Dailyhunt Logo
  • Light mode
    Follow system
    Dark mode
    • Play Story
    • App Story
ಮಹಮ್ಮದ್ ಪೈಗಂಬರರನ್ನು ಅವಮಾನಿಸಿದ ಪ್ರಕರಣದಲ್ಲಿ ಇರಾನ್ ಯುವತಿಗೆ ಮರಣದಂಡನೆ ಶಿಕ್ಷೆ!

ಮಹಮ್ಮದ್ ಪೈಗಂಬರರನ್ನು ಅವಮಾನಿಸಿದ ಪ್ರಕರಣದಲ್ಲಿ ಇರಾನ್ ಯುವತಿಗೆ ಮರಣದಂಡನೆ ಶಿಕ್ಷೆ!

  • ಮಾನವ ಹಕ್ಕು ಸಂಘಟನೆಗಳಿಂದ ವಿರೋಧ ವ್ಯಕ್ತ
  • ಯುವತಿಯಿಂದ ಆಡಿಯೋ ಸಂದೇಶ ಪ್ರಸಾರ

ತೆಹ್ರಾನ್ (ಇರಾನ್) - ಸಾಮಾಜಿಕ ಜಾಲತಾಣಗಳಲ್ಲಿನ ಕಥಿತ ಬರಹವೊಂದರ ಮೂಲಕ ಧರ್ಮನಿಂದನೆ ಮಾಡಿದ ಆರೋಪದಡಿ ಇರಾನ್ ನ್ಯಾಯಾಲಯವು ೨೩ ವರ್ಷದ ನಜ್ಮೆ ಅಮೀನಿ ಎಂಬಾಕೆಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಮಾನವ ಹಕ್ಕುಗಳ ಸಂಘಟನೆಗಳು ಈ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವಾಗಲೇ, ನಜ್ಮೆ ಕಾರಾಗೃಹದಿಂದ ಧ್ವನಿಮುದ್ರಿತ ಸಂದೇಶವೊಂದನ್ನು ಪ್ರಸಾರ ಮಾಡಿದ್ದಾಳೆ.

ಧ್ವನಿಮುದ್ರಿತ ಸಂದೇಶದಲ್ಲಿ ಆಕೆ ಹೇಳಿದ್ದೇನು?

೧. ಮಶಹದ್ ನ 'ಅಕೌಂಟಿಂಗ್' ವಿದ್ಯಾರ್ಥಿನಿಯಾಗಿರುವ ನಜ್ಮೆ ಕಾರಾಗೃಹದಿಂದ ಕಳುಹಿಸಿದ ಧ್ವನಿಮುದ್ರಿತ ಸಂದೇಶದಲ್ಲಿ, 'ಸೆಪ್ಟೆಂಬರ್ ೧೬, ೨೦೨೬ ರಂದು ನ್ಯಾಯಾಲಯವು ನನಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಈ ಶಿಕ್ಷೆಯು ಅಂತಿಮವಲ್ಲ ಮತ್ತು ಇದರ ವಿರುದ್ಧ ಇರಾನ್‌ ನ ಸರ್ವೋಚ್ಚ ನ್ಯಾಯಾಲಯದಲ್ಲಿ(ಸುಪ್ರೀಂ ಕೋರ್ಟನಲ್ಲಿ) ಮೇಲ್ಮನವಿ ಸಲ್ಲಿಸಬಹುದು' ಎಂದು ಹೇಳಿದ್ದಾಳೆ.

೨. ಆಕೆ ಮುಂದೆ ಹೇಳುತ್ತಾ, ''ನನ್ನ ಹೆಸರನ್ನು ನೆನಪಿಟ್ಟುಕೊಳ್ಳಿ. ಬಹುಶಃ ನಾನು ಮತ್ತೆ ಮಾತನಾಡಲು ಸಾಧ್ಯವಾಗದಿರಬಹುದು; ಆದರೆ ನಾನು ಜೀವಂತವಾಗಿರುವಷ್ಟು ಕಾಲ, 'ಗಲ್ಲಿಗೇರುವ ಮೊದಲು ನಾನು ನನ್ನ ಸಮೃದ್ಧ ಮತ್ತು ಸ್ವತಂತ್ರ ಇರಾನ್ ಅನ್ನು ನೋಡಬೇಕು ಎಂಬುದೊಂದೇ ನನ್ನ ಆಸೆಯಾಗಿದೆ'' ಎಂದಿದ್ದಾಳೆ.

೩. ಕಳೆದ ತಿಂಗಳು ಪ್ರಸಾರ ಮಾಡಿದ ಆಡಿಯೋ ಸಂದೇಶದಲ್ಲಿ ನಜ್ಮೆ ಅಂತರರಾಷ್ಟ್ರೀಯ ಹಸ್ತಕ್ಷೇಪಕ್ಕೆ ಕರೆ ನೀಡಿದ್ದಳು. ಆಕೆ ವಿಶ್ವಸಂಸ್ಥೆ, ನ್ಯಾಯವಾದಿಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳಿಗೆ ತನ್ನ ಪ್ರಕರಣದ ತನಿಖೆ ನಡೆಸುವಂತೆ ವಿನಂತಿಸಿದ್ದಳು. 'ನನ್ನನ್ನು ನಾನು ನಾಯಕಿಯನ್ನಾಗಿ ಬಿಂಬಿಸಲು ಬಯಸುವುದಿಲ್ಲ. 'ನೀವು ನನ್ನ ಧ್ವನಿಯಾಗಿ', ಎಂಬುದೊಂದೇ ನಾನು ಬಯಸುತ್ತೇನೆ', ಎಂದು ಆಕೆ ಹೇಳಿದ್ದಾಳೆ.

ಏನಿದು ಪ್ರಕರಣ?

ಇರಾನ್‌ ನ ಉಗ್ರಗಾಮಿ ಆಡಳಿತ ವಿರುದ್ಧದ ಪ್ರತಿಭಟನೆಯ ವೇಳೆ ಜನವರಿ ೩೧. ೨೦೨೬ ರಂದು ಭದ್ರತಾ ಪಡೆಗಳು ನಜ್ಮೆಯನ್ನು ಬಂಧಿಸಿದ್ದವು. 'ಹ್ಯೂಮನ್ ರೈಟ್ಸ್ ಆಕ್ಟಿವಿಸ್ಟ್ಸ್ ನ್ಯೂಸ್ ಏಜೆನ್ಸಿ'ಯ ವರದಿಯ ಪ್ರಕಾರ, ಈ ಅವಧಿಯಲ್ಲಿ ಕನಿಷ್ಠ ೭,೦೦೦ ಜನರು ಕೊಲ್ಲಲಾಯಿತು, ಮತ್ತು ೫೦,೦೦೦ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.

ಆಗಸ್ಟ್ ೨೦೨೬ ರಲ್ಲಿ ನಜ್ಮೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆಕೆಯ ಮೇಲೆ ಹಲವು ಆರೋಪಗಳನ್ನು ಹೊರಿಸಲಾಗಿತ್ತು. 'ಮೊಹಾರೆಬೆಹ್' (ದೇವರ ವಿರುದ್ಧದ ಶತ್ರುತ್ವ), 'ಸಬ್-ಅಲ್-ನಬಿ' (ಮಹಮ್ಮದ್ ಪೈಗಂಬರರ ಅವಮಾನ), ಶತ್ರು ದೇಶಕ್ಕೆ (ಇಸ್ರೇಲ್) ಸಹಕಾರ, ಸರ್ವೋಚ್ಚ ನಾಯಕನ ಅವಮಾನ ಮತ್ತು ಭದ್ರತಾ ಹಾಗೂ ಸರಕಾರಿ ನೌಕರರೊಂದಿಗೆ ಸಂಘರ್ಷ ಇತ್ಯಾದಿ ಆರೋಪಗಳನ್ನು ಮಾಡಲಾಗಿತ್ತು.

ಇರಾನಿ ಪತ್ರಿಕೆ 'ಖೊರಾಸಾನ್' ಸ್ಪಷ್ಟಪಡಿಸಿದಂತೆ, ನ್ಯಾಯಾಲಯದಲ್ಲಿ ಆಕೆ ತನ್ನ ಸ್ನೇಹಿತರೊಂದಿಗೆ 'ಸೈಕೆಡೆಲಿಕ್ ಮಶ್ರೂಮ್ಸ್' (ಭ್ರಮೆ ಉಂಟುಮಾಡುವ ಅಣಬೆಗಳು) ಸೇವಿಸಿದ ನಂತರ ಭ್ರಮೆಯ ಸ್ಥಿತಿಯಲ್ಲಿ ಆ ಹೇಳಿಕೆಗಳನ್ನು ನೀಡಿರುವುದಾಗಿ ಹೇಳಿದ್ದಳು. ಆಕೆಯ ನ್ಯಾಯವಾದಿಗಳು ಆ ಹೇಳಿಕೆಗಳು ಕೇವಲ 'ನಾಲಿಗೆ ಜಾರಿದ ತಪ್ಪಿನಿಂದಾಗಿದೆ' ಎಂದು ವಾದಿಸಿದರು.

ನ್ಯಾಯಾಧೀಶರು ಈ ವಾದವನ್ನು ತಿರಸ್ಕರಿಸಿ, 'ಅದೇ ಭ್ರಮೆಯ ಸ್ಥಿತಿಯಲ್ಲಿದ್ದಾಗ ಇತರ ವ್ಯಕ್ತಿಗಳನ್ನು ಅಥವಾ ಅಮೆರಿಕ ಮತ್ತು ಇಸ್ರೇಲ್‌ ನಂತಹ ಆಡಳಿತದ ವಿರೋಧಿಗಳನ್ನು ನೀನು ಅವಮಾನಿಸಲಿಲ್ಲ ಯಾಕೆ?' ಎಂದು ಪ್ರಶ್ನಿಸಿದರು.

ಮಾನವ ಹಕ್ಕುಗಳ ಸಂಘಟನೆಗಳ ನಿಲುವು!

'ಇರಾನ್ ಹ್ಯೂಮನ್ ರೈಟ್ಸ್ ಮಾನಿಟರ್' ಮಾಹಿತಿಯ ಪ್ರಕಾರ, ಬಂಧನದ ಸಮಯದಲ್ಲಿ ನಜ್ಮೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು. ನಂತರ ಆಕೆಯನ್ನು ಮಶಹದ್ ನಗರದ ವಕೀಲಾಬಾದ್ ಕಾರಾಗೃಹದಲ್ಲಿ ಮೂರು ತಿಂಗಳು ಏಕಾಂತ ಬಂಧನದಲ್ಲಿಡಲಾಗಿತ್ತು. ಬಂಧನ ಮತ್ತು ಕಾನೂನು ಪ್ರಕ್ರಿಯೆಯ ಸಂಪೂರ್ಣ ಅವಧಿಯಲ್ಲಿ ಆಕೆಗೆ ತನ್ನಿಷ್ಟದ ನ್ಯಾಯವಾದಿಗಳನ್ನು ಪಡೆಯದಂತೆ ತಡೆಯಲಾಯಿತು. ಅಲ್ಲದೆ ಬಲವಂತದ ಒಪ್ಪಿಗೆ ಪಡೆಯಲು ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗಿರಬಹುದು. ಭಯ ಹುಟ್ಟುಹಾಕಲು ಮತ್ತು ಭಿನ್ನಾಭಿಪ್ರಾಯದ ಧ್ವನಿಯನ್ನು ಹತೋಟಿಯಲ್ಲಿಡಲು ಇರಾನ್ ಆಡಳಿತವು ಮರಣದಂಡನೆಯ ಬಳಕೆಯನ್ನು ಹೆಚ್ಚಿಸುತ್ತಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಎಚ್ಚರಿಸಿವೆ. ಕಳೆದ ಒಂದು ವರ್ಷದಲ್ಲಿ ಇರಾನ್ ನಲ್ಲಿ ೬೦೦ ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada