'ಚಹಾ ಕುಡಿಯಲು ನಿಂತ ಅರ್ಧ ಗಂಟೆಯೇ ನಮ್ಮ ಜೀವ ಉಳಿಸಿತು' ಎಂದ ಪ್ರವಾಸಿಗರು
ಬೆಂಗಳೂರು: ನೇಪಾಳದಲ್ಲಿ ಸಂಭವಿಸಿದ ಮೇಘಸ್ಫೋಟ ಹಾಗೂ ಹಠಾತ್ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕದ 54 ಪ್ರವಾಸಿಗರು ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವಾಸಿಗರು ಬಂದಿಳಿಯುತ್ತಿದ್ದಂತೆ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಶಿವಮೊಗ್ಗ, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿಗರು ಆಗಸ್ಟ್ 23ರಂದು ನೇಪಾಳ ಪ್ರವಾಸ ಕೈಗೊಂಡಿದ್ದರು. ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿ ಸಮೀಪ ಮೇಘಸ್ಫೋಟ ಸಂಭವಿಸಿ ಭೋಟೆ ಕೋಶಿ ನದಿಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿ ಭಾರಿ ಪ್ರವಾಹ ಉಂಟಾಗಿತ್ತು. ಪ್ರವಾಹದ ರಭಸಕ್ಕೆ ರಸ್ತೆಗಳು ಹಾಗೂ ಸೇತುವೆಗಳು ಹಾನಿಗೊಳಗಾಗಿದ್ದರಿಂದ ಸಂಪರ್ಕ ವ್ಯವಸ್ಥೆಯೂ ಅಸ್ತವ್ಯಸ್ತವಾಗಿತ್ತು.
ಈ ಸಂದರ್ಭದಲ್ಲಿ ಕರ್ನಾಟಕದ ಪ್ರವಾಸಿಗರು ಅಪಾಯದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ಕುಟುಂಬಸ್ಥರ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿ, ರಕ್ಷಣಾ ಕಾರ್ಯಾಚರಣೆ ಮೂಲಕ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಬಳಿಕ ಉತ್ತರ ಪ್ರದೇಶದ ಗೋರಖ್‌ಪುರ ಮಾರ್ಗವಾಗಿ ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲಾಯಿತು.
ಕೆಲವೇ ನಿಮಿಷಗಳ ಅಂತರದಲ್ಲಿ ತಪ್ಪಿದ ಅಪಾಯ
ನೇಪಾಳದಲ್ಲಿ ತಾವು ಎದುರಿಸಿದ ಆತಂಕಕಾರಿ ಅನುಭವವನ್ನು ಪ್ರವಾಸಿಗರು ಹಂಚಿಕೊಂಡಿದ್ದು, ಚಹಾ ಕುಡಿಯಲು ವಾಹನವನ್ನು ಸುಮಾರು ಅರ್ಧ ಗಂಟೆ ನಿಲ್ಲಿಸಿದ್ದೇ ತಮ್ಮ ಜೀವ ಉಳಿಸಿತು ಎಂದು ತಿಳಿಸಿದ್ದಾರೆ. 'ನಾವು ಚಹಾ ಕುಡಿಯಲು ವಾಹನ ನಿಲ್ಲಿಸದೇ ಇದ್ದಿದ್ದರೆ ಅದೇ ಸಮಯದಲ್ಲಿ ಪ್ರವಾಹ ಬಂದ ರಸ್ತೆಯಲ್ಲಿರುತ್ತಿದ್ದೆವು. ಚಹಾ ವಿರಾಮದ ಬಳಿಕ ಪ್ರಯಾಣ ಮುಂದುವರಿಸುವಷ್ಟರಲ್ಲಿ ಆ ರಸ್ತೆಗೆ ಪ್ರವಾಹದ ನೀರು ನುಗ್ಗಿ, ರಸ್ತೆ ಕೊಚ್ಚಿಹೋಗಿತ್ತು. ಕೆಲವೇ ನಿಮಿಷಗಳ ಅಂತರದಲ್ಲಿ ಭಾರಿ ಅಪಾಯದಿಂದ ಪಾರಾಗಿದ್ದೇವೆ' ಎಂದು ಪ್ರವಾಸಿಗರು ಹೇಳಿದ್ದಾರೆ. ಜೀವ ಕೈಯಲ್ಲಿ ಹಿಡಿದು ಸುರಕ್ಷಿತ ಸ್ಥಳಕ್ಕೆ ತಲುಪಬೇಕಾಯಿತು. ದೇವರ ಕೃಪೆಯಿಂದ ಎಲ್ಲರೂ ಸುರಕ್ಷಿತವಾಗಿ ಮರಳಿದ್ದೇವೆ. ಈ ಅನುಭವ ನಮಗೆ ಪುನರ್ಜನ್ಮದಂತಾಗಿದೆ ಎಂದು ಪ್ರವಾಸಿಗರು ತಿಳಿಸಿದ್ದಾರೆ.

