ಲೂಧಿಯಾನ (ಪಂಜಾಬ್) - ಐ.ಎಸ್.ಐ. (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ - ಅಂತರಸೇವಾ ಗೂಢಚಾರ ಸಂಸ್ಥೆ) ಈ ಪಾಕಿಸ್ತಾನಿ ಗೂಢಚಾರ ಸಂಸ್ಥೆಗಾಗಿ ಗೂಢಚರ್ಯೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಇಲ್ಲಿಂದ ಒಬ್ಬ ೨೨ ವರ್ಷದ ಅಂಗಡಿ ಮಾಲಿಕನೊಬ್ಬನನ್ನು ಬಂಧಿಸಿದ್ದಾರೆ.
ರಛಪಾಲ್ ಸಿಂಗ್ ಎಂಬುದು ಅವನ ಹೆಸರಾಗಿದ್ದು, ಅವನು ಗುರ್ದಾಸ್‌ಪುರ ಜಿಲ್ಲೆಯ ಸರ್ಫ್ ಕೋಟ್ ಗ್ರಾಮದ ನಿವಾಸಿಯಾಗಿದ್ದಾನೆ. ಅವನು ಲೂಧಿಯಾನದ ಫಿರೋಜ್‌ಪುರ ರಸ್ತೆಯಲ್ಲಿರುವ ನ್ಯೂ ಸುಂದರ್ ನಗರದ ಮೆಡ್‌ವೇಸ್ ಆಸ್ಪತ್ರೆಯ ಎದುರು ಅಂಗಡಿಯೊಂದನ್ನು ಬಾಡಿಗೆಗೆ ಪಡೆದಿದ್ದನು.
ಇದೇ ಅಂಗಡಿಯಲ್ಲಿ ಅವನು ಶೂಗಳನ್ನು ಮಾರಾಟ ಮಾಡುತ್ತಿದ್ದನು. ಆರೋಪಿಯು ಅಂಗಡಿಯ ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದನು. ಅದರ ಮೂಲಕ ಅವನು ನಗರದ ಎಲ್ಲಾ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದನು ಎಂದು ಆರೋಪಿಸಲಾಗಿದೆ. ಪೊಲೀಸರಿಗೆ ಸಿಕ್ಕಿದ ಗುಪ್ತ ಮಾಹಿತಿಯ ನಂತರ ಅವನನ್ನು ಬಲೆ ಬೀಸಿ ಬಂಧಿಸಲಾಯಿತು. ತನಿಖೆಯಲ್ಲಿ ಅವನು ವಿಭಿನ್ನ ಮೊಬೈಲ್ ಸಂಖ್ಯೆಗಳಿಂದ ಬೆದರಿಕೆಗಳನ್ನು ಹಾಕುತ್ತಿದ್ದನು ಎಂದೂ ತಿಳಿದುಬಂದಿದೆ. ಈ ಗೂಢಚರ್ಯೆಯ ಹಿಂದೆ ಲೂಧಿಯಾನದಲ್ಲಿ ದೊಡ್ಡ ವಿಧ್ವಂಸಕ ಕೃತ್ಯವನ್ನು ಎಸಗುವ ಐ.ಎಸ್.ಐ.ನ ಸಂಚು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

