Dailyhunt Logo
  • Light mode
    Follow system
    Dark mode
    • Play Story
    • App Story
ಕರದರ್ಶನದ ಮಹತ್ವ !

ಕರದರ್ಶನದ ಮಹತ್ವ !

೧. ದೇವರು ನೀಡಿದ ಇಂದ್ರಿಯಗಳಿಂದ ಮಾನವನಿಗೆ ಅಪಾರ ಲಾಭವಾಗುವುದು

'ದೇವರು ನಮಗೆ ಕೈ, ಕಾಲು, ಮೂಗು, ಕಿವಿಗಳು ಮತ್ತು ಕಣ್ಣುಗಳಂತಹ ಅಂಗಾಂಗ ಗಳನ್ನು ನೀಡಿದ್ದಾನೆ. ದೈನಂದಿನ ಜೀವನದಲ್ಲಿ ನಮಗೆ ಈ ಅಂಗಾಂಗಗಳು ಮತ್ತು ಇಂದ್ರಿಯಗಳಿಂದ ಬಹಳಷ್ಟು ಲಾಭವಾಗುತ್ತದೆ.

ನಾವು ಕಿವಿಗಳಿಂದ ಕೇಳಬಹುದು. ನಾವು ನಮ್ಮ ಸುತ್ತಮುತ್ತಲಿನ ಜಗತ್ತನ್ನು ಕಣ್ಣುಗಳಿಂದ ನೋಡಬಹುದು. ಕೈಗಳಿಂದ ಬಹಳಷ್ಟು ಕೆಲಸ ಮಾಡುತ್ತೇವೆ ಮತ್ತು ಕಾಲುಗಳಿಂದ ನಡೆಯುತ್ತೇವೆ.

೨. ಅಂಗೈಯಿಂದ ಒಳ್ಳೆಯ ಕೆಲಸಗಳನ್ನು, ಪುಣ್ಯಕಾರ್ಯ ಮಾಡಬಹುದು ಮತ್ತು ಅಪಾರ ಯಶಸ್ಸು ಗಳಿಸಬಹುದು

ನಮ್ಮ ಅಂಗೈ (ಹಸ್ತ) ಅಥವಾ ಮುಂಗೈ, ಬಾಹು (ತೋಳು) ಮತ್ತು ಭುಜದ ಭಾಗ (ದಂಡ) ಹೀಗೆ ಎಂಬ ಮೂರು ಪ್ರಮುಖ ಭಾಗಗಳಿರುತ್ತವೆ. ಒಂದು ವೇಳೆ ಅವುಗಳಲ್ಲಿ ಅಂಗೈ ಇಲ್ಲದಿದ್ದರೆ ಏನಾಗಬಹುದು ? ಎಂದು ವಿಚಾರ ಮಾಡಿ. ನಮಗೆ ಸುಲಭವಾಗಿ ತಿನ್ನಲು-ಕುಡಿಯಲು ಸಾಧ್ಯವಾಗಬಹುದೇ ? ಬರೆಯಲು ಸಾಧ್ಯವಾಗಬಹುದೇ ? ಅಂಗೈ ಇಲ್ಲದೆ ನಮಗೆ ಈ ಏನೂ ಮಾಡಲು ಸಾಧ್ಯವಿಲ್ಲ. ನಾವು ಅಂಗೈಯಿಂದ ಒಳ್ಳೆಯ ಕರ್ಮ, ಪುಣ್ಯಕರ್ಮಗಳನ್ನು ಮಾಡಬಹುದು, ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಯಶಸ್ಸು ಮತ್ತು ಕೀರ್ತಿಯನ್ನು ಗಳಿಸಬಹುದು. ಇದನ್ನೇ 'ಪುರುಷಾರ್ಥ ಸಾಧಿಸುವುದು' ಎಂದು ಕರೆಯುತ್ತಾರೆ.

 ಜಗದ್ಗುರು ರಾಮಾನಂದಾಚಾರ್ಯ ಸ್ವಾಮಿ ನರೇಂದ್ರಾಚಾರ್ಯಜಿ

೩. ಅಂಗೈಯಲ್ಲಿ ಪುರುಷಾರ್ಥವನ್ನು ಸಾಧಿಸುವ ದೈವೀ ಶಕ್ತಿಗಳ ವಾಸ್ತವ್ಯ ಇರುವುದು

ನಮ್ಮ ಧರ್ಮಶ್ರದ್ಧೆಯ ಪ್ರಕಾರ 'ನಮ್ಮ ಕೈಯಿಂದ ಪುರುಷಾರ್ಥವನ್ನು ಉಂಟುಮಾಡುವ ದೈವೀ ಶಕ್ತಿಗಳ ವಾಸಸ್ಥಾನವು ನಮ್ಮ ಅಂಗೈಯಲ್ಲೇ ಇರುತ್ತದೆ' ಎಂದು ನಂಬಲಾಗುತ್ತದೆ. ಇದಕ್ಕಾಗಿಯೇ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯಲ್ಲೇ ಕುಳಿತು ನಮ್ಮ ಎರಡೂ ಅಂಗೈಗಳ ದರ್ಶನ, ಅಂದರೆ 'ಕರದರ್ಶನ' ಮಾಡಬೇಕು. ಅದಕ್ಕಾಗಿ ನಾವು ನಮ್ಮ ಎರಡೂ ಅಂಗೈಗಳನ್ನು ಅಂದರೆ, ಎರಡೂ ಕೈಗಳ ಅಂಗೈಗಳನ್ನು ಒಟ್ಟಿಗೆ ಜೋಡಿಸಿ ಆ ಅಂಗೈಗಳ ದರ್ಶನವನ್ನು ಪಡೆಯಬೇಕು ಮತ್ತು ಕೆಳಗಿನ ಶ್ಲೋಕ ಹೇಳಬೇಕು -

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |

ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ ||

ಅರ್ಥ : ಕೈಯ ತುದಿಯಲ್ಲಿ ಲಕ್ಷ್ಮೀಯು ವಾಸಿಸುತ್ತಾಳೆ. ಕೈಯ ಮಧ್ಯಭಾಗದಲ್ಲಿ ಸರಸ್ವತಿ ಇದ್ದಾಳೆ ಮತ್ತು ಮೂಲ ಭಾಗದಲ್ಲಿ ಗೋವಿಂದನಿದ್ದಾನೆ; ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಕೈಗಳ ದರ್ಶನವನ್ನು ಪಡೆಯಬೇಕು. ಶ್ಲೋಕವನ್ನು ಹೇಳಿದ ನಂತರ ಎರಡೂ ಕೈಗಳ ಅಂಗೈಗಳನ್ನು ಪರಸ್ಪರ ಮೆಲ್ಲಗೆ ಉಜ್ಜಿ ಮುಖಕ್ಕೆ ಸವರಿಕೊಳ್ಳಬೇಕು.

೪. ಶ್ಲೋಕದ ಅರ್ಥ

೪ ಅ. ಕರಾಗ್ರೇ ವಸತೇ ಲಕ್ಷ್ಮೀಃ | : 'ಕರಾಗ್ರೇ ವಸತೇ ಲಕ್ಷ್ಮೀಃ', ಅಂದರೆ ನಮ್ಮ ಅಂಗೈ ಬೆರಳುಗಳ ಮುಂಭಾಗ ಎಂದರೆ ತುದಿಗಳು ಇರುವಲ್ಲಿ, ಯಾವಾಗಲೂ ಸಂಪತ್ತು ಮತ್ತು ಐಶ್ವರ್ಯದ ದೇವತೆಯಾದ ಶ್ರೀ ಲಕ್ಷ್ಮೀದೇವಿಯು ವಾಸಿಸುತ್ತಾಳೆ. ಇದರ ವ್ಯಾವಹಾರಿಕ ಅರ್ಥವೇನೆಂದರೆ, ಧನ, ಸಂಪತ್ತು ಮತ್ತು ಆಸ್ತಿ ವಿಷಯದಲ್ಲಿ ವ್ಯವಹರಿಸುವಾಗ ಮುಖ್ಯವಾಗಿ ಬೆರಳುಗಳನ್ನೇ ಬಳಸಲಾಗುತ್ತದೆ.

೪ ಆ. ಕರಮಧ್ಯೇ ಸರಸ್ವತೀ : 'ಕರಮಧ್ಯೆ ಸರಸ್ವತಿ', ಇದರ ಅರ್ಥ, ಅಂಗೈಗಳ ಮಧ್ಯಭಾಗದಲ್ಲಿ ಶ್ರೀ ಸರಸ್ವತೀದೇವಿಯು ವಾಸಿಸುತ್ತಾಳೆ. ಸರಸ್ವತಿ ಮಾತೆಯು ವಿದ್ಯೆ ಮತ್ತು ಜ್ಞಾನದ ದೇವತೆಯಾಗಿದ್ದಾಳೆ. ಗ್ರಂಥ ಅಥವಾ ಪುಸ್ತಕಗಳನ್ನು ಹಿಡಿಯುವಾಗ ಹೆಚ್ಚಾಗಿ ನಮ್ಮ ಅಂಗೈಗಳ ಮಧ್ಯಭಾಗದ ಆಧಾರ ಇರುತ್ತದೆ. ಕೆಲವರು ಈ ಕ್ರಿಯೆಯಲ್ಲಿ ಬೆರಳುಗಳ ಪಾತ್ರವೂ ಇದೆಯಲ್ಲ ಎಂದು ಸಂದೇಹಪಡಬಹುದು. ಅದು ನಿಜ; ಏಕೆಂದರೆ ಎಲ್ಲಿ ವಿದ್ಯೆ ಮತ್ತು ಜ್ಞಾನವಿರುತ್ತದೆಯೋ, ಅಲ್ಲಿ ಲಕ್ಷ್ಮೀಯ ವರದಹಸ್ತ ಇದ್ದೇ ಇರುತ್ತದೆ !

೪ ಇ. ಕರಮೂಲೇ ತು ಗೋವಿಂದ : 'ಕರಮೂಲೇ ತು ಗೋವಿಂದಃ', ಇದರ ಅರ್ಥ, ಅಂಗೈಗಳ ಮೂಲಭಾಗದಲ್ಲಿ ಪ್ರತ್ಯಕ್ಷ ಗೋವಿಂದ, ಅಂದರೆ ಭಗವಾನ ಶ್ರೀಕೃಷ್ಣನು ವಾಸಿಸುತ್ತಾನೆ. ಇದರ ವ್ಯಾವಹಾರಿಕ ಅರ್ಥವೆಂದರೆ, ಸ್ವಕರ್ತೃತ್ವದ ಬಲದಿಂದ ಜ್ಞಾನ ಮತ್ತು ವಿದ್ಯೆಯನ್ನು ಪಡೆದು ವೈಭವವನ್ನು ಗಳಿಸಲು ಆವಶ್ಯಕವಾಗಿರುವ ಈಶ್ವರೀಯ ಪ್ರೇರಣಾಶಕ್ತಿಯು ಅಂಗೈಯ ಮೂಲಭಾಗದಲ್ಲಿ, ಅಂದರೆ ಮಣಿಕಟ್ಟಿನಲ್ಲಿರುತ್ತದೆ.

೪ ಈ. ಪ್ರಭಾತೇ ಕರದರ್ಶನಮ್ : 'ಪ್ರಭಾತೇ ಕರದರ್ಶನಮ್', ಎಂದರೆ ಬೆಳಗ್ಗೆ ಎಚ್ಚರವಾದ ತಕ್ಷಣ ಹಾಸಿಗೆಯಲ್ಲಿ ಕುಳಿತು 'ಕರದರ್ಶನ' ಮಾಡಬೇಕು. ಕರದರ್ಶನದ ನಂತರ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಮತ್ತು ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾದ ಭಕ್ತಶ್ರೇಷ್ಠ ಹನುಮಂತನನ್ನು ಸ್ಮರಿಸಬೇಕು, ಹಾಗೆಯೇ ಭೂಮಿಗೆ ಪಾದಸ್ಪರ್ಶ ಮಾಡುವ ಮೊದಲು ಭೂಮಿತಾಯಿಗೆ ವಂದಿಸಬೇಕು.'

- ಜಗದ್ಗುರು ರಾಮಾನಂದಾಚಾರ್ಯ ಸ್ವಾಮಿ ನರೇಂದ್ರಾಚಾರ್ಯಜಿ

(ಆಧಾರ : ಮಾಸಿಕ 'ಧರ್ಮಕ್ಷೇತ್ರ', ಆಗಸ್ಟ್ ೨೦೧೦)

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada