- ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ಕೆ.ಎಮ್. ಶಿವಲಿಂಗೇ ಗೌಡ ಅವರ ಖೇದಕರ ಹೇಳಿಕೆ
- ಸ್ಥಳೀಯ ನಾಗರಿಕರ ವಿರೋಧದ ನಂತರ ಸಚಿವರಿಂದ ಸ್ಪಷ್ಟೀಕರಣ !
ಹಾಸನ - ಸರಕಾರಿ ಅಧಿಕಾರಿಗಳಿಗೆ ಗೌರವದಿಂದ (ಲಂಚ) ನೀಡುವುದು ಧರ್ಮವಾಗಿದೆ, ಎಂದು ಕಾಂಗ್ರೆಸ್ ಸರಕಾರದ ಸಚಿವ ಕೆ.ಎಮ್. ಶಿವಲಿಂಗೇ ಗೌಡ ಅವರು ಇಲ್ಲಿ ಆಯೋಜಿಸಿದ್ದ 'ಪ್ರಜಾ ಸೇವಾ ಆಂದೋಲನ' ಕಾರ್ಯಕ್ರಮದಲ್ಲಿ ಹೇಳಿದರು.
ಸಚಿವರ ಈ ಮಾತುಗಳನ್ನು ಕೇಳಿ ಆಕ್ರೋಶಗೊಂಡ ಸ್ಥಳೀಯ ಜನರು, 'ಸರಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ಮಾಡಿಸಿಕೊಳ್ಳಬೇಕಾದರೆ ಅಧಿಕಾರಿಗಳು ನೇರವಾಗಿ ಲಂಚಕ್ಕೆ ಬೇಡಿಕೆ ಇಡುತ್ತಾರೆ', ಎಂದು ಹೇಳುತ್ತಾ ಸಚಿವರ ಎದುರಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡರು. ಇದರಿಂದ ಅಲ್ಲಿ ನಿರ್ಮಾಣಗೊಂಡಿದ್ದ ಗೊಂದಲ ಮತ್ತು ಬಿಗುವಿನ ವಾತಾವರಣವನ್ನು ಶಾಂತಗೊಳಿಸಲು ಹಾಸನದ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿದರು. 'ನಿಯಮಬಾಹಿರವಾಗಿ ಜನರಿಂದ ಬಲವಂತವಾಗಿ ಹಣ ವಸೂಲಿ ಮಾಡುವುದನ್ನು ಸರಕಾರ ಸಹಿಸುವುದಿಲ್ಲ', ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಸಚಿವ ಶಿವಲಿಂಗೇ ಗೌಡ ಅವರು 'ನಾನು ಲಂಚದ ವಿಷಯವನ್ನು ಪ್ರಸ್ತಾಪಿಸಿಲ್ಲ, ಬದಲಿಗೆ ಅಧಿಕಾರಿಗಳಿಗೆ ನೀಡಬೇಕಾದ ಗೌರವದ ಬಗ್ಗೆ ಮತ್ತು ಮರ್ಯಾದೆಯ ಬಗ್ಗೆ ಮಾತ್ರ ಹೇಳಿದ್ದೆ', ಎಂದು ಹೇಳುತ್ತಾ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.

