ಮುಟ್ಟಿನ ಕಾಲಾವಧಿಯಲ್ಲಿ ಅನೇಕ ಮಹಿಳೆಯರಿಗೆ ವಿಪರೀತ ಸುಸ್ತು, ಮೈಯಲ್ಲಿ ಶಕ್ತಿ ಇಲ್ಲದಂತೆ ಅನಿಸುವುದು, ತಲೆಸುತ್ತು, ತುಂಬಾ ನಿದ್ದೆ ಬರುವುದು ಅಥವಾ ದಿನನಿತ್ಯದ ಕೆಲಸಗಳನ್ನು ಮಾಡಲು ಸಹ ಉತ್ಸಾಹ ಇಲ್ಲದಿರುವುದು ಕಂಡುಬರುತ್ತದೆ. ಇದನ್ನು ಕೇವಲ ಮುಟ್ಟಿನ ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸಲಾಗುತ್ತದೆ, ಆದರೆ ಆಯುರ್ವೇದದ ಪ್ರಕಾರ ಇದು ದೇಹವು ನೀಡುವ ಒಂದು ಪ್ರಮುಖ ಸಂಕೇತವಾಗಿದೆ.
ಮುಟ್ಟು ನೈಸರ್ಗಿಕ ಶುದ್ಧೀಕರಣದ ಪ್ರಕ್ರಿಯೆ ಆಗಿದ್ದರೂ, ಮುಟ್ಟಿನ ಪ್ರಕ್ರಿಯೆಯಲ್ಲಿ ದೇಹದಿಂದ ರಕ್ತ, ಉಷ್ಣತೆ ಮತ್ತು ಶಕ್ತಿ ವ್ಯಯವಾಗುತ್ತದೆ. ದೇಹವು ಮೊದಲೇ ದುರ್ಬಲವಾಗಿದ್ದರೆ ಅಥವಾ ಆಹಾರದ ಕೊರತೆಯಿದ್ದರೆ ಮತ್ತು ಮಾನಸಿಕ ಒತ್ತಡವಿದ್ದರೆ ಈ ಕಾಲದಲ್ಲಿ ಆಯಾಸ ಹೆಚ್ಚಿಗೆ ಬರುತ್ತದೆ.
ಲೇಖನ ೫
ಈ ಹಿಂದಿನ ಲೇಖನ -೪ ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/177378.html
೧. ಮಾಸಿಕ ಸರದಿಯ ಕಾಲಾವಧಿಯಲ್ಲಿ ಆಯುರ್ವೇದದ ಪ್ರಕಾರ ಹೆಚ್ಚಾಗುತ್ತಿರುವ ಆಯಾಸದ ಕಾರಣಗಳು
ಆಯುರ್ವೇದದ ಪ್ರಕಾರ, ಈ ಸಮಯದಲ್ಲಿ ಕಂಡುಬರುವ ನಿಶ್ಯಕ್ತಿಗೆ ಮುಖ್ಯವಾಗಿ ವಾತದೋಷ ಹೆಚ್ಚಾಗಿರುವುದೇ ಕಾರಣವಾಗಿ ಇರುತ್ತದೆ. ಅಪಾನ ವಾಯುವಿನ ಅಸಮತೋಲನದಿಂದ ದೇಹದಲ್ಲಿ ಯೋಗ್ಯ ರೀತಿಯಲ್ಲಿ ಶಕ್ತಿಯ ವಿತರಣೆ ಆಗುವುದಿಲ್ಲ. ಇದರಿಂದ ಸೊಂಟ ನೋವು, ಕಾಲುಗಳ ನೋವು ಮತ್ತು ಆಯಾಸ ಉಂಟಾಗುತ್ತದೆ. ಕೆಲವು ಸ್ತ್ರೀಯರಲ್ಲಿ ಪಿತ್ತ ದೋಷ ಹೆಚ್ಚಾದಾಗ ಅತಿಯಾದ ರಕ್ತಸ್ರಾವವಾಗಿ ರಕ್ತಧಾತು (ಹಿಮೋಗ್ಲೋಬಿನ್) ಕ್ಷೀಣಿಸುತ್ತದೆ, ಇದು ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಕಫ ದೋಷ ಪ್ರಬಲವಾಗಿದ್ದರೆ ದೇಹದಲ್ಲಿ ಜಡತ್ವ, ಆಲಸ್ಯ ಮತ್ತು ಅತಿಯಾದ ನಿದ್ರೆ ಕಂಡುಬರುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯಲ್ಲಿ ನಿಶ್ಯಕ್ತಿಯ ಕಾರಣಗಳು ಬೇರೆ ಬೇರೆ ಇರಬಹುದು.
ವೈದ್ಯ (ಸೌ.) ಸಾರಿಕಾ ನೀಲೇಶ ಲೊಂಡ೨. ಆಯುರ್ವೇದದ ಉಪಾಯಗಳು
ಚಿಕಿತ್ಸೆಯ ಬಗ್ಗೆ ವಿಚಾರ ಮಾಡುವಾಗ 'ಕೇವಲ ಆಯಾಸವನ್ನು ಕಡಿಮೆ ಮಾಡುವುದರ ಜೊತೆಗೆ, ಶರೀರದ ಶಕ್ತಿ, ಜೀರ್ಣಶಕ್ತಿ ಮತ್ತು ರಕ್ತಧಾತುವನ್ನು ವೃದ್ಧಿಸುವುದು ಇವುಗಳ ಒಟ್ಟು ವಿಚಾರ ಆಗುವುದು ಆವಶ್ಯಕವಾಗಿರುತ್ತದೆ. ಆಯುರ್ವೇದದಲ್ಲಿ 'ಖರ್ಜೂರಾದಿ ಮಂಥ', 'ದಾಡಿಮಾವಲೇಹ', ಮತ್ತು 'ಶತಾವರಿ ಕಲ್ಪ'ದಂತಹ ಚಿಕಿತ್ಸೆಗಳು ಹಾಗೂ ಆಯುರ್ವೇದದಲ್ಲಿ ಮುಟ್ಟಿನ ಸಮಯದಲ್ಲಿ ಅತಿಯಾದ ಉಷ್ಣ, ಅತಿಯಾದ ತಂಪು, ಖಾಲಿ ಹೊಟ್ಟೆ ಇರುವುದು ಅಥವಾ ಜೀರ್ಣಿಸಿಕೊಳ್ಳಲು ಕಷ್ಟವಾದ ಘನ ಆಹಾರವನ್ನು ಸೇವಿಸಬಾರದೆಂದು ಸಲಹೆ ನೀಡಲಾಗುತ್ತದೆ. ಯೋಗ್ಯ ಸಮಯದಲ್ಲಿ ಪೌಷ್ಠಿಕ ಮತ್ತು ಸುಲಭವಾಗಿ ಜೀರ್ಣ ಆಗುವ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ನಿಶ್ಯಕ್ತಿ ಕಡಿಮೆಯಾಗಲು ಸಹಾಯ ಮಾಡುತ್ತದೆ. ವಿಶ್ರಾಂತಿ, ಆವಶ್ಯಕ ನಿದ್ರೆ ಮತ್ತು ಮಾನಸಿಕ ಶಾಂತಿ ಈ ಅಂಶಗಳಿಗೂ ಅಷ್ಟೇ ಮಹತ್ವವಿದೆ.
೩. ಮನೆಮದ್ದುಗಳು ಮತ್ತು ಆಯುರ್ವೇದದ ಸಲಹೆಗಳು
ಮನೆಮದ್ದು ಉಪಾಯಗಳಲ್ಲಿ ಉಗುರುಬೆಚ್ಚಗಿನ ಹಾಲು, ತುಪ್ಪ, ಸಾತ್ತ್ವಿಕ ಆಹಾರ, ಸೂಪ್ ಅಥವಾ ತಿಳಿ ಸಾರು ಉಪಯುಕ್ತವಾಗಿದೆ. ಮುಟ್ಟಿನ ಸಮಯದಲ್ಲಿ ಬಲವಂತವಾಗಿ ಕೆಲಸ ಮಾಡುವುದು, ಕಠಿಣ ವ್ಯಾಯಾಮ ಅಥವಾ ಸತತ ಉಪವಾಸ ಮಾಡುವುದನ್ನು ತಪ್ಪಿಸಬೇಕು. ಸತತವಾದ ನಿಶ್ಯಕ್ತಿ, ತಲೆಸುತ್ತು, ಉಸಿರಾಟದ ತೊಂದರೆ ಅಥವಾ ಮುಟ್ಟು ಮುಗಿದ ನಂತರವೂ ಸುಸ್ತು ಕಡಿಮೆಯಾಗದಿದ್ದರೆ, ಅದು ರಕ್ತ ಕಡಿಮೆ (ಹಿಮೋಗ್ಲೋಬಿನ್) ಇರುವುದರ ಅಥವಾ ಇತರ ಯಾವುದಾದರು ರೋಗದ ಲಕ್ಷಣವಾಗಿರಬಹುದು. ಅಂತಹ ಸಂದರ್ಭದಲ್ಲಿ ಕೇವಲ ಮನೆಮದ್ದಿನ ಉಪಾಯ ಮಾಡುವುದಕ್ಕಿಂತ ತಜ್ಞ ವೈದ್ಯರ ಸಲಹೆ ಪಡೆಯುವುದು ಆವಶ್ಯಕ.
ಒಟ್ಟಾರೆ ಹೇಳುವುದಾದರೆ, ಮುಟ್ಟಿನ ಸಮಯದಲ್ಲಿ ಕಂಡು ಬರುವ ಸುಸ್ತು ಅಥವಾ ದೌರ್ಬಲ್ಯವು ಸಾಮಾನ್ಯವೆನಿಸಿದರೂ, ನಿರ್ಲಕ್ಷಿಸದೆ ಅದರ ಯೋಗ್ಯ ಉಪಾಯ ಮಾಡುವುದು ಆವಶ್ಯಕ ಆಗಿದೆ. ಆಯುರ್ವೇದವು ದೇಹದ ಈ ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತದೆ ಮತ್ತು ಸರಿಯಾದ ಆಹಾರ ಕ್ರಮ, ಜೀವನಶೈಲಿ ಹಾಗೂ ಅಗತ್ಯವಿದ್ದಲ್ಲಿ ಸೂಕ್ತ ಚಿಕಿತ್ಸೆಗಳ ಮೂಲಕ ಈ ಸಮಯದಲ್ಲಿ ಮಹಿಳೆಯರು ಹೆಚ್ಚು ಸಬಲರಾಗಿ ಮತ್ತು ಸಮತೋಲನದಿಂದ ಇರಲು ಸಹಾಯ ಮಾಡುತ್ತದೆ.
- ವೈದ್ಯೆ (ಸೌ.) ಸಾರಿಕಾ ನೀಲೇಶ ಲೋಂಢೆ, ನಿರ್ವಿಕಾರ ಆಯುರ್ವೇದ ಹಾಸ್ಪಿಟಲ್, ಭೋಸರಿ, ಪುಣೆ.

