- ಕೇರಳ ಉಚ್ಚ ನ್ಯಾಯಾಲಯ(ಹೈಕೋರ್ಟ್)ನ ಮಹತ್ವದ ಅವಲೋಕನ
- 'ಮುಸ್ಲಿಂ ಪರ್ಸನಲ್ ಲಾ'ಗಿಂತ 'ಪೋಕ್ಸೊ' ಕಾಯ್ದೆಯ ನಿಬಂಧನೆಗಳೇ ಮಹತ್ವದ್ದು !
ಕೇರಳಮ್ - ಭಾರತದಲ್ಲಿ ವಿವಾಹದ ಕಾನೂನುಬದ್ಧ ವಯಸ್ಸು ಮತ್ತು 'ಪೋಕ್ಸೊ' ಕಾಯ್ದೆಯ ಅಡಿಯಲ್ಲಿ ಬರುವ ಮಗುವಿನ ವಯಸ್ಸಿನ ನಡುವೆ ಮಹತ್ವದ ಕಾನೂನು ವ್ಯತ್ಯಾಸವಿದೆ.
ಪೋಕ್ಸೊ ಕಾಯ್ದೆಯ ಪ್ರಕಾರ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯನ್ನು ಅಪ್ರಾಪ್ತರೆಂದೇ ಪರಿಗಣಿಸಲಾಗುತ್ತದೆ. ಆದ್ದರಿಂದ ಹುಡುಗಿಯ ವಯಸ್ಸು ೧೮ ವರ್ಷಕ್ಕಿಂತ ಕಡಿಮೆಯಿದ್ದರೆ, ಆಕೆಯು ಆರೋಪಿಯೊಂದಿಗೆ ಕೇವಲ ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ, ಆ ವ್ಯಕ್ತಿ ಯಾವುದೇ ಧರ್ಮದವನಾಗಿದ್ದರೂ, ಲೈಂಗಿಕ ಅಪರಾಧಗಳ ಆರೋಪದಿಂದ ಆತನನ್ನು 'ಪೋಕ್ಸೊ' ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯ(ಹೈಕೋರ್ಟ್) ಒಂದು ಪ್ರಕರಣದಲ್ಲಿ ಮಹತ್ವದ ಅವಲೋಕನ ನೀಡಿದೆ. ನ್ಯಾಯಮೂರ್ತಿ ಜೋಬಿನ್ ಸೆಬಾಸ್ಟಿಯನ್ ಅವರು ಆರೋಪಿಯ ಅರ್ಜಿಯನ್ನು ತಿರಸ್ಕರಿಸಿದರು.
ಆರೋಪಿಯ ವಕೀಲರ ವಾದ
ತನ್ನ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಆರೋಪಿ ಉಚ್ಚ ನ್ಯಾಯಾಲಯ(ಹೈಕೋರ್ಟ್)ಗೆ ಮನವಿ ಮಾಡಿದ್ದನು. ಅಪ್ರಾಪ್ತ ಹುಡುಗಿ ತನ್ನ ಪತ್ನಿಯಾಗಿದ್ದು, ವೈವಾಹಿಕ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಆತನ ವಿರುದ್ಧ 'ಪೋಕ್ಸೊ' ಅಡಿಯಲ್ಲಿ ಕ್ರಮ ಕೈಗೊಳ್ಳಬಾರದು ಎಂದು ಆತ ವಾದಿಸಿದ್ದನು.
'ಮುಸ್ಲಿಂ ಪರ್ಸನಲ್ ಲಾ' ವಾದವೂ ವಿಫಲವಾಯಿತು !
'ಪೋಕ್ಸೊ' ಕಾಯ್ದೆಯ ಕಲಂ '೪೨-ಎ' ಪ್ರಕಾರ, ಈ ಕಾಯ್ದೆಯ ಪ್ರಭಾವವು ಇತರ ಕಾನೂನುಗಳಿಗಿಂತ ಹೆಚ್ಚಾಗಿರುತ್ತದೆ ಮತ್ತು ಯಾವುದೇ ಅಸಂಗತತೆ ಉಂಟಾದಾಗ 'ಪೋಕ್ಸೊ' ನಿಬಂಧನೆಗಳಿಗೆ ಅಧಿಭಾವಿ ಪ್ರಭಾವ (ಓವರ್‌ರೈಡಿಂಗ್ ಎಫೆಕ್ಟ್) ದೊರೆಯುತ್ತದೆ. ಇದೇ ಆಧಾರದ ಮೇಲೆ ಉಚ್ಚ ನ್ಯಾಯಾಲಯ(ಹೈಕೋರ್ಟ್) ಸ್ಪಷ್ಟಪಡಿಸಿದ್ದು, ಪೋಕ್ಸೊ ಅಡಿಯಲ್ಲಿ ಯಾರನ್ನಾದರೂ ಅಪ್ರಾಪ್ತರೆಂದು ಪರಿಗಣಿಸಿದರೆ, 'ಮುಸ್ಲಿಂ ಪರ್ಸನಲ್ ಲಾ' ಪ್ರಕಾರ ವಿವಾಹವಾಗಿದ್ದರೂ ಸಹ ಆ ರಕ್ಷಣೆ ಕೊನೆಗೊಳ್ಳಲು ಸಾಧ್ಯವಿಲ್ಲ.

