ಭಾರತವು ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಪ್ರಜಾಸತ್ತಾತ್ಮಕ ಭಾಗವಹಿಸುವಿಕೆ ಎಂಬ ತತ್ತ್ವಗಳ ಆಧಾರದ ಮೇಲೆ ರೂಪುಗೊಂಡಿರುವ ಒಂದು ಸಾಂವಿಧಾನಿಕ ಪ್ರಜಾಪ್ರಭುತ್ವವಾಗಿದೆ. ಭಾರತದ ಸಂವಿಧಾನವು ರಾಷ್ಟ್ರದ ಆಡಳಿತವನ್ನು ನಡೆಸಲು, ವಿವಿಧ ಸಂಸ್ಥೆಗಳು ಕಾರ್ಯನಿರ್ವಹಿಸಲು ಮತ್ತು ಅಧಿಕಾರವನ್ನು ಬಳಸಲು ಒಂದು ಚೌಕಟ್ಟನ್ನು ಒದಗಿಸುತ್ತದೆ. ಸಂವಿಧಾನಾತ್ಮಕ ಪ್ರಕ್ರಿಯೆಗಳ ಮೇಲೆ ನಾಗರಿಕರು ಮತ್ತು ಸಂಸ್ಥೆಗಳಿಗಿರುವ ನಂಬಿಕೆಯಲ್ಲಿ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯು ಅಡಗಿದೆ. ಅದಕ್ಕಾಗಿಯೇ ರಾಷ್ಟ್ರದ ಏಕತೆಗಾಗಿ 'ಸಂವಿಧಾನಾತ್ಮಕ ಸಮಗ್ರತೆಯೇ ಪರಮೋಚ್ಛ ಧರ್ಮ (ಕರ್ತವ್ಯ)ವಾಗಿದೆ. ಲೇಖಕರು: ಕರ್ನಲ್ ಅಶೋಕ ಕಿಣಿ ಎಚ್. (ನಿವೃತ್ತ), ಆಧ್ಯಾತ್ಮಿಕ ಮತ್ತು ರಾಜಕೀಯ ವಿಶ್ಲೇಷಕರು, ದೆಹಲಿ. |
ಸಂಸತ್ತಿನ ಘನತೆ, ಸಭ್ಯತೆ ಮತ್ತು ಪಾವಿತ್ರ್ಯವನ್ನು ಕಾಪಾಡುವುದು ಅದರ ಸದಸ್ಯರ ಜವಾಬ್ದಾರಿ

ಸಂವಿಧಾನವು ಅದರ ಮಾರ್ಗದರ್ಶಕವಾಗಿದೆ. ಸಂಸತ್ತು ಚರ್ಚೆಯ ವೇದಿಕೆಯಾಗಿದೆ. ಮತದಾರನು ಸರ್ವೋಚ್ಛ ಅಧಿಕಾರವಿರುವ ಘಟಕ ಮತ್ತು ಭಾರತದ ಏಕತೆ ಹಾಗೂ ಸಮಗ್ರತೆಯು ತನ್ನ ಸ್ವಂತದ ಸಾಮೂಹಿಕ ಹೊಣೆಗಾರಿಕೆ ಯಾಗಿರಲಿ. ಸಂಸತ್ತಿನ ಪ್ರತಿಯೊಬ್ಬ ಸದಸ್ಯನು, ಅವನು ಜನರಿಂದ
ಆಯ್ಕೆಯಾಗಿರಲಿ ಅಥವಾ ರಾಷ್ಟ್ರಪತಿಗಳಿಂದ ನಾಮನಿರ್ದೇಶಿತ ನಾಗಿರಲಿ, ಭಾರತದ ಸಂವಿಧಾನವನ್ನು ಪಾಲಿಸುವ ಮತ್ತು ಅದರ ಬಗ್ಗೆ ನಿಷ್ಠೆಯನ್ನು ಹೊಂದಿರುವ ಪ್ರಮಾಣವಚನವನ್ನು ಸ್ವೀಕರಿಸುತ್ತಾನೆ. ಈ ಗಂಭೀರ ಪ್ರಮಾಣವಚನವು ಪ್ರತಿಯೊಬ್ಬ ಸದಸ್ಯರ ಮೇಲೆ ಸಂಸತ್ತಿನ ಘನತೆ, ಸಭ್ಯತೆ ಮತ್ತು ಪಾವಿತ್ರ್ಯವನ್ನು ಕಾಪಾಡುವ ಹಾಗೂ ಅದರ ಕಾರ್ಯಕಲಾಪಗಳು ಮತ್ತು ಪ್ರಚಲಿತ ಕಾರ್ಯಪದ್ಧತಿಗಳನ್ನು ಗೌರವಿಸುವ ವಿಶೇಷ ಜವಾಬ್ದಾರಿಯನ್ನು ವಹಿಸುತ್ತದೆ. - ಕರ್ನಲ್ ಕಿಣಿ (ನಿವೃತ್ತ)
ಸಂಸತ್ತು ಒಂದು ಸಾಂವಿಧಾನಿಕ ವೇದಿಕೆ ಸಂಸತ್ತು ಅತ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ, ಇದರ ಮೂಲಕ ಜನರ ಇಚ್ಛೆಯನ್ನು ವ್ಯಕ್ತಪಡಿಸಲಾಗುತ್ತದೆ. ಚರ್ಚೆ, ಭಿನ್ನಾಭಿಪ್ರಾಯ, ಪರಿಶೀಲನೆ, ಕಾನೂನು ರೂಪಿಸುವುದು ಮತ್ತು ಜವಾಬ್ದಾರಿ ಇವು ಸಂವಿಧಾನಾತ್ಮಕ ವೇದಿಕೆಯಾಗಿವೆ. ಅಭಿಪ್ರಾಯಗಳಲ್ಲಿನ ಭಿನ್ನತೆಯು ಪ್ರಜಾಪ್ರಭುತ್ವದ ದೌರ್ಬಲ್ಯವಲ್ಲ, ಬದಲಾಗಿ ಅದು ಒಂದು ಜೀವಂತ ಪ್ರಜಾಪ್ರಭುತ್ವಕ್ಕೆ ಅತ್ಯಾವಶ್ಯಕವಾಗಿರುತ್ತದೆ. ಸರಕಾರಕ್ಕೆ ಪ್ರಶ್ನೆಗಳನ್ನು ಕೇಳುವುದು, ಲೋಪದೋಷಗಳನ್ನು ಬಹಿರಂಗ ಪಡಿಸುವುದು ಮತ್ತು ಪರ್ಯಾಯ ನಿಲುವು ಹಾಗೂ ಕಾರ್ಯಕ್ರಮಗಳನ್ನು ಮಂಡಿಸುವುದು, ಇದರಲ್ಲಿ ವಿರೋಧ ಪಕ್ಷಕ್ಕೂ ಅಷ್ಟೇ ಮಹತ್ವದ ಸಾಂವಿಧಾನಿಕ ಪಾತ್ರವಿರುತ್ತದೆ. - ಕರ್ನಲ್ ಅಶೋಕ ಕಿಣಿ (ನಿವೃತ್ತ) |
೧. ಮತದಾರರು ಮತ್ತು ನಾಗರಿಕರು ಭಾರತೀಯ ಪ್ರಜಾಪ್ರಭುತ್ವದ ಕೇಂದ್ರಬಿಂದು
ಪ್ರಜಾಪ್ರಭುತ್ವವನ್ನು ಹಲವು ಬಾರಿ 'ಜನರ, ಜನರಿಂದ ಮತ್ತು ಜನರಿಗಾಗಿ ಎಂಬ ಸರಳ ಹಾಗೂ ಆಳವಾದ ಪದಗಳಲ್ಲಿ ವರ್ಣಿಸಲಾಗುತ್ತದೆ. ಇದರ ಮೂಲ ಅರ್ಥವೆಂದರೆ, ಪ್ರಜಾಪ್ರಭುತ್ವದಲ್ಲಿ ಸರ್ವೋಚ್ಛ ಹಾಗೂ ಸಾರ್ವಭೌಮ ಅಧಿಕಾರವು ಜನರ ಕೈಯಲ್ಲಿರುತ್ತದೆ. ಸರಕಾರಕ್ಕೆ ಅಧಿಕಾರವು ಜನರಿಂದಲೇ ಪ್ರಾಪ್ತವಾಗುತ್ತದೆ ಮತ್ತು ಅದು ಜನರಿಗೆ ಹೊಣೆಗಾರವಾಗಿರುತ್ತದೆ. ಆದ್ದರಿಂದ ಮತದಾರರು ಮತ್ತು ನಾಗರಿಕರು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕೇಂದ್ರಬಿಂದುವಾಗಿದ್ದಾರೆ.
೨. ಸರಕಾರದ ನಿಲುವು ಒಪ್ಪಿಗೆಯಾಗದಿದ್ದರೆ ಅದನ್ನು ವ್ಯಕ್ತಪಡಿಸುವ ಹಕ್ಕು
ಆದರೆ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಮತ್ತು ಅದರ ಸಂಸ್ಥೆಗಳ ಅಸ್ತವ್ಯಸ್ತತೆ ಅಥವಾ ಅವುಗಳ ಅವನತಿ ಇವೆರಡರ ನಡುವೆ ವ್ಯತ್ಯಾಸವಿದೆ. ಒಂದು ವೇಳೆ ಯಾವುದಾದರೂ ರಾಜಕೀಯ ಪಕ್ಷಕ್ಕೆ ಅಥವಾ ಗುಂಪಿಗೆ ಸರಕಾರದ ಯಾವುದಾದರೂ ನಿಲುವು, ನಿರ್ಧಾರ ಅಥವಾ ಆಡಳಿತ ವ್ಯವಸ್ಥೆಯು ಒಪ್ಪಿಗೆಯಿಲ್ಲ ಎಂದು ಅನಿಸಿದರೆ, ತಮ್ಮ ನಿಲುವನ್ನು ಜನರ ಮುಂದೆ ಮಂಡಿಸುವ ಪೂರ್ಣ ಪ್ರಜಾಸತ್ತಾತ್ಮಕ ಹಕ್ಕು ಅವರಿಗಿದೆ. ಅವರು ಸಂಸತ್ತಿನಲ್ಲಿ ಈ ವಿಷಯದ ಕುರಿತು ಚರ್ಚಿಸಬಹುದು, ಕಾನೂನುಬದ್ಧ ಹಾಗೂ ಶಾಂತಿಯುತ ಮಾರ್ಗಗಳ ಮೂಲಕ ಜನಮತವನ್ನು ಸಿದ್ಧಪಡಿಸಬಹುದು, ಪರ್ಯಾಯ ಕಾರ್ಯಕ್ರಮಗಳನ್ನು ಮಂಡಿಸಬಹುದು ಮತ್ತು ಅಂತಿಮವಾಗಿ ಚುನಾವಣೆಯ ಮೂಲಕ ಜನಬೆಂಬಲ ಕೋರಬಹುದು. ಸಂವಿಧಾನದಲ್ಲಿ ಅಥವಾ ಸಂಬಂಧಿತ ಕಾನೂನಿನಲ್ಲಿ ಸರ್ವಮತ ಸಂಗ್ರಹದ (ರೆಫರೆಂಡಮ್) ಅಥವಾ ನೇರ ಜನಸಂವಾದದ ಇತರ ಸ್ವರೂಪಗಳ ಅವಕಾಶವಿದ್ದರೆ, ಅಲ್ಲಿ ಆ ಸಾಂವಿಧಾನಿಕ ವ್ಯವಸ್ಥೆಯನ್ನೂ ಬಳಸಿಕೊಳ್ಳಬಹುದು.
೩. ರಾಜಕೀಯ ಪ್ರದರ್ಶನಗಳು ಹಾಗೂ ಬೆದರಿಕೆ ಹಾಕುವ ಕೃತಿಗಳಿಂದ ಸಂಸತ್ತಿನ ಕಾರ್ಯಕಲಾಪಗಳಿಗೆ ಧಕ್ಕೆ !
ಪ್ರಜಾಪ್ರಭುತ್ವದಲ್ಲಿ ಸಂವಿಧನಾತ್ಮಕ ಪ್ರಕ್ರಿಯೆಯ ಜಾಗದಲ್ಲಿ ರಾಜಕೀಯ ಪ್ರದರ್ಶನಗಳು, ಬೆದರಿಕೆ ಹಾಕುವ ಕೃತಿಗಳು ಅಥವಾ ಅರಾಜಕತೆ ಸೃಷ್ಟಿಸುವುದು ಇವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ; ವಿಶೇಷವಾಗಿ ಇದರಿಂದ ಸಂಸತ್ತಿನ ಕಾರ್ಯಕಲಾಪಗಳು ಹಾಗೂ ಅದರ ಘನತೆಯೇ ಅಪಾಯಕ್ಕೆ ಸಿಲುಕುತ್ತವೆ.
೪. ಸಂವಿಧಾನವನ್ನು ರಕ್ಷಿಸುವುದು ಸಾಂವಿಧಾನಿಕ ಹುದ್ದೆಗಳಲ್ಲಿರುವ ವ್ಯಕ್ತಿಗಳ ಜವಾಬ್ದಾರಿ
ಸಾಂವಿಧಾನಿಕ ಹುದ್ದೆಗಳಲ್ಲಿರುವ ವ್ಯಕ್ತಿಗಳು ಮತ್ತು ಆಯ್ಕೆಯಾದ ಪ್ರತಿನಿಧಿಗಳು ಸ್ವೀಕರಿಸುವ ಪ್ರಮಾಣವಚನವು ಕೇವಲ ಔಪಚಾರಿಕ ವಿಧಿಯಲ್ಲ. ಅದು ಸಂವಿಧಾನವನ್ನು ರಕ್ಷಿಸುವ ಮತ್ತು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಗಂಭೀರವಾದ ವಚನಬದ್ಧತೆಯಾಗಿರುತ್ತದೆ. ಆದ್ದರಿಂದ ಯಾರಿಗೆ ಸಾರ್ವಜನಿಕ ಹುದ್ದೆಗಳ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆಯೋ, ಅವರಿಗೆ ಕೆಲಸ ಮಾಡುವ ಸಂಸ್ಥೆಗಳ ಘನತೆ, ಕಾರ್ಯಪದ್ಧತಿ ಹಾಗೂ ವಿಶ್ವಾಸಾರ್ಹತೆ ಕಾಪಾಡುವ ದೊಡ್ಡ ಹೊಣೆಗಾರಿಕೆ ಇರುತ್ತದೆ.
೫. ಸರಕಾರದ ನಿಲುವುಗಳ ವಿರುದ್ಧದ ಜನಮತವು ಕಾನೂನಿನ ಚೌಕಟ್ಟಿನಲ್ಲಿರಬೇಕು !
ಸಂಸತ್ತು ಪ್ರಜಾಸತ್ತಾತ್ಮಕ ಚರ್ಚೆಯ ಮಂದಿರವಾಗಿರಬೇಕೇ ಹೊರತು, ಕೇವಲ ರಾಜಕೀಯ ಸಂಘರ್ಷದ ಮತ್ತೊಂದು ವೇದಿಕೆಯಾಗಬಾರದು. ಅದೇ ಸಮಯದಲ್ಲಿ ಸಂಸತ್ತಿನ ಹೊರಗೆ ಶಾಂತಿಯುತವಾಗಿ ಪ್ರತಿಭಟಿಸುವ ಪ್ರಜಾಸತ್ತಾತ್ಮಕ ಹಕ್ಕನ್ನು ಗೌರವಿಸಬೇಕು. ನಾಗರಿಕರಿಗೆ ಮತ್ತು ರಾಜಕೀಯ ಸಂಘಟನೆಗಳಿಗೆ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು, ಜನಮತವನ್ನು ಸಿದ್ಧಪಡಿಸಲು ಮತ್ತು ಸರಕಾರವನ್ನು ಹೊಣೆಗಾರರನ್ನಾಗಿ ಮಾಡಲು ಕಾನೂನುಬದ್ಧ ಮಾರ್ಗಗಳು ಲಭ್ಯವಿವೆ; ಆದರೆ ಇಂತಹ ಅಭಿವ್ಯಕ್ತಿಯು ಶಾಂತಿಯುತವಾಗಿರಬೇಕು, ಕಾನೂನಿನ ಚೌಕಟ್ಟಿನಲ್ಲಿ ಇದ್ದುಕೊಂಡು ಮಾಡಿರಬೇಕು ಹಾಗೂ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿರಬೇಕು. ಸಂಸದೀಯ ಪ್ರಕ್ರಿಯೆಯ ಬದಲು ಬೀದಿಗಿಳಿದು ಶಕ್ತಿ ಬಳಸುವ ಅಥವಾ ಅಸಾಂವಿಧಾನಿಕ ಅಥವಾ ಬಲವಂತದ ಮಾರ್ಗಗಳಿಂದ ಸಂಸ್ಥೆಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವು ನಡೆಯಬಾರದು.
೬. ಸಂವಿಧಾನಾತ್ಮಕ ಜವಾಬ್ದಾರಿಯನ್ನು ಹೊಂದಿರುವವರು ಪಾಲಿಸಬೇಕಾದ ನಿಯಮ
ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳ ಮೇಲೆ 'ಮೌನವು ಪರಿಹಾರವಲ್ಲ. ಬದಲಾಗಿ ಹೆಚ್ಚಿನ ಚರ್ಚೆ, ಜನಜಾಗೃತಿ, ಹೊಣೆಗಾರಿಕೆ ಮತ್ತು ಅಂತಿಮವಾಗಿ ಜನರ ಬೆಂಬಲವೇ ಸೂಕ್ತ ಮಾರ್ಗವಾಗಿದೆ. ಆದ್ದರಿಂದ ಯಾರಿಗೆ ಸಂವಿಧಾನಾತ್ಮಕ ಹೊಣೆಗಾರಿಕೆಯ ಹುದ್ದೆಗಳಿವೆಯೋ, ಅವರು ಉತ್ತಮ ಮಾದರಿಯನ್ನು ಹಾಕಿಕೊಡಬೇಕು. ಸರಕಾರದೊಂದಿಗೆ ತೀವ್ರ ಭಿನ್ನಾಭಿಪ್ರಾಯವಿದ್ದರೂ ಅವರು ಸಂಯಮ, ಘನತೆ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ಗೌರವ ಹೊಂದಿರಬೇಕು. ರಾಜಕೀಯ ವಿಜಯವು ಎಂದಿಗೂ ಸಂವಿಧಾನಾತ್ಮಕ ಸಮಗ್ರತೆಗಿಂತ ಅಧಿಕ ಮಹತ್ವದ್ದಾಗಿರಬಾರದು.
೭. ವೈಯಕ್ತಿಕ ರಾಜಕೀಯ ಹಿತಾಸಕ್ತಿಗಿಂತ ರಾಷ್ಟ್ರಹಿತವೇ ಅತ್ಯಂತ ಮಹತ್ವದ್ದು !
ಭಾರತದ ಪ್ರಜಾಪ್ರಭುತ್ವಕ್ಕೆ ಜಗತ್ತಿನಲ್ಲಿ ಗೌರವ ಸಿಗಲು ಕಾರಣವೆಂದರೆ, ತಲೆಮಾರುಗಳಿಂದ ನಾಗರಿಕರು, ರಾಜಕೀಯ ನಾಯಕರು, ವಿವಿಧ ಸಂಸ್ಥೆಗಳು ಮತ್ತು ಜನಸೇವಕರು ಸಂವಿಧಾನಾತ್ಮಕ ಪ್ರಕ್ರಿಯೆಯಲ್ಲಿ ನಂಬಿಕೆಯನ್ನು ಇಟ್ಟಿದ್ದಾರೆ. ಈ ಪರಂಪರೆಯನ್ನು ಕಾಪಾಡುವುದು ಅವಶ್ಯಕವಾಗಿದೆ. ಯಾವುದೇ ಸರಕಾರದೊಂದಿಗೆ ನಮ್ಮ ಭಿನ್ನಾಭಿಪ್ರಾಯವಿರಬಹುದು. ನಾವು ಅವರ ನಿಲುವುಗಳನ್ನು ವಿರೋಧಿಸಬಹುದು. ನಾವು ಅವರ ನಿರ್ಧಾರಗಳನ್ನು ಟೀಕಿಸಬಹುದು. ನಾವು ಅವರ ವಿರುದ್ಧ ಜನಮತವನ್ನು ಸಿದ್ಧಪಡಿಸಬಹುದು; ಆದರೆ ನಾವು ಎಂದಿಗೂ ಮರೆಯಬಾರದ ಅಂಶವೆಂದರೆ, ಸಂವಿಧಾನವು ಯಾವುದೇ ಸರಕಾರಕ್ಕಿಂತ ಶ್ರೇಷ್ಠವಾಗಿದೆ. ಸಂಸತ್ತು ಯಾವುದೇ ರಾಜಕೀಯ ಪಕ್ಷಕ್ಕಿಂತ ದೊಡ್ಡದಾಗಿದೆ ಮತ್ತು ರಾಷ್ಟ್ರವು ಪ್ರತಿಯೊಬ್ಬರ ವೈಯಕ್ತಿಕ ರಾಜಕೀಯ ಹಿತಾಸಕ್ತಿಗಿಂತ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಸಂವಿಧಾನಾತ್ಮಕ ಸಂಸ್ಥೆಗಳ ಘನತೆಯನ್ನು ಕಾಪಾಡುವ ಹೊಣೆಗಾರಿಕೆಯು ಪ್ರತಿಯೊಬ್ಬ ರಾಜಕೀಯ ಪಕ್ಷದ ಮೇಲಿದೆ, ಜನಪ್ರತಿನಿಧಿಯ ಮೇಲಿದೆ ಮತ್ತು ನಾಗರಿಕನ ಮೇಲಿದೆ. ನಾವು ಪ್ರಜಾಸತ್ತಾತ್ಮಕ ಮಾರ್ಗದಿಂದ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿ ಶಾಂತಿಯುತ ಮಾರ್ಗದಿಂದ ವಿರೋಧವನ್ನು ವ್ಯಕ್ತಪಡಿಸೋಣ, ನಿರ್ಭಯವಾಗಿ ಚರ್ಚಿಸೋಣ ಮತ್ತು ಸಂವಿಧಾನಾತ್ಮಕ ಮಾರ್ಗದಿಂದ ಜನರ ಬೆಂಬಲವನ್ನು ಪಡೆಯೋಣ.
೮. ಸಂಸತ್ತಿನ ಘನತೆ ಕಾಪಾಡುವುದು, ಇದು ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನರ ಕುರಿತಾದ ಜವಾಬ್ದಾರಿ !
ಸಂಸತ್ತು ಭಾರತೀಯ ಪ್ರಜಾಪ್ರಭುತ್ವದಲ್ಲಿನ ಅತ್ಯಂತ ಮಹತ್ವದ ಸಂಸ್ಥೆಯಾಗಿದೆ ಮತ್ತು ಅದರ ಘನತೆಯೆಂದರೆ, ನೇರ ಸಂವಿಧಾನದ ಘನತೆಯೇ ಆಗಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಪ್ರಬಲ ಚರ್ಚೆಗಳು ಇರುವುದು ಸ್ವಾಭಾವಿಕ ಹಾಗೂ ಅವಶ್ಯಕವಾಗಿದೆ. ಆದರೆ ಇವೆಲ್ಲವನ್ನೂ ಮಾಡುವಾಗ ಸಂಬಂಧಿತ ಸಂಸ್ಥೆ ಮತ್ತು ಅದರ ನಿಯಮಗಳನ್ನು ಗೌರವಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ಇದರಿಂದ ರಾಜಕೀಯ ವಿಚಾರಧಾರೆ ಏನೇ ಇರಲಿ, ಪ್ರತಿಯೊಬ್ಬ ಸದಸ್ಯರ ಕರ್ತವ್ಯವೆಂದರೆ, ಅವರು ಸಂಯಮವನ್ನು ಪಾಲಿಸಬೇಕು, ಸಂಸದೀಯ ಸಂಕೇತಗಳನ್ನು ಕಾಪಾಡಿಕೊಳ್ಳಬೇಕು ಮತ್ತು ಭಿನ್ನಾಭಿಪ್ರಾಯಗಳ ರೂಪವು ಎಂದಿಗೂ ಅನಾದರಕ್ಕೆ ತಿರುಗದಂತೆ ನೋಡಿಕೊಳ್ಳಬೇಕು. ಸಂಸತ್ತಿನ ಘನತೆಯೆಂದರೆ ಒಂದು ಸಾಮೂಹಿಕ ಜವಾಬ್ದಾರಿ ಆಗಿದೆ. ಅದನ್ನು ಕಾಪಾಡುವುದೆಂದರೆ, ಕೇವಲ ಒಂದು ಕಾರ್ಯಪದ್ಧತಿಯನ್ನು ಪಾಲಿಸುವುದಲ್ಲ, ಬದಲಾಗಿ ಅದು ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನಾವು ಯಾವ ಜನತೆಯನ್ನು ಪ್ರತಿನಿಧಿಸುತ್ತೇವೆಯೋ, ಅವರ ಕುರಿತಾದ ಜವಾಬ್ದಾರಿಯಾಗಿದೆ.
೯. ಭಾರತದ ಸ್ವಾತಂತ್ರ್ಯವೆಂದರೆ, ಅನೇಕ ದಶಕಗಳ ಸಂಘರ್ಷ, ಧೈರ್ಯ, ತ್ಯಾಗ ಮತ್ತು ದೃಢನಿಶ್ಚಯಗಳ ಫಲ !
ಭಾರತದ ಸ್ವಾತಂತ್ರ್ಯವೆಂದರೆ, ಕೇವಲ ಒಬ್ಬ ಆಡಳಿತಗಾರನಿಂದ ಮತ್ತೊಬ್ಬ ಆಡಳಿತಗಾರನಿಗೆ ಆದ ಅಧಿಕಾರ ಹಸ್ತಾಂತರದ ಕೃತಿಯಾಗಿರಲಿಲ್ಲ. ಈ ಸ್ವಾತಂತ್ರ್ಯವೆಂದರೆ, ಅನೇಕ ದಶಕಗಳ ಸಂಘರ್ಷ, ಧೈರ್ಯ, ತ್ಯಾಗ ಮತ್ತು ದೃಢನಿಶ್ಚಯಗಳ ಫಲವಾಗಿತ್ತು; ಇದರಲ್ಲಿ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಜನಸಾಮಾನ್ಯರು ಸೇರಿದ್ದರು, ಅವರು ಸ್ವತಂತ್ರ ಮತ್ತು ಸಾರ್ವಭೌಮ ಭಾರತದ ಕನಸನ್ನು ಕಂಡಿದ್ದರು. ನಮ್ಮ ಪೂರ್ವಿಕರು ಸೆರೆಮನೆವಾಸ, ಕಷ್ಟ-ಯಾತನೆಗಳು ಮತ್ತು ಚಿತ್ರಹಿಂಸೆಗಳನ್ನು ಸಹಿಸಿಕೊಂಡರು. ಅಷ್ಟೇ ಅಲ್ಲದೆ, ಭವಿಷ್ಯದ ಪೀಳಿಗೆಯು ಗೌರವದಿಂದ, ಸ್ವಾತಂತ್ರ್ಯದಿಂದ ಮತ್ತು ಸ್ವಾಭಿಮಾನದಿಂದ ಬದುಕಬಹುದೆಂಬುದಕ್ಕಾಗಿ ಅವರು ತಮ್ಮ ಪ್ರಾಣವನ್ನೂ ಬಲಿದಾನಗೈಯ್ದರು. ಅನೇಕ ತ್ಯಾಗಗಳು ಎಷ್ಟಿವೆಯೆಂದರೆ, ಅವುಗಳ ಹೆಸರುಗಳು ಎಲ್ಲೂ ನಮೂದಾಗಿಲ್ಲ; ಆದರೆ ಅವರ ಕೊಡುಗೆಯು ನಮ್ಮ ರಾಷ್ಟ್ರೀಯ ಪರಂಪರೆಯ ಒಂದು ಅವಿಭಾಜ್ಯ ಭಾಗವಾಗಿದೆ.
೧೦. ಭಾರತದ ಪ್ರಗತಿ ಮತ್ತು ಸುರಕ್ಷತೆಗಾಗಿ ಕೊಡುಗೆ ನೀಡುವುದು, ಇದು ಪ್ರತಿಯೊಬ್ಬರ ಜವಾಬ್ದಾರಿ !
ಸ್ವಾತಂತ್ರ್ಯದೊಂದಿಗೆ ಸ್ವಂತದ ಭವಿಷ್ಯವನ್ನು ಸ್ವಹಸ್ತಗಳಿಂದ ರೂಪಿಸಿಕೊಳ್ಳುವ ಅವಕಾಶವು ಲಭಿಸಿತು. ಭಾರತವು ಪ್ರಜಾಪ್ರಭುತ್ವದ ಮಾರ್ಗವನ್ನು ಆರಿಸಿಕೊಂಡಿತು, ಅಲ್ಲಿ ಸಾರ್ವಭೌಮತ್ವವು ಅಂತಿಮ ಅರ್ಥದಲ್ಲಿ ಜನರ ಕೈಯಲ್ಲಿರುತ್ತದೆ. ಭಾರತೀಯ ಸಂವಿಧಾನವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ಅಡಿಪಾಯವನ್ನು ಹಾಕಿತು, ಹಾಗೆಯೇ ಅಂತಹ ಸಂಸ್ಥೆಗಳ ನಿರ್ಮಾಣವನ್ನು ಮಾಡಿತು, ಇವುಗಳ ಮಾಧ್ಯಮದಿಂದ ನಾಗರಿಕರಿಗೆ ತಮ್ಮ ಆಕಾಂಕ್ಷೆಗಳನ್ನು ವ್ಯಕ್ತಪಡಿಸಲು ಅವಕಾಶ ಸಿಗುತ್ತದೆ. ಆದ್ದರಿಂದ ಸ್ವಾತಂತ್ರ್ಯವನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು. ಸ್ವಾತಂತ್ರ್ಯದೊಂದಿಗೆ ಕೆಲವು ಜವಾಬ್ದಾರಿಗಳು ಬರುತ್ತವೆ. ಭಾರತೀಯ ಸಂವಿಧಾನವನ್ನು ಗೌರವಿಸುವುದು, ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವುದು ಹಾಗೂ ಭಾರತದ ಪ್ರಗತಿ ಮತ್ತು ಸುರಕ್ಷತೆಗಳಲ್ಲಿ ಕೊಡುಗೆ ನೀಡುವುದು, ಇದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ.
೧೧. ಭಾರತದ ಸಮ್ಮಾನ : ಪ್ರತಿಯೊಬ್ಬ ಭಾರತೀಯನ ಸಾಮೂಹಿಕ ಕರ್ತವ್ಯ !
ನಮ್ಮ ರಾಷ್ಟ್ರದ ಸಮ್ಮಾನ, ಘನತೆ ಮತ್ತು ಸಾರ್ವಭೌಮತ್ವವನ್ನು ಪ್ರತಿಯೊಬ್ಬ ಭಾರತೀಯನು ಸದಾ ಸರ್ವೋಚ್ಛವಾಗಿ ಗೌರವಿಸಬೇಕು. ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು, ಅಭಿಪ್ರಾಯಗಳು ಭಿನ್ನವಾಗಿರಬಹುದು ಮತ್ತು ಪ್ರಜಾಪ್ರಭುತ್ವದಲ್ಲಿ ವಾದ-ಸಂವಾದಗಳು ನಡೆಯುವುದು ಸ್ವಾಭಾವಿಕವಾಗಿದೆ; ಆದರೆ ರಾಷ್ಟ್ರದ ಬಗ್ಗೆ ಮತ್ತು ಸಂವಿಧಾನಿಕ ಸಂಸ್ಥೆಗಳ ಬಗ್ಗೆ ಇರುವ ಗೌರವವು ಎಲ್ಲಾ ಭಿನ್ನಾಭಿಪ್ರಾಯಗಳಿಗಿಂತ ಮೇಲಿರಬೇಕು. ಯಾರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈಯ್ದರೋ, ಅವರನ್ನು ಸ್ಮರಿಸೋಣ, ಅವರು ನಿರ್ಮಿಸಿದ ಪ್ರಜಾಪ್ರಭುತ್ವದ ಪರಂಪರೆಯನ್ನು ಕಾಪಾಡಿಕೊಳ್ಳೋಣ ಮತ್ತು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸಿದ ಭಾರತ ರಾಷ್ಟ್ರವು ಹೆಚ್ಚು ಸಮರ್ಥವಾಗಿ, ಹೆಚ್ಚು ಸೌಹಾರ್ದಯುತವಾಗಿ, ಹೆಚ್ಚು ಜವಾಬ್ದಾರಿಯಿಂದ ಕೂಡಿರಲು ಹಾಗೂ ಅವರ ಬಲಿದಾನಕ್ಕೆ ತಕ್ಕಂತೆ ಇರಲು ಖಚಿತಪಡಿಸಿಕೊಳ್ಳೋಣ. ನಮ್ಮ ಸ್ವಾತಂತ್ರ್ಯವು ಅವರ ಪರಂಪರೆ ಆಗಿದೆ. ಭಾರತೀಯ ಪ್ರಜಾಪ್ರಭುತ್ವವು ನಮ್ಮ ಸ್ವಂತದ ಹೊಣೆಗಾರಿಕೆಯಾಗಿದೆ. ಭಾರತದ ಸಮ್ಮಾನವೆಂದರೆ ಪ್ರತಿಯೊಬ್ಬ ಭಾರತೀಯನ ಸಾಮೂಹಿಕ ಕರ್ತವ್ಯವಾಗಿದೆ. (೧.೧೧.೨೦೨೬)

