Dailyhunt Logo
  • Light mode
    Follow system
    Dark mode
    • Play Story
    • App Story
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ

ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ

ಕಾಳಿದಾಸ ಉವಾಚ (ಮಹಾಕವಿ ಕಾಳಿದಾಸರ ಮತಕ್ಕನುಸಾರ)

'ಸರ್ವತೀರ್ಥಾತ್ಮಿಕೇ ಸರ್ವಮಂತ್ರಾತ್ಮಿಕೇ ಸರ್ವತಂತ್ರಾತ್ಮಿಕೇ ಸರ್ವಯಂತ್ರಾತ್ಮಿಕೇ ಸರ್ವಪೀಠಾತ್ಮಿಕೇ ಸರ್ವತತ್ತ್ವಾತ್ಮಿಕೇ ಸರ್ವಶಕ್ತ್ಯಾತ್ಮಿಕೇ ಸರ್ವವಿದ್ಯಾತ್ಮಿಕೇ ಸರ್ವಯೋಗಾತ್ಮಿಕೇ ಸರ್ವನಾದಾತ್ಮಿಕೇ ಸರ್ವಶಬ್ದಾತ್ಮಿಕೇ ಸರ್ವವಿಶ್ವಾತ್ಮಿಕೇ ಸರ್ವದೀಕ್ಷಾತ್ಮಿಕೇ ಸರ್ವಸರ್ವಾತ್ಮಿಕೇ ಸರ್ವಗೇ ಪಾಹಿ ಮಾಂ ಪಾಹಿ ಮಾಮ್ ||

ಅರ್ಥ ಮತ್ತು ಸ್ಪಷ್ಟೀಕರಣ : ಮಾತಂಗಿಯು ಎಲ್ಲ ತೀರ್ಥಗಳು, ಎಲ್ಲ ಮಂತ್ರ, ತಂತ್ರ, ಯಂತ್ರ, ಪೀಠಗಳು, ಎಲ್ಲ ವಿದ್ಯೆ, ಶಕ್ತಿ, ನಾದ, ಯೋಗ ಮತ್ತು ದೀಕ್ಷೆಗಳ ಮೂಲ ಹಾಗೂ ಆಧಾರವಾಗಿದ್ದಾಳೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವಳು ಎಲ್ಲ ಪ್ರಾಣಿಗಳಲ್ಲಿ ಮತ್ತು ವಿಶ್ವದಲ್ಲಿ ಸರ್ವವ್ಯಾಪಿಯಾಗಿದ್ದಾಳೆ. ಇಡೀ ವಿಶ್ವದಲ್ಲಿ ಶಿವನನ್ನು ಹೊರತುಪಡಿಸಿ ೩ ಕಣ್ಣುಗಳನ್ನು ಹೊಂದಿರುವ ಏಕೈಕ ದೇವತೆ ಆಗಿದ್ದಾಳೆ.

'ಶ್ಯಾಮಲಾ ದಂಡಕವು ಕಾಳಿ ದೇವಿಯ 'ಶ್ಯಾಮಲಾ ರೂಪಕ್ಕೆ ಸಮರ್ಪಿತವಾದ ಒಂದು ಸಣ್ಣ ಆದರೆ ಮಂತ್ರಮುಗ್ಧಗೊಳಿಸುವ ಸ್ತೋತ್ರವಾಗಿದೆ. 'ದಂಡಕ ಎನ್ನುವುದು ಸಂಸ್ಕೃತ ಛಂದಸ್ಸಿನ ಒಂದು ವಿಧವಾಗಿದೆ. ತಾಂತ್ರಿಕ ಮತ್ತು ಪೌರಾಣಿಕ ಉಲ್ಲೇಖಗಳ ಪ್ರಕಾರ ಶ್ಯಾಮಲಾ ಮತ್ತು ರಾಜಮಾತಂಗಿ ಒಂದೇ ಮೂಲ ತತ್ತ್ವದ ಎರಡು ರೂಪಗಳೆಂದು ಪರಿಗಣಿಸಲಾಗಿದೆ. 'ಲಲಿತಾಸಹಸ್ರನಾಮ ಮತ್ತು 'ಶ್ರೀವಿದ್ಯಾದಲ್ಲಿ ಶ್ಯಾಮಲಾದೇವಿಯನ್ನು 'ಲಲಿತಾ ತ್ರಿಪುರ ಸುಂದರಿಯ ಪ್ರಧಾನಮಂತ್ರಿ ಎಂದು ಪರಿಗಣಿಸಲಾಗಿದೆ. ಇದೇ ಶ್ಯಾಮಲಾದೇವಿಯು ದಶಮಹಾವಿದ್ಯೆಗಳಲ್ಲಿ ಪ್ರಕಟವಾದಾಗ, ಅವಳನ್ನು 'ಮಾತಂಗಿ ಅಥವಾ 'ರಾಜಮಾತಂಗಿ ಎನ್ನುತ್ತಾರೆ.

ಮಹಾಕವಿ ಕಾಳಿದಾಸರು ಈ ಸ್ತೋತ್ರವನ್ನು ರಚಿಸಿ ಹಾಡಿದ್ದಾರೆಂದು ನಂಬಲಾಗಿದೆ. ತಮ್ಮ ಪತ್ನಿಯ ಮಾತಿನಂತೆ ಅವರು ದೇವಿಯನ್ನು ಆರಾಧಿಸಲು ದೇವಸ್ಥಾನಕ್ಕೆ ಹೋದಾಗ, ಅಲ್ಲಿ ಅವರಿಗೆ ದೇವಿಯ ದರ್ಶನವಾಯಿತು ಮತ್ತು ಈ ಕಾವ್ಯದ ಜನ್ಮವಾಯಿತು. ಇದರಲ್ಲಿ ಮಹಾಕವಿ ಕಾಳಿದಾಸರು, 'ಯಾರ ಶರೀರವು ಇಂದ್ರನೀಲ ಮಣಿಯಂತೆ ಹೊಳೆಯುತ್ತಿದೆಯೋ, ಯಾರು ಮದದಿಂದ ಸ್ವಲ್ಪ ತೂಗಾಡುತ್ತಿದ್ದಾರೋ, ಯಾರು ಮಧುರವಾಗಿ ಹಾಡುತ್ತಿದ್ದಾರೋ ಮತ್ತು ಯಾರ ಕೈಗಳು ಮಾಣಿಕ್ಯ ಖಚಿತ ವೀಣೆಯ ಮೇಲೆ ಮೃದುವಾಗಿ ನುಡಿಸುತ್ತಿವೆಯೋ ನಾನು ಆ ಮಾತಂಗ ಮುನಿಯ ಪುತ್ರಿಯ (ಶ್ಯಾಮಲಾದೇವಿಯ) ನಿರಂತರ ಚಿಂತನೆ ಮಾಡುತ್ತೇನೆ, ಎನ್ನುತ್ತಿದ್ದಾರೆ.

ಹೇ ಅಖಿಲ ವಿಶ್ವ ಜನನಿ ! ನಿನಗೆ ನನ್ನ ವಂದನೆಗಳು. ನೀನು ೪ ಕೈಗಳನ್ನು ಹೊಂದಿರುವೆ. ನಿನ್ನ ಕೈಗಳಲ್ಲಿ ಕೆಂಪು ಕಬ್ಬಿನ ಬಿಲ್ಲು, ಪಾಶ, ಅಂಕುಶ ಮತ್ತು ಹೂವಿನ ಬಾಣಗಳಿವೆ. ನಿನ್ನ ಹಣೆಯ ಮೇಲೆ ಚಂದ್ರನ ಅಚ್ಚು ಇದ್ದು ಮತ್ತು ನಿನ್ನ ದೇಹವು ಕೇಸರಿಮಿಶ್ರಿತ ಗಂಧದಿಂದ ಕೆಂಪಾಗಿದೆ. ಪಚ್ಚೆ ಮಣಿಯಂತೆ ಕಡು ಹಸಿರು ಬಣ್ಣದ, ದಿವ್ಯ ಆನಂದದಿಂದ ಪ್ರಫುಲ್ಲಳಾಗಿರುವ ಮತ್ತು ಕದಂಬ ವೃಕ್ಷಗಳ ವನದಲ್ಲಿ ವಾಸಿಸುವ ಆ ಮಂಗಳಮಯಿ ತಾಯಿಯು ತನ್ನ ಕಟಾಕ್ಷದಿಂದ ನನ್ನನ್ನು ಹರಸಲಿ. ನೀನು ಭಕ್ತರಿಗೆ ಸಮೃದ್ಧಿಯನ್ನು ನೀಡುತ್ತಿ, ಯೋಗಿಗಳ ಮನಸ್ಸಿನಲ್ಲಿ ವಾಸಿಸುತ್ತಿ ಮತ್ತು ವೇದಗಳ ಮಂತ್ರಗಳಿಗೆ ಶಕ್ತಿ ನೀಡುತ್ತಿ. ಶ್ರೀಕೃಷ್ಣನು ನಿನ್ನ ಸಂಗೀತವನ್ನು ಬಯಸುತ್ತಾನೆ, ಬ್ರಹ್ಮನು ನಿನ್ನನ್ನು ಸ್ತುತಿಸುತ್ತಾನೆ. ಗಂಧರ್ವ-ಕಿನ್ನರರು ವಾದ್ಯಗಳೊಂದಿಗೆ ನಿನ್ನ ಗುಣಗಾನ ಮಾಡುತ್ತಾರೆ. ಹೇ ವಿಶ್ವಜನನಿ ! ನೀನು ಸರ್ವವ್ಯಾಪಿಯಾಗಿರುವೆ. ನೀನೇ ಎಲ್ಲ ತೀರ್ಥ, ನದಿ, ವೇದ, ಮಂತ್ರ, ಯಂತ್ರ, ತಂತ್ರ, ಶಕ್ತಿ ಮತ್ತು ಸಿದ್ಧಾಂತವಾಗಿದ್ದೀಯಾ. ನೀನೇ ಎಲ್ಲ ನಾದ, ಅಕ್ಷರ ಮತ್ತು ಶಬ್ದವಾಗಿದ್ದೀಯಾ. ನೀನೇ ಈ ಇಡೀ ಚರಾಚರ ವಿಶ್ವವಾಗಿದ್ದೀಯಾ. ನನ್ನನ್ನು ರಕ್ಷಿಸು, ರಕ್ಷಿಸು, ರಕ್ಷಿಸು ! ಹೇ ದೇವಿ, ನಿನಗೆ ನನ್ನ ಪುನಃ ಪುನಃ ನಮನಗಳು !

ವಾಣಿಯ ದೃಷ್ಟಿಯಿಂದ ರಾಜಮಾತಂಗಿ ದೇವಿಯ ಉಪಾಸನೆಯ ಮಹತ್ವ

ವಾಣಿ : ಮಾತಂಗಿ 'ವೈಖರಿ ಶಬ್ದದ (ವಾಣಿಯ) ಅಧಿದೇವತೆ ಆಗಿದ್ದಾಳೆ, ಅದಕ್ಕಾಗಿಯೇ ಅವಳನ್ನು 'ವಾಗ್ವಿಲಾಸಿನಿ (ತನ್ನ ಬರವಣಿಗೆ ಅಥವಾ ಮಾತಿನಿಂದ ಇತರರ ಗಮನ ಸೆಳೆಯುವ ಶಕ್ತಿ) ಎಂದು ಪರಿಗಣಿಸಲಾಗಿದೆ. ನಾವು ದೇವಿಯ ರೂಪವನ್ನು ನೋಡಿದರೆ, ದೇವಿಯ ಕೈಯಲ್ಲಿ ನಮಗೆ ಗಿಳಿ ಕಾಣಿಸುತ್ತದೆ. ಗಿಳಿ ವಾಣಿಯ ಸಂಕೇತವಾಗಿದೆ.

ವಾಣಿಯಲ್ಲಿ ೪ ಪ್ರಕಾರಗಳಿವೆ. ನಾವು ಮಾತನಾಡುವುದು ವೈಖರಿ ವಾಣಿ. ವೈಖರಿ ವಾಣಿಯ ಮುಂದಿನ ಹಂತಗಳೆಂದರೆ, ಮಧ್ಯಮಾ ವಾಣಿ, ಪಶ್ಯಂತಿ ವಾಣಿ, ಮತ್ತು ಪರಾ ವಾಣಿ !

೧. ವೈಖರಿ ವಾಣಿ

ವೈಖರಿ ವಾಣಿ, ಅಂದರೆ ಯಾವಾಗ ನಾವು ಬಾಯಿಯಿಂದ ಧ್ವನಿಯನ್ನು ಹೊರಗೆ ಹಾಕುತ್ತೇವೆಯೋ ಆ ವಾಣಿ. ಇದು ವಾಣಿಯ ಅತ್ಯಂತ ಸ್ಥೂಲ ಮತ್ತು ವ್ಯಕ್ತಾವಸ್ಥೆಯಾಗಿದೆ. ಇದು ವಿಶುದ್ಧಚಕ್ರಕ್ಕೆ ಸಂಬಂಧಿಸಿದೆ.

೨. ಮಧ್ಯಮಾ ವಾಣಿ

ವಾಣಿಯ ಮುಂದಿನ ಪ್ರಕಾರ ಎಂದರೆ ಮಧ್ಯಮಾ ವಾಣಿ. ಇದು ಅನಾಹತಚಕ್ರಕ್ಕೆ ಸಂಬಂಧಿಸಿದೆ. ಪ್ರತ್ಯಕ್ಷ ವಾಕ್ಯವನ್ನು ಮಾತನಾಡುವ ಮೊದಲು ನಾವು ಮನಸ್ಸಿನಲ್ಲಿ ಒಂದು ವಾಕ್ಯವನ್ನು ಸಿದ್ಧಪಡಿಸುತ್ತೇವೆ ಅಥವಾ ಯೋಚಿಸುತ್ತೇವೆ, ಅದುವೇ ಈ ಮಧ್ಯಮಾ ವಾಣಿ.

ಪಶ್ಯಂತಿ ವಾಣಿ

ವಾಣಿಯ ಮುಂದಿನ ಹಂತ ಪಶ್ಯಂತಿ ವಾಣಿ ! 'ಪಶ್ಯಂತಿ ಎಂಬ ಪದವು 'ಪಶ್ಯ ಎಂಬ ಧಾತುವಿನಿಂದ ಬಂದಿದೆ. 'ಪಶ್ಯ ಎಂದರೆ ನೋಡುವುದು. ಋಷಿಮುನಿಗಳು ಮತ್ತು ಸಂತರು ದೃಷ್ಟಾರರಾಗಿರುತ್ತಾರೆ. ಕಾಲವನ್ನು ಮೀರಿದ ದೃಷ್ಟಿಯ ಸಾಮರ್ಥ್ಯ ಅವರಿಗಿರುತ್ತದೆ. ಅವರ ವಾಣಿಯೇ ಪಶ್ಯಂತಿ ವಾಣಿ. ಪಶ್ಯಂತಿ ವಾಣಿಯು ಮಣಿಪುರಚಕ್ರಕ್ಕೆ ಸಂಬಂಧಿಸಿದೆ. ಇಲ್ಲಿ ಶಬ್ದಗಳ ಉಚ್ಚಾರಣೆಯಾಗದೇ ಏನಾದರೂ ಹೇಳಲಿಕ್ಕಿದ್ದರೆ ಅದರ ದರ್ಶನವಾಗುತ್ತದೆ.

೪. ಪರಾವಾಣಿ

ವಾಣಿಯ ಅತ್ಯುನ್ನತ ವಿಧವೆಂದರೆ ಪರಾವಾಣಿ ! ಪರಾವಾಣಿಯಲ್ಲಿ ನಾಮಜಪ ಎಂದರೆ ನಾಮದೊಂದಿಗೆ ಅದ್ವೈತ ! ಇಲ್ಲಿ ದೇವತೆಯ ನಾಮ ಮತ್ತು ನಾಮ ಜಪಿಸುವವನು ಎಂಬ ೨ ಬೇರೆ ಬೇರೆ ಪರಿಕಲ್ಪನೆಗಳಿರುವುದಿಲ್ಲ, ಇಲ್ಲಿ ನಾಮ ಮತ್ತು ನಾಮ ಜಪಿಸುವವನು ಒಂದೇ ಆಗಿರುತ್ತಾರೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada