Dailyhunt Logo
  • Light mode
    Follow system
    Dark mode
    • Play Story
    • App Story
ಹರಿಯಾಣ : ನಿವೃತ್ತಿಯ ಕೆಲವು ಗಂಟೆಗಳ ಮೊದಲಷ್ಟೇ ಐ.ಎ.ಎಸ್. ಅಧಿಕಾರಿಯನ್ನು ಬಂಧಿಸಿದ 'ಸಿಬಿಐ' !

ಹರಿಯಾಣ : ನಿವೃತ್ತಿಯ ಕೆಲವು ಗಂಟೆಗಳ ಮೊದಲಷ್ಟೇ ಐ.ಎ.ಎಸ್. ಅಧಿಕಾರಿಯನ್ನು ಬಂಧಿಸಿದ 'ಸಿಬಿಐ' !

೧೬೯ ಕೋಟಿ ರೂಪಾಯಿಗಳ ಹಗರಣ ನಡೆಸಿದ ಆರೋಪ

ಚಂಡೀಗಢ (ಹರಿಯಾಣ) - ಹರಿಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂದಿನ ಸದಸ್ಯ ಮತ್ತು ಹಿರಿಯ ಐ.ಎ.ಎಫ್. ಅಧಿಕಾರಿ ಪ್ರದೀಪ ಕುಮಾರ ಅವರನ್ನು 'ಸಿಬಿಐ' ಜೂನ್ ೩೦ ರಂದು ಬಂಧಿಸಿದೆ. ಅತ್ಯಂತ ಪ್ರಮುಖ ವಿಷಯವೆಂದರೆ, ಕಳೆದ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರದೀಪ ಕುಮಾರ ಅವರು ಜೂನ್ ೩೦ ರಂದೇ ಸೇವೆಯಿಂದ ನಿವೃತ್ತರಾಗಬೇಕಿತ್ತು.

ನಿವೃತ್ತಿಯ ದಿನದಂದೇ 'ಐ.ಎ.ಎಸ್.' ಅಧಿಕಾರಿಯೊಬ್ಬರು ಬಂಧನಕ್ಕೊಳಗಾಗಿರುವುದು ಹರಿಯಾಣದಲ್ಲಿ ಇದೇ ಮೊದಲ ಘಟನೆಯಾಗಿದೆ. ಈ ಹಗರಣದಲ್ಲಿ ಬಂಧನಕ್ಕೊಳಗಾದ ಮೂರನೇ 'ಐ.ಎ.ಎಸ್.' ಅಧಿಕಾರಿ ಇವರಾಗಿದ್ದಾರೆ. ಪ್ರದೀಪ ಕುಮಾರ ಅವರು ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ, ತಮ್ಮ ಹುದ್ದೆಯ ದುರುಪಯೋಗಪಡಿಸಿಕೊಂಡು ೧೬೯ ಕೋಟಿ ರೂಪಾಯಿಗಳ ಆರ್ಥಿಕ ಅಪರಾಧ ಎಸಗಿದ್ದಾರೆ ಎಂಬ ಆರೋಪವಿದೆ. ಹರಿಯಾಣ ಸರಕಾರದ ೮ ವಿಭಿನ್ನ ಇಲಾಖೆಗಳಲ್ಲಿ ನಡೆದ ಸುಮಾರು ೫೦೪ ಕೋಟಿ ರೂಪಾಯಿಗಳ ಹಗರಣದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಈ ಬೃಹತ್ ಕ್ರಮ ಕೈಗೊಂಡಿದೆ.

೧. ಪ್ರದೀಪ ಕುಮಾರ ಅವರು ಮಂಡಳಿಯ ಹೂಡಿಕೆಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ತಮ್ಮ ವೈಯಕ್ತಿಕ ಮಟ್ಟದಲ್ಲೇ ನೋಡಿಕೊಳ್ಳುತ್ತಿದ್ದರು. ಅವರು 'ಸ್ಥಿರ ಠೇವಣಿ' (ಫಿಕ್ಸ್ ಡೆಪಾಸಿಟ್) ಮಾಡುವ ನೆಪದಲ್ಲಿ ಮಿತಿಗಿಂತ ಹೆಚ್ಚಿನ ಹಣವನ್ನು ಚಂಡೀಗಢದ ಸೆಕ್ಟರ್-೩೨ ರಲ್ಲಿರುವ 'ಐ.ಡಿ.ಎಫ್.ಸಿ.' ಬ್ಯಾಂಕಿಗೆ ಕಳುಹಿಸಿದ್ದರು. ಈ ಹಣವನ್ನು ಯಾವ ಖಾತೆಗೆ ಜಮೆ ಮಾಡಲಾಗಿತ್ತೋ, ಆ ಖಾತೆಯನ್ನು ತೆರೆಯಲು ಮಾಲಿನ್ಯ ನಿಯಂತ್ರಣ ಮಂಡಳಿಯ ಯಾವುದೇ ಅಧಿಕೃತ ಒಪ್ಪಿಗೆ ಅಥವಾ ದಾಖಲೆಗಳು ಇಲಾಖೆಯ ಬಳಿ ಇರಲಿಲ್ಲ. ಬ್ಯಾಂಕಿನಲ್ಲಿ ವಾಸ್ತವವಾಗಿ ಯಾವುದೇ 'ಸ್ಥಿರ ಠೇವಣಿ'ಯನ್ನು ಇಡಲಾಗಿರಲಿಲ್ಲ. ಅನುಮತಿಯಿಲ್ಲದೆ ತೆರೆಯಲಾದ ಈ ಖಾತೆಯಿಂದ ನಕಲಿ ಸಹಿಗಳ ಮೂಲಕ ಹಣವನ್ನು ಹಿಂತೆಗೆದುಕೊಂಡು, ಅದನ್ನು ವಿವಿಧ ನಕಲಿ ಸಂಸ್ಥೆಗಳಿಗೆ ವರ್ಗಾಯಿಸಲಾಗಿತ್ತು. ಇದರಿಂದಾಗಿ ಹರಿಯಾಣ ಸರಕಾರಕ್ಕೆ ೧೬೯ ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ.

೨. 'ಸಿಬಿಐ' ತನಿಖೆಯ ಪ್ರಕಾರ, ಈ ಹಗರಣವು ಕೇವಲ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾತ್ರ ಸೀಮಿತವಾಗಿಲ್ಲ. ಚಂಡೀಗಢದ 'ಐ.ಡಿ.ಎಫ್.ಸಿ.' ಬ್ಯಾಂಕ್ ಶಾಖೆಯಲ್ಲಿ ಹರಿಯಾಣ ಸರಕಾರದ ೮ ವಿಭಿನ್ನ ಇಲಾಖೆಗಳ ಸುಮಾರು ೫೦೪ ಕೋಟಿ ರೂಪಾಯಿಗಳ ಹಣವನ್ನು ನಕಲಿ ಸ್ಥಿರ ಠೇವಣಿಗಳ ಹೆಸರಿನಲ್ಲಿ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada