Dailyhunt Logo
  • Light mode
    Follow system
    Dark mode
    • Play Story
    • App Story
ಹಿಂದೂ ಧರ್ಮದಲ್ಲಿ ಹೇಳಿದ 'ಶ್ರಾದ್ಧದ ಮಹತ್ವ !

ಹಿಂದೂ ಧರ್ಮದಲ್ಲಿ ಹೇಳಿದ 'ಶ್ರಾದ್ಧದ ಮಹತ್ವ !

ಶ್ರಾದ್ಧದ ಮಹತ್ವ ಮತ್ತು ಆವಶ್ಯಕತೆ

. ದೇವರು, ಋಷಿ ಮತ್ತು ಸಮಾಜ, ಈ ಮೂರು ಋಣಗಳ ಜೊತೆಗೆ ಪಿತೃಋಣವನ್ನು ತೀರಿಸುವುದು ಸಹ ಅಷ್ಟೇ ಮಹತ್ವದ್ದಾಗಿದೆ. ಪಿತೃಗಳ ಬಗ್ಗೆ ಗೌರವವನ್ನು ಇಟ್ಟುಕೊಳ್ಳುವುದು, ಅವರ ಹೆಸರಿನಲ್ಲಿ ದಾನ-ಧರ್ಮ ಮಾಡುವುದು ಮತ್ತು ಅವರಿಗೆ ಸಂತೋಷವಾಗುವಂತಹ ಕೃತಿಗಳನ್ನು ಮಾಡುವುದು ಆ ವಂಶಜರ ಕರ್ತವ್ಯವಾಗಿವೆ.

ಶ್ರಾದ್ಧ ಮಾಡುವುದು ಧರ್ಮಪಾಲನೆಯ ಒಂದು ಭಾಗವಾಗಿದೆ ಎಂದು ಧರ್ಮಶಾಸ್ತ್ರವು ಹೇಳುತ್ತದೆ.

ಆ. ಶ್ರಾದ್ಧಾದಿ ಕುಲಧರ್ಮವನ್ನು ಪಾಲಿಸುವುದರಿಂದಲೇ ವಂಶವೃದ್ಧಿಯಾಗುತ್ತದೆ, ಇಲ್ಲವಾದರೆ ವಂಶವು ನಾಶವಾಗುವುದು ನಿಶ್ಚಿತ : 'ಗರ್ಭಧಾರಣೆಯಾದ ಮೇಲೆ, ಆ ಮಗುವಿನ ಜನ್ಮ ಸುಖಕರವಾಗಿ ಆಗಬೇಕು. ಗರ್ಭದಲ್ಲಿ ಜೀವದ ಪ್ರವೇಶ, ಅದರ ಬೆಳವಣಿಗೆ, ಗರ್ಭವತಿ ಮಾತೆಯ ಪ್ರಸನ್ನತೆ ಮತ್ತು ಸುಲಭ ಹೆರಿಗೆಯು ಕೇವಲ ಔಷಧಿಗಳಿಂದ ಆಗುತ್ತದೆಯೇ ? ಇದಕ್ಕೆ ಈಶ್ವರನ ಕೃಪೆ ಬೇಕು. ವಿಶ್ವವನ್ನು ನಿರ್ಮಾಣ ಮಾಡಿದ ಶಕ್ತಿಯ ಕೃಪೆ ಬೇಕು. ಪಿತೃಗಳು ವಂಶರಕ್ಷಕರಾಗಿದ್ದಾರೆ; ಆದುದರಿಂದ ಶಾಶ್ವತ ಕುಲಧರ್ಮ, ಶ್ರಾದ್ಧಾದಿ ಧರ್ಮಗಳನ್ನು ಸರಿಯಾಗಿ ಮಾಡಬೇಕು. ಕುಲಧರ್ಮವನ್ನು ಪಾಲಿಸದಿದ್ದರೆ ಮಾತೃದೋಷ ಮತ್ತು ಪಿತೃದೋಷಗಳು ಹೆಚ್ಚಾಗಿ ಕುಟುಂಬದ ನಾಶವು ನಿಶ್ಚಿತವಾಗಿದೆ.
ಶ್ರಾದ್ಧಾದಿ ಕುಲಧರ್ಮಗಳನ್ನು ಪಾಲಿಸಿದರೆ ವಂಶವೃದ್ಧಿಯಾಗುವುದು ನಿಶ್ಚಿತವಾಗಿದೆ. ಆದುದರಿಂದ ಶಾಶ್ವತವಾದ ಕುಲಧರ್ಮಗಳನ್ನು, ಶ್ರಾದ್ಧಾದಿ ಧರ್ಮಗಳನ್ನು ಪಾಲಿಸಬೇಕು.

ಇ. 'ಪಿತೃಗಳಿಗೆ ಅವರ ಪುತ್ರರು ಪಿಂಡೋದಕ (ಪಿಂಡ ಮತ್ತು ಉದಕ)ವನ್ನು ಕೊಟ್ಟ ಮೇಲೆಯೇ ಸುಖಿ ಮತ್ತು ಸಂತುಷ್ಟರಾಗುತ್ತಾರೆ. ಇಲ್ಲಿ 'ಪುತ್ರರೆಂದು ಯಾರಿಗೆ ಹೇಳುತ್ತಾರೆ ಎನ್ನುವ ಬಗ್ಗೆ ಶಾಸ್ತ್ರವಚನದಲ್ಲಿ ಮುಂದಿನಂತೆ ಹೇಳಲಾಗಿದೆ -

ಪುನ್ನಾಮ್ನೋ ನರಕಾದ್ಯಸ್ಮಾತ್ ತ್ರಾಯತೇ ಪಿತರಂ ಸುತಃ |
ತಸ್ಮಾತ್ಪುತ್ರ ಇತಿ ಪ್ರೋಕ್ತಃ ಸ್ವಮಮೇವ ಸ್ವಯಂಭುವಾ ||

- ಮನುಸ್ಮ ತಿ, ಅಧ್ಯಾಯ ೯, ಶ್ಲೋಕ ೧೩೮

ಅರ್ಥ : ಪುತ್ರನು ತನ್ನ ಪಿತೃಗಳನ್ನು (ಪೂರ್ವಜರನ್ನು) 'ಪುಂ ಎಂಬ ಹೆಸರಿನ ನರಕದಿಂದ ರಕ್ಷಣೆ ಮಾಡುತ್ತಾನೆ. ಆದುದರಿಂದ ಬ್ರಹ್ಮದೇವನೇ ಆತನಿಗೆ 'ಪುತ್ರ ಎಂದಿದ್ದಾನೆ.

ಪಿತೃಗಳಿಗೆ ಸದ್ಗತಿ ಸಿಗಬೇಕು, ಅವರು ಅನುಭವಿಸಬೇಕಾದ ಅಸಂಖ್ಯಾತ ಯಾತನೆಗಳಿಂದ ಅವರಿಗೆ ಮುಕ್ತಿ ಸಿಗಬೇಕು ಮತ್ತು ಪಿತೃಗಳು ಪಿತೃಲೋಕದಿಂದ ವಂಶಜರ ಮೇಲೆ ಕೃಪಾದೃಷ್ಟಿಯನ್ನು ಇಡಬೇಕೆಂದು ಪುತ್ರನು ಶ್ರಾದ್ಧವಿಧಿಯನ್ನು ಮಾಡಬೇಕು. ಇದು ಪುತ್ರ ಎಂದು ಹೇಳಿಸಿಕೊಳ್ಳುವವನ ಕರ್ತವ್ಯವೇ ಆಗಿದೆ ಎಂಬುದು ಮೇಲಿನ ಶ್ಲೋಕದಿಂದ ಸ್ಪಷ್ಟವಾಗುತ್ತದೆ.

ದೇವಪಿತೃಕಾರ್ಯಾಭ್ಯಾಂ ನ ಪ್ರಮದಿತವ್ಯಮ್ |

- ತೈತ್ತೀರಿಯೋಪನಿಷದ್ ೧, ಅನುವಾಕ ೧೧, ವಾಕ್ಯ ೨

ಅರ್ಥ : ದೇವರ ಕಾರ್ಯ ಮತ್ತು ಪಿತೃಗಳ ಕಾರ್ಯವನ್ನು ಯಾವಾಗಲೂ ಅಲಕ್ಷ್ಯ ಮಾಡಬಾರದು. ಈ ಕಾರ್ಯಗಳನ್ನು ಮಾಡುವುದನ್ನು ಬಿಡಬಾರದು. (ಸನಾತನ ನಿರ್ಮಿತ ಗ್ರಂಥ 'ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ)

ಪಿತೃಪಕ್ಷ (ಮಹಾಲಯ ಪಕ್ಷ) ಮಹತ್ವ

ಅ. ಭಾದ್ರಪದ ಕೃಷ್ಣ ಪಕ್ಷಕ್ಕೆ 'ಪಿತೃಪಕ್ಷ ಎನ್ನುತ್ತಾರೆ, ಈ ಪಕ್ಷವು ಪಿತೃಗಳಿಗೆ ಪ್ರಿಯವಾಗಿದೆ. ಈ ಪಕ್ಷದಲ್ಲಿ ಪಿತೃಗಳಿಗೆ ಶ್ರಾದ್ಧ ಮಾಡಿದರೆ ಅವರು ವರ್ಷಪೂರ್ತಿ ತೃಪ್ತರಾಗುತ್ತಾರೆ.
ಆ. ಸೂರ್ಯೇ ಕನ್ಯಾಗತೇ ಶ್ರಾದ್ಧಂ ಯೋ ನ ಕುರ್ಯಾದ್ ಗೃಹಾಶ್ರಮೀ |
ಧನಂ ಪುತ್ರಾಃ ಕುತಸ್ತಸ್ಯ ಪಿತೃನಿಃಶ್ವಾಸಪೀಡಯಾ ||

- ಗಾರ್ಗ್ಯ (ಶ್ರಾದ್ಧಕಲ್ಪಲತಾ, ಪುಟ ೯೭)

ಅರ್ಥ : ಯಾವ ಗೃಹಸ್ಥನು ಸೂರ್ಯನು ಕನ್ಯಾರಾಶಿಯಲ್ಲಿದ್ದಾಗ (ಪಿತೃಪಕ್ಷದಲ್ಲಿ) ಶ್ರಾದ್ಧವನ್ನು ಮಾಡುವುದಿಲ್ಲವೋ, ಅಂತಹವನಿಗೆ ಪಿತೃಗಳ ದುಃಖದ ನಿಟ್ಟುಸಿರಿಗೆ ಈಡಾಗ ಬೇಕಾಗುತ್ತದೆ. ಇಂತಹವನಿಗೆ ಧನ ಮತ್ತು ಪುತ್ರ ಪ್ರಾಪ್ತಿಯು ಹೇಗೆ ಆಗುವುದು ? ಪಿತೃಲೋಕವು ಖಾಲಿಯಿರುತ್ತದೆ ಎಂದರೆ ಆ ಸಮಯದಲ್ಲಿ ಕುಲದಲ್ಲಿನ ಎಲ್ಲ ಪಿತೃಗಳು ತಮ್ಮ ವಂಶಜರಿಗೆ ಆಶೀರ್ವಾದವನ್ನು ಕೊಡಲು ಬಂದಿರುತ್ತಾರೆ ಮತ್ತು ಶ್ರಾದ್ಧವನ್ನು ಮಾಡದಿದ್ದರೆ ಅವರು ನಮಗೆ ಶಾಪವನ್ನು ಕೊಟ್ಟು ಹೊರಟು ಹೋಗುತ್ತಾರೆ. ಆದುದರಿಂದ ಈ ಸಮಯದಲ್ಲಿ ಶ್ರಾದ್ಧವನ್ನು ಮಾಡುವುದು ಮಹತ್ವದ್ದಾಗಿದೆ. ಹುಣ್ಣಿಮೆಯ ತಿಥಿಯಂದು ತಂದೆ ಅಥವಾ ಇತರ ಸಂಬಂಧಿಕರು ಮೃತರಾಗಿದ್ದಲ್ಲಿ, ಈ ಪಕ್ಷದಲ್ಲಿನ ಭರಣಿ ನಕ್ಷತ್ರ, ಅಷ್ಟಮಿ, ದ್ವಾದಶಿ ಅಥವಾ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡಬೇಕು.

ವಾರ್ಷಿಕ ಶ್ರಾದ್ಧವನ್ನು ಮಾಡಿದ ನಂತರ ಪುನಃ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು ?

'ವಾರ್ಷಿಕ ಶ್ರಾದ್ಧದಿಂದ ಆಯಾ ವಿಶಿಷ್ಟ ಲಿಂಗದೇಹಗಳಿಗೆ ಗತಿ ಸಿಗಲು ಸಹಾಯವಾಗುತ್ತದೆ. ಇದರಿಂದ ಆಯಾ ವ್ಯಕ್ತಿಗಳ ವ್ಯಷ್ಟಿ ಸ್ತರದಲ್ಲಿನ ಋಣವನ್ನು ತೀರಿಸಲು ಸಹಾಯವಾಗುತ್ತದೆ. ವಾರ್ಷಿಕ ಶ್ರಾದ್ಧವು ವೈಯಕ್ತಿಕ ಸ್ತರದಲ್ಲಿ ಋಣವನ್ನು ತೀರಿಸುವ ಒಂದು ವ್ಯಷ್ಟಿ ಉಪಾಸನೆಯೇ ಆಗಿದೆ ಮತ್ತು ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧವು ಸಮಷ್ಟಿ ಸ್ತರದಲ್ಲಿ ಪಿತೃಗಳ ಋಣವನ್ನು ತೀರಿಸುವ ಸಮಷ್ಟಿ ಉಪಾಸನೆಯಾಗಿದೆ. ವ್ಯಷ್ಟಿ ಋಣವು ಆಯಾ ಲಿಂಗದೇಹಗಳ ಬಗೆಗಿನ ಪ್ರತ್ಯಕ್ಷ ಕರ್ತವ್ಯ ಪಾಲನೆಯನ್ನು ಕಲಿಸಿದರೆ ಸಮಷ್ಟಿ ಋಣವು ಒಂದೇ ಕಾಲದಲ್ಲಿ ವ್ಯಾಪಕ ಮಟ್ಟದಲ್ಲಿ ಕೊಡುಕೊಳ್ಳುವ ಲೆಕ್ಕವನ್ನು ತೀರಿಸುತ್ತದೆ. ನಮ್ಮೊಂದಿಗೆ ಅತಿಹೆಚ್ಚು ಸಂಬಂಧವಿರುವ ಮೊದಲಿನ ಒಂದೆರಡು ಪೀಳಿಗೆಗಳ ಪಿತೃಗಳ ಶ್ರಾದ್ಧವನ್ನು ನಾವು ಮಾಡುತ್ತೇವೆ. ಏಕೆಂದರೆ ಇವರೊಂದಿಗೆ ನಮ್ಮ ಕೊಡುಕೊಳ್ಳುವಿಕೆಯ ಲೆಕ್ಕಾಚಾರವು ಬಹಳಷ್ಟು ಇರುತ್ತದೆ. ಇತರ ಪೀಳಿಗೆಗಳಿಗಿಂತ ಈ ಪಿತೃಗಳಲ್ಲಿ ಕುಟುಂಬದಲ್ಲಿ ಸಿಲುಕಿಕೊಳ್ಳುವ ಆಸಕ್ತಿಯ ಪ್ರಮಾಣ ಹೆಚ್ಚಿರುವುದರಿಂದ ಅವರ ಈ ಬಂಧನವು ತೀವ್ರವಾಗಿರುತ್ತದೆ. ಆದುದರಿಂದ ಈ ಬಂಧನವನ್ನು ಕಡಿದು ಹಾಕಲು ವೈಯಕ್ತಿಕ ರೀತಿಯಲ್ಲಿ ಒಂದು ವರ್ಷದ ವರೆಗೆ ಮಾಡುವ ಶ್ರಾದ್ಧಕ್ಕೆ ಸಂಬಂಧಿಸಿದ ವಿಧಿಗಳನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಇದರ ತುಲನೆಯಲ್ಲಿ ಅದಕ್ಕೂ ಮೊದಲಿನ ಇತರ ಪಿತೃಗಳೊಂದಿಗಿನ ನಮ್ಮ ಸಂಬಂಧದ ತೀವ್ರತೆಯು ಕಡಿಮೆ ಇರುವುದರಿಂದ ಅವರಿಗೆ ವಿಧಿಯನ್ನು ಸಾಮೂಹಿಕವಾಗಿ ಪಿತೃಪಕ್ಷದಲ್ಲಿ ಮಾಡುವುದು ಸೂಕ್ತವಾಗಿದೆ. ಆದುದರಿಂದ ಒಂದು ವರ್ಷದ ವರೆಗೆ ಮಾಡುವ ಶ್ರಾದ್ಧ ಮತ್ತು ಪಿತೃಪಕ್ಷದಲ್ಲಿನ ಶ್ರಾದ್ಧ ಇವರೆಡೂ ಮಾಡಬೇಕು. (ಸನಾತನ ನಿರ್ಮಿತ ಗ್ರಂಥ 'ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ)

ಸರ್ವಪಿತ್ರೀ ಅಮಾವಾಸ್ಯೆ

ಪಿತೃಪಕ್ಷದ (ಭಾದ್ರಪದ ಮಾಸದ) ಅಮಾವಾಸ್ಯೆಗೆ ಸರ್ವಪಿತ್ರೀ ಅಮಾವಾಸ್ಯೆ ಎನ್ನುತ್ತಾರೆ. ಈ ತಿಥಿಗೆ ಕುಲದಲ್ಲಿನ ಎಲ್ಲ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧವನ್ನು ಮಾಡುತ್ತಾರೆ. ವರ್ಷವಿಡೀ ಯಾವಾಗಲೂ ಮಾಡುವ ಮತ್ತು ಪಿತೃಪಕ್ಷದ ಇತರ ತಿಥಿಗಳಲ್ಲಿ ಮಾಡುವ ಶ್ರಾದ್ಧವನ್ನು ಮಾಡಲು ಆಗದಿದ್ದರೆ ಈ ತಿಥಿಯಂದು ಎಲ್ಲರೂ ಶ್ರಾದ್ಧವನ್ನು ಮಾಡುವುದು ಅತ್ಯಾವಶ್ಯಕವಾಗಿದೆ. ಏಕೆಂದರೆ ಇದು ಪಿತೃಪಕ್ಷದಲ್ಲಿನ ಕೊನೆಯ ತಿಥಿಯಾಗಿದೆ. ಅದೇ ರೀತಿ ಅಮಾವಾಸ್ಯೆಯು ಶ್ರಾದ್ಧವನ್ನು ಮಾಡಲು ಹೆಚ್ಚು ಯೋಗ್ಯವಾದ ತಿಥಿಯಾಗಿದೆ, ಅದರಲ್ಲಿಯೂ ಪಿತೃಪಕ್ಷದಲ್ಲಿನ ಅಮಾವಾಸ್ಯೆಯು ಸರ್ವಶ್ರೇಷ್ಠ ತಿಥಿ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ದಿನದಂದು ಸಾಧಾರಣ ಎಲ್ಲ ಮನೆಗಳಿಂದ ಕನಿಷ್ಠ ಒಬ್ಬ ಬ್ರಾಹ್ಮಣನನ್ನಾದರೂ ಭೋಜನಕ್ಕೆ ಕರೆಯುತ್ತಾರೆ. ಮೀನುಗಾರ, ಠಾಕೂರ, ಕಾತಕರಿ, ಒಕ್ಕಲಿಗ ಮುಂತಾದ ಜಾತಿಗಳಲ್ಲಿ ಪಿತೃಗಳನ್ನು ಉದ್ದೇಶಿಸಿ ಈ ದಿನ ಅನ್ನದ ಅಥವಾ ಹಿಟ್ಟಿನ (ಕಣಕದ) ಪಿಂಡವನ್ನು ಕೊಡುತ್ತಾರೆ ಮತ್ತು ತಮ್ಮ ಜಾತಿಯಲ್ಲಿನ ಕೆಲವು ಜನರಿಗೆ ಊಟ ಬಡಿಸುತ್ತಾರೆ. ಇವರಲ್ಲಿ ಈ ದಿನ ಬ್ರಾಹ್ಮಣರಿಗೆ ಅಡುಗೆಯ ಸಾಮಗ್ರಿಗಳನ್ನು ಕೊಡುವ ರೂಢಿಯೂ ಇದೆ.

(ಸನಾತನ ನಿರ್ಮಿತ ಗ್ರಂಥ 'ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ)

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada