಾಗಿದೆ. ಇದರಲ್ಲಿ ಸೂತ ಋಷಿಗಳು ಗಣೇಶ ಮತ್ತು ಪಾರ್ವತಿ ಯುಗಗಳ ಮಾಹಿತಿಯನ್ನು ನೀಡಿದ್ದಾರೆ. ಮುಂದೆ ಸತ್ಯಯುಗ, ತ್ರೇತಾಯುಗ ಮತ್ತು ದ್ವಾಪರಯುಗಗಳ ಕುರಿತು ಮಾಹಿತಿ ನೀಡಲಾಗಿದೆ. ಈ ಖಂಡದಲ್ಲಿ ತಾರಕಾಸುರ, ಜನ್ಮಾಸುರರ ಕಥೆಗಳ ಸಮಾಪ್ತಿಯೂ ಆಗಿದೆ.
- ಪೂಜಾ ಕಾರಂಡೆ - ಕದಮ್ (ಸೌಜನ್ಯ : ಮರಾಠಿ ದೈನಿಕ ಸಕಾಳ್)

