- ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಉಪಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರ ಸರಕಾರಕ್ಕೆ ಮನವಿ
- ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದರು!
ನಾಗಮಂಗಲ - ನಮಗೆ ಹಾಕಿರುವ ಬೇಡಿಗಳನ್ನು ಒಮ್ಮೆ ಬಿಚ್ಚಿ ನೋಡಿ, ಈ ಸಂಪೂರ್ಣ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಸ್ವಚ್ಛ ಮಾಡುತ್ತೇವೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.
ವೀರಪ್ಪ ಅವರು ಸರಕಾರಕ್ಕೆ ಕರೆ ನೀಡಿದರು. ಅವರು ನಾಗಮಂಗಲದಲ್ಲಿ ಜರುಗಿದ ಲೋಕಾಯುಕ್ತ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ವ್ಯವಸ್ಥಿತ ಸಂಚುಗಳನ್ನು ರೂಪಿಸಲಾಗುತ್ತಿದೆ; ಆದರೆ ಅವ್ಯವಹಾರವನ್ನು ಕಂಡ ನಂತರ ನನ್ನ ರಕ್ತ ಕುದಿಯುತ್ತದೆ, ಅಂತಹ ಅನ್ಯಾಯವನ್ನು ನೋಡುತ್ತಾ ಸುಮ್ಮನಿರುವುದು ನನಗೆ ಸಾಧ್ಯವಿಲ್ಲ ಎಂದು ಅವರು ತಮ್ಮ ಆಕ್ರೋಶವನ್ನೂ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಇಲಾಖೆಗಳ ಸ್ಥಿತಿಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ನ್ಯಾಯಮೂರ್ತಿಗಳು,
1. ಇಂದು ಪ್ರತಿಯೊಂದು ಸರಕಾರಿ ಇಲಾಖೆಯು ಇತರೆ ಇಲಾಖೆಯೊಂದಿಗೆ ಸ್ಪರ್ಧೆಗಿಳಿದಿರುವಂತೆ ಭ್ರಷ್ಟಾಚಾರ ನಡೆಸುತ್ತಿದೆ. ಉನ್ನತ ಮಟ್ಟದಲ್ಲಿ ಯಾವುದೇ ತಡೆಯಿಲ್ಲದೆ ಭ್ರಷ್ಟಾಚಾರ ಮುಂದುವರಿದಿದ್ದು ಅಧಿಕಾರಿಗಳೇ ಅದಕ್ಕೆ ಸಾಥ್ ನೀಡಿದ್ದಾರೆ. ಲೋಕಾಯುಕ್ತ ಸಂಸ್ಥೆಗೆ ಪೂರ್ಣ ಅಧಿಕಾರ ನೀಡಿದರೆ ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಕಷ್ಟದ ಕೆಲಸವಲ್ಲ.
2. ಬಡವರು ಹಾಗೂ ರೈತರ ರಕ್ತ ಹೀರುವ ಭ್ರಷ್ಟ ಅಧಿಕಾರಿಗಳನ್ನು ದಾರಿಗೆ ತರಲು ನೇರವಾಗಿ ತಾಲ್ಲೂಕು ಮಟ್ಟಕ್ಕೆ ಇಳಿದಿದ್ದೇನೆ. ಅಧಿಕಾರಿಗಳಿಗೆ ಕಾನೂನಿನ ಜ್ಞಾನವಿದ್ದರೂ ಏನೂ ತಿಳಿದಿಲ್ಲದಂತೆ ನಾಟಕವಾಡುತ್ತಾ ನಾಗರಿಕರಿಗೆ ತೊಂದರೆ ಕೊಡುತ್ತಿದ್ದಾರೆ. ರೈತರಿಂದ ಹಣ ಕಿತ್ತುಕೊಂಡು ಬದುಕುವ ಅಂತಹ ಅಧಿಕಾರಿಗಳಿಗೆ ಚಾಬೂಕಿನಿಂದ ಹೊಡೆದು ಕೆಲಸ ಮಾಡಿಸಿಕೊಳ್ಳುವ ಕೆಲಸವನ್ನು ಲೋಕಾಯುಕ್ತ ಸಂಸ್ಥೆಯು ನಿರಂತರವಾಗಿ ಮಾಡಲಿದೆ.
3. ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಸಾಮಾನ್ಯ ಜನರಿಗೆ ಇಂದಿಗೂ ಸ್ವಾತಂತ್ರ್ಯವಾಗಿ ಬದುಕಲು ಸಾಧ್ಯವಾಗುತ್ತಿಲ್ಲ ಎಂಬುದು ದುರ್ದೈವದ ಸಂಗತಿಯಾಗಿದೆ. ಪ್ರಾಮಾಣಿಕ ಅಧಿಕಾರಿಗಳ ಬೆಂಬಲಕ್ಕೆ ಲೋಕಾಯುಕ್ತ ಸಂಸ್ಥೆಯು ಯಾವಾಗಲೂ ನಿಲ್ಲಲಿದೆ; ಆದರೆ ಭ್ರಷ್ಟರನ್ನು ಯಾವುದೇ ಪರಿಸ್ಥಿತಿಯಲ್ಲೂ ಬಿಡುವುದಿಲ್ಲ.

