ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಇಳಿಕೆಯಾಗಿರುವ ಅಂಕಿಅಂಶಗಳನ್ನು ಕೇಂದ್ರ ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿತು. ೨೦೨೩ ನೇ ಇಸವಿಯಲ್ಲಿ ೯ ಲಕ್ಷ ೮ ಸಾವಿರ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಿದ್ದರು.
೨೦೨೪ ನೇ ಇಸವಿಯಲ್ಲಿ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ತಗ್ಗಿ ೭ ಲಕ್ಷದ ೭೦ ಸಾವಿರವಾಯಿತು ಮತ್ತು ೨೦೨೫ ನೇ ಇಸವಿಯಲ್ಲಿ ಈ ಸಂಖ್ಯೆಯು ೬ ಲಕ್ಷ ೨೬ ಸಾವಿರಕ್ಕೆ ಕುಸಿದಿದೆ; ಅಂದರೆ ಕಳೆದ ೨ ವರ್ಷಗಳಲ್ಲಿ ವಿದೇಶದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ೨ ಲಕ್ಷ ೮೨ ಸಾವಿರದಷ್ಟು ಇಳಿಕೆಯಾಗಿದೆ. ವಿದೇಶಗಳಲ್ಲಿನ ದುಬಾರಿ ಶಿಕ್ಷಣ ಮತ್ತು ಭಾರತದಲ್ಲಿ ಲಭ್ಯವಾಗುತ್ತಿರುವ ಉನ್ನತ ಶಿಕ್ಷಣದ ಅವಕಾಶಗಳು - ಈ ಎರಡು ಪ್ರಮುಖ ಕಾರಣಗಳಿಂದಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಯುವಕರಿಗೆ ದೇಶದಲ್ಲೇ ನಿರೀಕ್ಷಿತ ಶಿಕ್ಷಣದ ಅವಕಾಶಗಳು ಲಭ್ಯವಾಗುತ್ತಿರುವುದು, ದೇಶದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತಿರುವುದರ ಪ್ರತೀಕವಾಗಿದೆ. ಯುವಕರಿಗೆ ದೇಶದಲ್ಲೇ ಉನ್ನತ ಶಿಕ್ಷಣದ ಅವಕಾಶಗಳು ಲಭ್ಯವಾಗಿರುವುದರಿಂದ ದೇಶದಿಂದ ಹೊರಹೋಗುವ ಬಂಡವಾಳ ದೇಶದಲ್ಲೇ ಉಳಿಯುತ್ತದೆ ಮತ್ತು ಭವಿಷ್ಯದಲ್ಲಿ ಯುವಕರ ಶಿಕ್ಷಣದ ಪ್ರಯೋಜನವು ದೇಶದ ವಿಕಾಸಕ್ಕೆ ಬಳಕೆಯಾಗುವ ಸಾಧ್ಯತೆ ಹೆಚ್ಚು.
ಕರ್ತೃತ್ವಶಕ್ತಿಯ ಲಾಭ ಪಾಶ್ಚಾತ್ಯರಿಗೆ !
ಪರಕೀಯರ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷರು ಹೇರಿದ ಮೆಕಾಲೆ ಶಿಕ್ಷಣ ಪದ್ಧತಿಯಿಂದಾಗಿ ಭಾರತದ ಪ್ರಾಚೀನ ಗುರುಕುಲ ಶಿಕ್ಷಣ ಪದ್ಧತಿಗೆ ಧಕ್ಕೆಯುಂಟಾಯಿತು ಮತ್ತು ಭಾರತೀಯ ಯುವಕರಲ್ಲಿ ವಿದೇಶಿ ಶಿಕ್ಷಣದ ಮೇಲಿನ ಒಲವು ಹೆಚ್ಚಾಯಿತು. ಬ್ರಿಟಿಷರು ಅಂತಹ ವ್ಯವಸ್ಥೆಯನ್ನೇ ನಿರ್ಮಿಸಿದರು. ಎರಡನೇ ಮಹಾಯುದ್ಧದ ನಂತರ ಯುರೋಪ್ ದೇಶಗಳು ಆರ್ಥಿಕವಾಗಿ ಸಮರ್ಥವಾಗುತ್ತಾ ಹೋದವು; ಆದರೆ ಭಾರತದಲ್ಲಿ ಬ್ರಿಟಿಷರು ನಡೆಸಿದ ಆರ್ಥಿಕ ಲೂಟಿ ಮತ್ತು ಅಸಮಾನತೆಯ ಬೀಜಗಳ ಪರಿಣಾಮವಾಗಿ ದೇಶವು ಹಿಂದುಳಿಯುವಂತಾಯಿತು. ಇದಕ್ಕೆ ವಿರುದ್ಧವಾಗಿ ಅಮೆರಿಕ ಮತ್ತು ಇಂಗ್ಲೆಂಡ್ನ ವಿಶ್ವವಿದ್ಯಾಲಯಗಳಲ್ಲಿ ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್, ಎಂಜಿನಿಯರಿಂಗ್, ವೈದ್ಯಕೀಯ ಮತ್ತು ವೈಜ್ಞಾನಿಕ ಸಂಶೋಧನೆಯಂತಹ ಉನ್ನತ ಶಿಕ್ಷಣಕ್ಕೆ ವೇಗ ಸಿಕ್ಕಿತು. ಇದರಿಂದ ಸ್ವಾಭಾವಿಕವಾಗಿಯೇ ಭಾರತದ ಶ್ರೀಮಂತ ವಿದ್ಯಾರ್ಥಿಗಳ ಒಲವು ವಿದೇಶಗಳ ಈ ಉನ್ನತ ಶಿಕ್ಷಣದ ಕಡೆಗೆ ಹೆಚ್ಚಾಯಿತು. ಕಾಲಕ್ರಮೇಣ ಮಧ್ಯಮ ವರ್ಗದ ಕುಟುಂಬಗಳೂ ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಲ ಮಾಡಿ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಶಿಕ್ಷಣಕ್ಕಾಗಿ ಕಳುಹಿಸುವ ಪ್ರಮಾಣವು ಹೆಚ್ಚಾಯಿತು. ಭಾರತೀಯರ ಬುದ್ಧಿಮತ್ತೆ ಹೆಚ್ಚಾಗಿರುವುದರಿಂದ ಯುರೋಪಿಗೆ ಶಿಕ್ಷಣಕ್ಕಾಗಿ ತೆರಳಿದ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ವಿಶೇಷ ಮುದ್ರೆ ಒತ್ತಿದರು. ಪ್ರಸ್ತುತ ಅಮೆರಿಕದಲ್ಲಿ ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಥವಾ ಸಂಶೋಧನಾ ಕ್ಷೇತ್ರವಿರಲಿ, ಅಲ್ಲಿ ಭಾರತೀಯರ ಪ್ರಮಾಣವು ಸರಿಸುಮಾರು ಶೇಕಡಾ ೨೯ ರಷ್ಟಿದೆ. ಇದರಿಂದ ಭಾರತೀಯರ ಕರ್ತೃತ್ವಶಕ್ತಿಯನ್ನು ಅಂದಾಜಿಸಬಹುದು. ವಿದೇಶದಲ್ಲಿ ಶಿಕ್ಷಣ ಪಡೆದ ಕಾರಣ ಹೆಚ್ಚಿನ ವಿದ್ಯಾರ್ಥಿಗಳಿಗೆ ಅಲ್ಲೇ ಉದ್ಯೋಗದ ಅವಕಾಶಗಳು ದೊರೆತವು. ಭಾರತಕ್ಕೆ ಹೋಲಿಸಿದರೆ ಹಲವು ಪಟ್ಟು ಅಧಿಕ ವೇತನ ಸಿಗುವುದನ್ನು ಪರಿಗಣಿಸಿ ಅನೇಕ ಭಾರತೀಯರು ವಿದೇಶದಲ್ಲೇ ನೆಲೆಸಿದರು. ಇದರಿಂದ ಅವರ ಕರ್ತೃತ್ವದ ಲಾಭ ಭಾರತಕ್ಕಿಂತ ಆ ದೇಶಗಳಿಗೇ ಹೆಚ್ಚಾಯಿತು.

ಪ್ರತ್ಯೇಕತಾವಾದಕ್ಕೆ ಉತ್ತೇಜನ ದೊರೆಯಿತು !
ವಿದೇಶದಲ್ಲಿ ಶಿಕ್ಷಣ ಪಡೆದಿದ್ದರಿಂದ ಭಾರತದ ವಿಕಾಸಕ್ಕೆ ಸ್ವಲ್ಪ ಮಟ್ಟಿಗೆ ಹೊಡೆತ ಬಂತು; ಆದರೆ ಅದಕ್ಕಿಂತಲೂ ಹೆಚ್ಚು ಹೊಡೆತ ದೇಶದ ರಾಷ್ಟ್ರೀಯತೆಗೆ ತಗುಲಿತು. ದೇಶದಲ್ಲೇ ಉನ್ನತ ದರ್ಜೆಯ ಶಿಕ್ಷಣದ ಅವಕಾಶಗಳು ಲಭ್ಯವಿರುವುದರಿಂದ ಈ ವಿದ್ಯಾರ್ಥಿಗಳ ನಂಟು ನೆಲ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಗಟ್ಟಿಯಾಗಿ ಉಳಿಯುತ್ತದೆ ಹಾಗೂ ಅವರಲ್ಲಿ ರಾಷ್ಟ್ರೀಯತೆಯ ಭಾವನೆ ಜಾಗೃತವಾಗಿರುತ್ತದೆ. ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದ ಭಾರತೀಯ ಸಂಸ್ಕೃತಿಗೆ ಎರಡನೇ ಸ್ಥಾನ ನೀಡುವ ಮತ್ತು ದೇಶದ ಪ್ರತ್ಯೇಕತಾವಾದಿಗಳಿಗೆ ಸಹಾಯ ಮಾಡುವ ಯುವವರ್ಗವು ನಿರ್ಮಾಣವಾಗುತ್ತಾ ಹೋಯಿತು. ಸ್ವಾತಂತ್ರ್ಯಪೂರ್ವದಲ್ಲಿ ಹಾಗೂ ನಂತರದಲ್ಲೂ ಪಾಶ್ಚಾತ್ಯರ ಪ್ರಭಾವವಿದ್ದ ಅನೇಕ ದಿಗ್ಗಜರಿಗೆ ಭಾರತದಲ್ಲಿನ ಬ್ರಿಟಿಷರ ಆಳ್ವಿಕೆಯು ದೈವಿಕವೆಂದು ತೋರುತ್ತಿತ್ತು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ನೆಹರೂರವರ ಮೇಲಿದ್ದ ಪಾಶ್ಚಾತ್ಯ ಶಿಕ್ಷಣ ಮತ್ತು ಸಾಮ್ಯವಾದಿ ವಿಚಾರಗಳ ಪ್ರಭಾವದಿಂದ ಭಾರತದಲ್ಲಿ ಸಂಸ್ಕೃತಿಗೆ ದೊಡ್ಡ ಪ್ರಮಾಣದಲ್ಲಿ ಹಿನ್ನಡೆಯಾಯಿತು. ನೆಹರೂರವರು ತಂತ್ರಜ್ಞಾನ ಮತ್ತು ಕೈಗಾರಿಕೀಕರಣಕ್ಕಾಗಿ ಗಣನೀಯ ಕೊಡುಗೆ ನೀಡಿದರು; ಆದರೆ ಆ ಕಾಲದಲ್ಲಿ ದೇಶದಲ್ಲಿ ಸಾಮ್ಯವಾದಿಗಳ ಪ್ರಭಾವವು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಯಿತು. ಅದರ ಪರಿಣಾಮವೇ ಮುಂದೆ ನಕ್ಸಲಿಸಮ್, ಭಯೋತ್ಪಾದಕರಿಗೆ ಸಹಾಯ ಮಾಡುವ ಗುಂಪುಗಳು, ಹಿಂದುತ್ವವನ್ನು ವಿರೋಧಿಸುವವರು ಮತ್ತು ಭಾರತೀಯ ಹಬ್ಬ-ಹರಿದಿನಗಳನ್ನು ಮೂಢನಂಬಿಕೆ ಎಂದು ಕರೆಯುವವರ ಪ್ರಭಾವವು ಹೆಚ್ಚಾಗಲು ಕಾರಣವಾಯಿತು. ದೇಶದೊಳಗಿನ ಭೌತಿಕ ವಿಕಾಸವನ್ನು ಕೆಲವೇ ವರ್ಷಗಳಲ್ಲಿ ಸಾಧಿಸಬಹುದು; ಆದರೆ ನಷ್ಟವಾಗಿರುವ ಸಂಸ್ಕೃತಿಯನ್ನು ಮರಳಿ ಗಳಿಸಲು ಅನೇಕ ವರ್ಷಗಳು ಬೇಕಾಗುತ್ತವೆ.
ರಾಷ್ಟ್ರೀಯತೆಯ ಅಭಾವವೇ ಅತ್ಯಂತ ದೊಡ್ಡ ಅಪಾಯ !
ಕೇವಲ ವಿದೇಶದಲ್ಲಿ ಶಿಕ್ಷಣ ಪಡೆದ ಮಾತ್ರಕ್ಕೆ ಪಾಶ್ಚಾತ್ಯರ ಪ್ರಭಾವ ಹೆಚ್ಚಾಯಿತು ಎಂದೇನಲ್ಲ, ಬದಲಿಗೆ ಭಾರತದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಂತಹ ಶೈಕ್ಷಣಿಕ ಸಂಸ್ಥೆಗಳಲ್ಲೂ ಸಾಮ್ಯವಾದಿ ವಿಚಾರಗಳ ಪ್ರಭಾವದಿಂದ ಇಂತಹ ವಿದ್ಯಾರ್ಥಿಗಳ ಧೈರ್ಯವು ದೇಶವಿರೋಧಿ ಘೋಷಣೆಗಳನ್ನು ಕೂಗುವುದು, ಭಾರತದ ರಾಷ್ಟ್ರೀಯ ಪುರುಷರನ್ನು ಕಡೆಗಣಿಸುವುದು, ಸಾಂವಿಧಾನಿಕ ಹುದ್ದೆಗಳಲ್ಲಿರುವ ವ್ಯಕ್ತಿಗಳಿಗೆ ಅಶ್ಲೀಲವಾಗಿ ಬೈಯ್ಯುವುದು ಮತ್ತು ಪೊಲೀಸ್-ಸೈನ್ಯವನ್ನು ಹೀಯಾಳಿಸುವ ಮಟ್ಟಕ್ಕೆ ತಲುಪಿದೆ. ಇಂತಹ ತಲೆಮಾರಿನವರು ಮುಂದೆ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸುವ ಬದಲು ರಾಷ್ಟ್ರವನ್ನು ವಿಭಜನೆಯೆಡೆಗೆ ಕೊಂಡೊಯ್ಯುವ ಅಪಾಯವೇ ಹೆಚ್ಚು. ಪ್ರಸ್ತುತ ಕಾಕ್ರೋಚ್ ಜನತಾ ಪಕ್ಷದ ಆಂದೋಲನದಲ್ಲಿ ಪಾಲ್ಗೊಂಡ ಯುವವರ್ಗದ ಒಲವು ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವುದರ ಕಡೆಗಿಂತ ಇರುವ ವ್ಯವಸ್ಥೆಯನ್ನೇ ಬುಡಮೇಲು ಮಾಡುವುದರ ಕಡೆಗೆ ಇರುವುದು ಕಂಡುಬಂದಿದೆ. ಇದರಿಂದ ವಿದೇಶದಲ್ಲಿ ಶಿಕ್ಷಣ ಪಡೆದವರ ಮೇಲೆ ಮಾತ್ರವಲ್ಲದೆ, ಭಾರತದ ಶಿಕ್ಷಣ ವ್ಯವಸ್ಥೆಯ ಮೇಲೂ ರಾಷ್ಟ್ರವಿರೋಧಿ ಮತ್ತು ಸಾಮ್ಯವಾದಿ ಶಕ್ತಿಗಳ ಪ್ರಭಾವವಿರುವುದು ಗೋಚರಿಸುತ್ತದೆ. ಆದುದರಿಂದ ವಿದೇಶದಲ್ಲಿರಲಿ ಅಥವಾ ದೇಶದೊಳಗೆ ಶಿಕ್ಷಣ ಪಡೆಯುವ ಯುವವರ್ಗವಿರಲಿ, ಅವರಲ್ಲಿ ರಾಷ್ಟ್ರೀಯತೆಯ ಭಾವನೆ ಮತ್ತು ಹಿಂದೂ ಧರ್ಮದ ಬಗ್ಗೆ ಶ್ರದ್ಧೆ ಮೂಡಿಸುವ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವುದೇ ಪ್ರತ್ಯೇಕತಾವಾದಿ ಶಕ್ತಿಗಳನ್ನು ತಡೆಯಲು ಇರುವ ಮೂಲ ಉಪಾಯವಾಗಿದೆ.
ಪ್ರಸ್ತುತ ವಿದೇಶಿ ಶಿಕ್ಷಣದ ಪ್ರಭಾವ ಭಾರತೀಯರ ಮೇಲೆ ಇದ್ದರೂ, ಒಂದು ಕಾಲವಿತ್ತು, ವಿದೇಶಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ನಲಂದಾ, ತಕ್ಷಶಿಲೆಯಂತಹ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಜನೆಗಾಗಿ ಭಾರತಕ್ಕೆ ಬರುತ್ತಿದ್ದರು. ಶಸ್ತ್ರಚಿಕಿತ್ಸೆಯ ಹರಿಕಾರರಾದ ಪ್ರಾಚೀನ ಭಾರತದ ಮಹರ್ಷಿ ಸುಶ್ರುತ, ಪರಮಾಣು ಸಿದ್ಧಾಂತದ ಜನ್ಮದಾತ ಮಹರ್ಷಿ ಕಣಾದ, ವಿಮಾನಶಾಸ್ತ್ರದ ಹರಿಕಾರ ಮಹರ್ಷಿ ಭಾರದ್ವಾಜ, ಗಣಿತಶಾಸ್ತ್ರದ ಹರಿಕಾರ ಭಾಸ್ಕರಾಚಾರ್ಯ ಅಥವಾ ಖಗೋಳಶಾಸ್ತ್ರದ ಜ್ಞಾನಿ ಆರ್ಯಭಟ, ಯೋಗದ ಜನಕ ಮಹರ್ಷಿ ಪತಂಜಲಿ - ಇದುವೇ ಭಾರತದ ನಿಜವಾದ ವೈಭವೋಪೇತ ಇತಿಹಾಸವಾಗಿದೆ. ಇಂದು ಪಾಶ್ಚಾತ್ಯರ ಸಂಶೋಧನೆಯ ಜಯಭೇರಿ ಮೊಳಗುತ್ತಿರುವುದು ಕಂಡುಬಂದರೂ, ಅದರ ಬೀಜಗಳು ಭಾರತದಲ್ಲೇ ಇವೆ ಎಂಬುದು ಅಷ್ಟೇ ಸತ್ಯ. ಭಾರತದ ಈ ಮಹಾನ್ ಪರಂಪರೆಯನ್ನು ನಾವು ಕಾಪಾಡಿಕೊಳ್ಳಬೇಕು. ಭೌತಿಕ ವಿಕಾಸವು ಸಾಧಿಸಲ್ಪಡುತ್ತಲೇ ಇರುತ್ತದೆ; ಆದರೆ ಭಾರತದ 'ವಿಶ್ವಗುರು' ಎಂಬ ಪರಿಚಯವು ಜ್ಞಾನಾರ್ಜನೆಯಿಂದ ಬಂದಿದೆ. ಜ್ಞಾನಾರ್ಜನೆಗಾಗಿರುವ ಜಿಜ್ಞಾಸೆ ಮತ್ತು ಸೂಕ್ಷ್ಮ ದೃಷ್ಟಿಯು ಅಧ್ಯಾತ್ಮದಲ್ಲಿದೆ. ಆದುದರಿಂದ ಭವಿಷ್ಯದಲ್ಲಿ 'ವಿದೇಶಗಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಹೋಗುವುದಿಲ್ಲ, ಬದಲಿಗೆ ಅಲ್ಲಿಂದ ಭಾರತಕ್ಕೆ ಉನ್ನತ ಶಿಕ್ಷಣ ಮತ್ತು ಆತ್ಮಜ್ಞಾನಕ್ಕಾಗಿ ವಿದ್ಯಾರ್ಥಿಗಳು ಬರುತ್ತಾರೆ' ಎಂಬ ಪರಿಚಯವನ್ನು ಮರಳಿ ಪಡೆದುಕೊಳ್ಳುವ ಜವಾಬ್ದಾರಿ ಭಾರತೀಯರ ಮೇಲಿದೆ. ಇದುವೇ ಸಮೃದ್ಧ ಭಾರತದ ನಿಜವಾದ ಗುರುತಾಗಿದೆ.

