('ಕಂಟೋನ್ಮೆಂಟ್' ಎಂದರೆ ಸೇನಾ ಶಿಬಿರ)
ಭಾಗ್ಯನಗರ (ತೆಲಂಗಾಣ) - ಇಲ್ಲಿನ 'ಸಿಕಂದರಾಬಾದ್ ಕಂಟೋನ್ಮೆಂಟ್'ನ ಅತ್ಯಂತ ಸುರಕ್ಷಿತ ಪ್ರದೇಶದಿಂದ ಒಟ್ಟು ೧೧ ಶಸ್ತ್ರಾಸ್ತ್ರಗಳು ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ. ಶಸ್ತ್ರಾಸ್ತ್ರಗಳಲ್ಲಿ ೪ ಎಕೆ-೪೭ ರೈಫಲ್‌ಗಳು, ೬ ಪಿಸ್ತೂಲ್‌ಗಳು ಮತ್ತು ೧ ವಿಶೇಷ ರೈಫಲ್ ಸೇರಿವೆ.
ಸೇನೆ ಮತ್ತು ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಶಸ್ತ್ರಾಸ್ತ್ರ ಕಳವಿನ ಹಿಂದೆ ಒಳಗಿನ ವ್ಯಕ್ತಿಯ ಕೈವಾಡವಿರುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ.
ಆಗಸ್ಟ್ ೩೦ ರ ರಾತ್ರಿ 'ಮದ್ರಾಸ್ ರೆಜಿಮೆಂಟ್' ಪ್ರದೇಶದ ಒಂದು ಕೊಠಡಿಯಲ್ಲಿ ಈ ಕಳವು ನಡೆದಿದೆ. ಈ ಪ್ರದೇಶವು ಅತ್ಯಂತ ಸುರಕ್ಷಿತವೆಂದು ಪರಿಗಣಿಸಲಾಗಿದ್ದು, ಇಲ್ಲಿ ಮುಖ್ಯವಾಗಿ ಸೈನಿಕರು ಮತ್ತು ಗುತ್ತಿಗೆ ಘಟಕಕ್ಕೆ ಸಂಬಂಧಿಸಿದ ಕೆಲವೇ ನಾಗರಿಕ ಸಿಬ್ಬಂದಿಗೆ ಮಾತ್ರ ಪ್ರವೇಶವಿರುತ್ತದೆ. ಪೊಲೀಸ್ ದೂರಿನ ಪ್ರಕಾರ ಅಪರಿಚಿತ ವ್ಯಕ್ತಿಗಳು ಸಂಬಂಧಪಟ್ಟ ಸ್ಥಳವನ್ನು ಪ್ರವೇಶಿಸಿ ಬೀಗ ಮುರಿದು ಬಾಗಿಲು ತೆರೆದಿದ್ದಾರೆ. ನಂತರ ಕೊಠಡಿಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಕಳವು ಮಾಡಿದ್ದಾರೆ. ಇಷ್ಟೊಂದು ಬಿಗಿ ಭದ್ರತೆಯ ಸ್ಥಳದಿಂದ ಈ ಶಸ್ತ್ರಾಸ್ತ್ರಗಳನ್ನು ಹೇಗೆ ಹೊರತೆಗೆಯಲಾಯಿತು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಸೈನಿಕರ ಕೆಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಕಾಣೆಯಾಗಿರುವುದು ಗಮನಕ್ಕೆ ಬಂದ ನಂತರ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ನಂತರ ಸೇನಾಧಿಕಾರಿಗಳು ಸಂಬಂಧಪಟ್ಟ ಪ್ರದೇಶಕ್ಕೆ ಬೀಗ ಜಡಿದಿದ್ದಾರೆ.

