ಟೋಕಿಯೋ (ಜಪಾನ್) - ಜಪಾನ್‌ನ ಸೈತಾಮಾ ಪ್ರಾಂತ್ಯದ ಕವಾಗೋಯೆಯಲ್ಲಿ ಪಾಕಿಸ್ತಾನ ನಿರ್ಮಿಸಿರುವ ಮಸೀದಿಯು ಅಕ್ರಮವಾಗಿದೆ ಎಂದು ಅಲ್ಲಿನ ಆಡಳಿತ ತಿಳಿಸಿದ್ದು, ಅದನ್ನು ಧ್ವಂಸಗೊಳಿಸಲಾಗುವುದು ಎಂದು ಹೇಳಿದೆ. ಈ ಮಸೀದಿಯನ್ನು ಗುಡ್ಡಗಾಡು ಅರಣ್ಯ ಭೂಮಿ ಎಂದು ವರ್ಗೀಕರಿಸಲಾದ ೪,೫೦೦ ಚದರ ಮೀಟರ್ ವಿಸ್ತೀರ್ಣದ ಭೂಖಂಡದಲ್ಲಿ ನಿರ್ಮಿಸಲಾಗಿದ್ದು, ಸ್ಥಳೀಯ ಆಡಳಿತ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಕವಾಗೋಯೆಯಲ್ಲಿನ ಈ ಜಾಗವು ನಗರೀಕರಣ ನಿಯಂತ್ರಣ ವಲಯಕ್ಕೆ ಒಳಪಡುತ್ತದೆ. ಸ್ಥಳೀಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆಯದ ಹೊರತು ಯಾವುದೇ ನಿರ್ಮಾಣ ಕಾರ್ಯ ಮಾಡುವಂತಿಲ್ಲ. ವಿಶೇಷವೆಂದರೆ, ಈ ಮಸೀದಿಯ ಉದ್ಘಾಟನೆಗೆ ಜಪಾನ್‌ನಲ್ಲಿನ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು. ಹಾಗಾಗಿ ಈ ವಿಷಯ ಈಗ ಬೆಳಕಿಗೆ ಬಂದಿದೆ.
ಪಾಕಿಸ್ತಾನದಿಂದ ಸ್ಪಷ್ಟೀಕರಣ
ಸ್ಥಳೀಯ ಕಾನೂನನ್ನು ಪಾಲಿಸದೆ ನಿರ್ಮಿಸಲಾಗಿರುವ ಈ ಮಸೀದಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಅನುಮತಿ ಪಡೆದೇ ಮಸೀದಿ ನಿರ್ಮಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಪಾಕಿಸ್ತಾನದ ರಾಯಭಾರಿ ಉದ್ಘಾಟನೆಗೆ ಹಾಜರಾಗಿದ್ದರು. ಮುಸ್ಲಿಂ ನಾಗರಿಕರು ಸ್ಥಳೀಯ ಆಡಳಿತಕ್ಕೆ ಸಹಕರಿಸಬೇಕು, ಎಂದು ಪಾಕಿಸ್ತಾನದ ಕಡೆಯಿಂದ ಮನವಿ ಮಾಡಲಾಗಿದೆ.

