'ಕರುಪ್ಪು' ಎಂಬ ತಮಿಳು ಚಲನಚಿತ್ರವು ಚಿತ್ರಮಂದಿರ ಮತ್ತು 'ಒಟಿಟಿ ಪ್ಲಾಟ್ ಫಾರ್ಮ್'ನಲ್ಲಿ ಮೇ ತಿಂಗಳಿನಲ್ಲಿ ಬಿಡುಗಡೆ ಆಗಬೇಕಿತ್ತು. ಅದಕ್ಕೆ 'ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್' ಮಾನ್ಯತೆ ನೀಡಿತ್ತು. ಈ ಚಲನಚಿತ್ರದ ವಿರುದ್ಧ ಆರ್.ಎಸ್.
ತಮಿಳ್ವೇಂದನ್ ಇವರು ತಮಿಳುನಾಡು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು ಮತ್ತು ಚಲನಚಿತ್ರದ ನಿರ್ಮಾಪಕ, ನಿರ್ದೇಶಕರೊಂದಿಗೆ ತಮಿಳುನಾಡು ರಾಜ್ಯದ ಕಾರ್ಯದರ್ಶಿ, ಗೃಹ ಇಲಾಖೆಯ ಕಾರ್ಯದರ್ಶಿ ಹಾಗೂ ಇತರ ಆಡಳಿತಾತ್ಮಕ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿದರು. 'ಈ ಚಲನಚಿತ್ರದಲ್ಲಿ ನ್ಯಾಯವ್ಯವಸ್ಥೆಯನ್ನು ಭ್ರಷ್ಟವನ್ನಾಗಿ ತೋರಿಸಲಾಗಿದೆ. ಇದರ ಪರಿಣಾಮದಿಂದ ನ್ಯಾಯಾಲಯದ ಪ್ರತಿಷ್ಠೆ ಮಲಿನಗೊಳ್ಳುತ್ತದೆ ಮತ್ತು ಜನರು ನ್ಯಾಯಾಧೀಶರು ಹಾಗೂ ನ್ಯಾಯಾಧೀಶರನ್ನು ನೋಡಿ ಅಪಹಾಸ್ಯ ಮಾಡಬಹುದು. ಆದ್ದರಿಂದ ಈ ಚಲನಚಿತ್ರದ ಪ್ರಸಾರವನ್ನು ತಡೆಯಬೇಕು', ಎಂದು ಈ ಅರ್ಜಿಯಲ್ಲಿ ವಿನಂತಿಸಲಾಗಿತ್ತು.
೧. ಕಲೆಯ ಅಭಿವ್ಯಕ್ತಿಯ ವಿಷಯದಲ್ಲಿ ತಮಿಳುನಾಡು ಉಚ್ಚ ನ್ಯಾಯಾಲಯದ ವ್ಯಾಪಕ ದೃಷ್ಟಿಕೋನ
ಈ ಅರ್ಜಿಯು ತಮಿಳುನಾಡು ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಅದರಲ್ಲಿ ಒಬ್ಬ ನ್ಯಾಯಮೂರ್ತಿಗಳು, 'ಈ ಚಲನಚಿತ್ರದಲ್ಲಿ ಎಲ್ಲವನ್ನೂ ಅತಿಶಯೋಕ್ತಿಯಾಗಿ ತೋರಿಸಿರುವುದು ನಿಜ; ಆದರೆ ಎಲ್ಲಾ ತಮಿಳು ಚಲನಚಿತ್ರಗಳಲ್ಲೂ ಅತಿಶಯೋಕ್ತಿ ಇದ್ದೇ ಇರುತ್ತದೆ. ಅದನ್ನು ಕಲೆಯ ಅಭಿವ್ಯಕ್ತಿ ಅಥವಾ ಹೆಚ್ಚಿನ ಸ್ವಾತಂತ್ರ್ಯದ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ' ಎಂದು ಹೇಳಿದರು. ಈ ಪ್ರಕರಣದ ತೀರ್ಪನ್ನು ನೀಡುವಾಗ ತಮಿಳುನಾಡು ಉಚ್ಚ ನ್ಯಾಯಾಲಯವು, 'ಕೇವಲ ಚಿತ್ರದಲ್ಲಿ ತೋರಿಸಿರುವ ವಿಷಯ ನಮಗೆ ಇಷ್ಟವಾಗುವುದಿಲ್ಲ ಅಥವಾ ಅದರ ಮೂಲಕ ಯಾವುದೋ ಒಂದು ವ್ಯವಸ್ಥೆಯ ಪ್ರತಿಷ್ಠೆ ಮಲಿನಗೊಳ್ಳುತ್ತದೆ ಎಂಬ ಕಾರಣಕ್ಕೆ ಕಲೆಯ ಅಭಿವ್ಯಕ್ತಿಯನ್ನು ತಡೆಯಲು ಸಾಧ್ಯವಿಲ್ಲ. ಈ ರೀತಿಯಾಗಿ ನ್ಯಾಯಾಲಯವು ಪ್ರತಿಯೊಂದು ವಿಷಯದಲ್ಲೂ ಹಸ್ತಕ್ಷೇಪ ಮಾಡುತ್ತಾ ಹೋದರೆ, ಕಲೆಗಳೇ ನಾಶವಾಗಿ ಹೋಗುತ್ತವೆ' ಎಂದು ಹೇಳಿತು.
ಉಚ್ಚ ನ್ಯಾಯಾಲಯವು ಮುಂದುವರಿದು, 'ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್.ಪಿ. ಭರೂಚಾ ಇವರು ತಮ್ಮ ಕೊಲ್ಲಂನಲ್ಲಿ (ಕೇರಳಮ್) ನ್ಯಾಯವಾದಿಗಳ ಮುಂದೆ ಮಾತನಾಡುವಾಗ, ಶೇ. ೨೦ ರಷ್ಟು ನ್ಯಾಯಾಧೀಶರು ಅಥವಾ ನ್ಯಾಯಮೂರ್ತಿಗಳು ಲಂಚಕೋರ ಪ್ರವೃತ್ತಿ ಯವರಾಗಿದ್ದಾರೆ ಎಂದು ಹೇಳಿದ್ದರು. ೧೯೯೭ ರಲ್ಲಿ ಸರ್ವೋಚ್ಚ ನ್ಯಾಯಾಲಯದ 'ಮುಂಬಯಿ ಉಚ್ಚ ನ್ಯಾಯಾಲಯದ ವಿರುದ್ಧ ಶಿರೀಷ್ ಕುಮಾರ ರಂಗರಾವ್ ಪಾಟೀಲ' ತೀರ್ಪಿನಲ್ಲಿಯೂ ನ್ಯಾಯವ್ಯವಸ್ಥೆಯಲ್ಲಿನ ಲಂಚಕೋರ ಪ್ರವೃತ್ತಿಯ ವಿಷಯದ ಕುರಿತು ಚರ್ಚಿಸಲಾಗಿತ್ತು. ವಕೀಲರ ಸಕ್ರಿಯ ಪಾಲ್ಗೊಳ್ಳುವಿಕೆಯಿಲ್ಲದೆ ನ್ಯಾಯವ್ಯವಸ್ಥೆಯಲ್ಲಿ ಲಂಚಕೋರತನ ನಡೆಯಲು ಸಾಧ್ಯವಿಲ್ಲ' ಎಂದು ಹೇಳಿತು. ಈ ತೀರ್ಪಿನಲ್ಲಿ ಉಚ್ಚ ನ್ಯಾಯಾಲಯವು ಮುಕ್ತ ಮನಸ್ಸಿನಿಂದ, 'ನಾವು ನಮ್ಮನ್ನು 'ಹೋಲಿ ಕೌ' (ಪವಿತ್ರ ಹಸು) ಎಂದು ಕರೆದು ಕೊಳ್ಳಲು ಸಾಧ್ಯವಿಲ್ಲ' ಎಂದು ಹೇಳಿತು. ನ್ಯಾಯಾಲಯವು ಉದಾಹರಣೆ ನೀಡುತ್ತಾ, 'ಚಿತ್ರಕಾರರು ಅಭಿವ್ಯಕ್ತಗೊಳಿಸುವ ವ್ಯಂಗ್ಯಚಿತ್ರಗಳು ಆಡಳಿತಗಾರರು ಅಥವಾ ಇತರ ವ್ಯವಸ್ಥೆಗಳ ಮೇಲೆ ವ್ಯಕ್ತಪಡಿಸುವ ಪ್ರತಿಕ್ರಿಯೆಯಾಗಿರುತ್ತವೆ. ಅದರಲ್ಲಿ ಅತಿಶಯೋಕ್ತಿ ಇದ್ದರೂ ಅದನ್ನು ಟೀಕಿಸವ ಒಂದು ಪರಿಣಾಮಕಾರಿ ಮಾಧ್ಯಮವೆಂದು ತಿಳಿಯಬೇಕು. ದೇಶದಲ್ಲಿ ವ್ಯಕ್ತಿಗೆ ಭಾಷಾಸ್ವಾತಂತ್ರ್ಯ, ವ್ಯಕ್ತಿಸ್ವಾತಂತ್ರ್ಯದ ಜೊತೆಗೆ ಟೀಕಿಸುವ ಸ್ವಾತಂತ್ರ್ಯವೂ ಇದೆ ಮತ್ತು ನ್ಯಾಯಾಂಗವ್ಯವಸ್ಥೆ ಅಥವಾ ನ್ಯಾಯ ಮೂರ್ತಿಗಳು ಇದರ ವ್ಯಾಪ್ತಿಯಿಂದ ಹೊರತಾಗಿಲ್ಲ' ಎಂದಿತು.
೨. ಚಲನಚಿತ್ರಕ್ಕೆ ಅನುಮತಿ ನೀಡುವಾಗ ಉಚ್ಚ ನ್ಯಾಯಾಲಯದಿಂದ ಇತರ ತೀರ್ಪುಗಳೊಂದಿಗೆ ರಾಮಾಯಣದ ಸಂದರ್ಭ
ತಮಿಳುನಾಡು ಉಚ್ಚ ನ್ಯಾಯಾಲಯವು ಈ ಹಿಂದೆ ಬಿಡುಗಡೆಯಾಗಿದ್ದ 'ಓರೇ ಒರು ಗ್ರಾಮಾಥಿಲೆ' ಈ ಚಲನ ಚಿತ್ರದ ಮೇಲಿನ ನಿಷೇಧದ ತೀರ್ಪನ್ನು ಉಲ್ಲೇಖಿಸಿ, 'ಈ ಚಲನಚಿತ್ರವನ್ನು ಪ್ರದರ್ಶಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುತ್ತದೆ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ತಮಿಳುನಾಡು ಉಚ್ಚ ನ್ಯಾಯಾಲಯವು ಅದರ ಮೇಲೆ ನಿಷೇಧ ಹೇರಿತ್ತು; ಆದರೆ ನಂತರ ಈ ನಿಷೇಧವನ್ನು ಸರ್ವೋಚ್ಚ ನ್ಯಾಯಾಲಯವು ತೆರವುಗೊಳಿಸಿತು. ಸಾರ್ವಜನಿಕ ವ್ಯವಸ್ಥೆಯನ್ನು ಕಾಪಾಡುವುದು ಸರಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಅಭಿವ್ಯಕ್ತಿ, ಕಲೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಚಲನಚಿತ್ರದ ಪ್ರದರ್ಶನವನ್ನು ಮುಂದುವರಿಸಬೇಕು' ಎಂಬ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ನೀಡಿದೆ, ಎಂದು ಹೇಳಿತು.
ಈ ತೀರ್ಪಿನಲ್ಲಿ ರಾಮಾಯಣದ ಒಂದು ಪ್ರಸಂಗವನ್ನು ವಿವರಿಸುತ್ತಾ ತಮಿಳುನಾಡು ಉಚ್ಚ ನ್ಯಾಯಾಲಯವು, 'ಪ್ರಭು ಶ್ರೀರಾಮರು ೧೪ ವರ್ಷಗಳ ಕಾಲ ವನವಾಸದಲ್ಲಿದ್ದರು. ಆ ಸಮಯದಲ್ಲಿ ಅವರು ಒಂದು ಸಾಯಂಕಾಲ ಒಂದು ಸ್ಥಳದಲ್ಲಿ ತಮ್ಮ ಧನಸ್ಸುಬಾಣಗಳನ್ನು ಇಟ್ಟರು. ಬೆಳಗ್ಗೆ ಅವರು ಧನಸ್ಸುಬಾಣಗಳನ್ನು ಇಟ್ಟಿದ್ದ ಜಾಗದಲ್ಲಿ ಕಪ್ಪೆಯೊಂದಕ್ಕೆ ಗಾಯವಾಗಿರುವುದನ್ನು ಕಂಡರು. ಆಗ ಶ್ರೀರಾಮರು ಅತ್ಯಂತ ಕಳಕಳಿಯಿಂದ, 'ಅಯ್ಯೋ, ನೀನು ನನ್ನನ್ನು ಯಾಕೆ ಕರೆಯಲಿಲ್ಲ ?' ಎಂದು ಕೇಳಿದರು. ಅದಕ್ಕೆ ಆ ಕಪ್ಪೆಯು, 'ನನಗೆ ಯಾರಾದರೂ ತೊಂದರೆ ನೀಡಿದರೆ ನಾನು ನಿಮ್ಮ ಹೆಸರನ್ನು ತೆಗೆದುಕೊಳ್ಳುತ್ತೇನೆ; ಆದರೆ ನಿಮ್ಮ ಕೃತಿಯೇ ನನಗೆ ಗಾಯವನ್ನುಂಟು ಮಾಡುತ್ತಿರುವಾಗ, ನಾನು ಯಾರನ್ನು ತಾನೇ ಕರೆಯಲಿ ?' ಎಂದು ಉತ್ತರಿಸಿತು. ಅದೇ ರೀತಿ ಭಾಷಾಸ್ವಾತಂತ್ರ್ಯ, ಕಲಾತ್ಮಕ ಅಭಿವ್ಯಕ್ತಿ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಂತಹ ವಿವಿಧ ಸಮಸ್ಯೆಗಳ ಸಂದರ್ಭದಲ್ಲಿ ಭಾರತೀಯ ನಾಗರಿಕರು ನ್ಯಾಯ ವ್ಯವಸ್ಥೆಯ ಸಹಾಯವನ್ನು ಪಡೆದುಕೊಳ್ಳುತ್ತಾರೆ. ಆದ್ದರಿಂದ 'ಸೆಂಟ್ರಲ್ ಬೋರ್ಡ್ ಫಾರ್ ಫಿಲ್ಮ್ ಸರ್ಟಿಫಿಕೇಶನ್'ವು ಈ ಚಲನಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡಿರುವಾಗ, ನಾವು ಅದರ ಮೇಲೆ ನಿಷೇಧ ಹೇರುವುದು ಯೋಗ್ಯವಾಗುವುದಿಲ್ಲ', ಎಂದು ಹೇಳಿತು. ಈ ರೀತಿಯಾಗಿ ತಮಿಳುನಾಡು ಉಚ್ಚ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತು ಮತ್ತು ಚಲನಚಿತ್ರಕ್ಕೆ ಅನುಮತಿ ನೀಡಿತು; ಆದರೆ ಚಲನಚಿತ್ರದಲ್ಲಿ ತೋರಿಸಿರುವಂತೆ ನ್ಯಾಯವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಕಡಿಮೆ ಉಲ್ಲೇಖ ಮಾಡಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು ಎಂದು ಅನಿಸುತ್ತದೆ. (೬.೬.೨೦೨೬)
| ಶ್ರೀಕೃಷ್ಣಾರ್ಪಣಮಸ್ತು |
- (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ

